ಲಕ್ಷ್ಮೇಶ್ವರ: ಕೋವಿಡ್ ಸೋಂಕು ತಡೆಗಟ್ಟುವಲ್ಲಿ ಸರ್ಕಾರದ ಬಳಿ ದುಡ್ಡಿನ ಕೊರತೆಯಿಲ್ಲ. ಸರ್ಕಾರ ಆರ್ಥಿಕವಾಗಿ ಸಬಲವಾಗಿದೆ ಮತ್ತು ಬೇಕಾದ ಎಲ್ಲ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಒಗ್ಗಟ್ಟು, ಸಮನ್ವಯತೆಯಿಂದ ಸರ್ಕಾರದ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಸೂಚಿಸಿದರು.
ಅವರು ಮಂಗಳವಾರ ಪುರಸಭೆ ಸಭಾಭವನದಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ಹೆಚ್ಚುತ್ತಿರುವ ಕೋವಿಡ್ ಸೋಂಕಿತರೆಲ್ಲರಿಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸುವುದು ಕಷ್ಟಸಾಧ್ಯವಾಗಬಹುದು. ಆದ್ದರಿಂದ ತಾಲೂಕು ಮಟ್ಟದಲ್ಲೇ ಚಿಕಿತ್ಸೆ ನೀಡಲು 30 ಬೆಡ್‌ಗಳ ತಾತ್ಕಾಲಿಕ ಆಸ್ಪತ್ರೆಯನ್ನು ಕ್ರಮವಾಗಿ ಸಿದ್ಧತೆ ಮಾಡಿಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರಿಗೆ, 10 ವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲು ಆದ್ಯತೆ ನೀಡಲಾಗುವುದು. ಆದ್ದರಿಂದ 2/3 ದಿನದಲ್ಲಿ ವರವಿ ಹತ್ತಿರದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿ ವರದಿ ಸಲ್ಲಿಸಬೇಕು. ಇನ್ನು ಅಂತರ ಜಿಲ್ಲೆ, ರಾಜ್ಯದಿಂದ ಬಂದವರಿಗೆ, ಸಂಪರ್ಕಿತರಿಗೆ ಮನೆಯಲ್ಲಿ ಇಲ್ಲವೇ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕು. ಕ್ವಾರಂಟೈನ್ ಗಳು ಜನವಸತಿ ಪ್ರದೇಶಗಳಿಂದ ಹೊರಗಿರಬೇಕು ಮತ್ತು ಸರ್ಕಾರದ ಮಾರ್ಗ ಸೂಚಿಯಂತೆ ಕ್ವಾರಂಟೈನ್‌ಗಳಲ್ಲಿ ಊಟ, ವಸತಿ, ಆರೋಗ್ಯ ವ್ಯವಸ್ಥೆ ಇರಬೇಕು. ತಾಲೂಕಿನಲ್ಲಿ ಕ್ವಾರಂಟೈನ್ ಅವ್ಯವಸ್ಥೆ ಬಗ್ಗೆ ವರದಿಯಾದರೆ ತಹಶೀಲ್ದಾರ್‌ರನ್ನೇ ಹೊಣೆ ಮಾಡುತ್ತೇನೆ ಎಂದು ಎಚ್ಚರಿಸಿದರು.
ಕೋವಿಡ್-19 ಸಂಬಂಧ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ಮಟ್ಟದ ಅಧಿಕಾರಿಗಳು ಯಾವುದೇ ಬಾರ್ಡರ್ ವಿಧಿ ಸಿಕೊಳ್ಳದೇ ಒಗ್ಗಟ್ಟಿನಿಂದ ಜವಾಬ್ದಾರಿಯುತವಾಗಿ ಕರ್ತವ್ಯ ನಿಭಾಯಿಸಬೇಕು. ಏನೇ ಸಮಸ್ಯೆ ಇದ್ದರೂ ಸೌಲಭ್ಯ ಬೇಕಿದ್ದರೂ ಜಿಲ್ಲಾಧಿಕಾರಿಗಳು, ಸ್ಥಳೀಯ ಶಾಸಕರು ಮತ್ತು ತಮ್ಮನ್ನು ನೇರವಾಗಿ ಸಂಪರ್ಕಿಸಬಹುದು ಎಂದರು.
ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ಯಲ್ಲಪ್ಪ ಗೊಣೆಣ್ಣನವರ, ತಾಪಂ ಇಒ ಎನ್.ಎಚ್. ಓಲೇಕಾರ, ತಾಲೂಕು ವೆದ್ಯಾ ಧಿಕಾರಿ ಸುಭಾಸ್ ದಾಯಗೊಂಡ. ಡಾ| ಚಂದ್ರು ಲಮಾಣಿ, ಗಿರೀಶ ಮರಡ್ಡಿ ಮಾಹಿತಿ ನೀಡಿ ಎರಡೂ ತಾಲೂಕಿನಲ್ಲಿ ಒಟ್ಟು 33 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಈಗಾಗಲೇ 17 ವ್ಯಕ್ತಿಗಳು ಗುಣಮುಖರಾಗಿದ್ದಾರೆ. 16 ಜನರು ಚಿಕಿತ್ಸೆಯಲ್ಲಿದ್ದು ಆರೋಗ್ಯವಾಗಿದ್ದಾರೆ ಯಾವುದೇ ಪ್ರಾಣಾಪಾಯವಾಗಿಲ್ಲ. ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ ಲಕ್ಷಣಗಳಿರುವ ವ್ಯಕ್ತಿಗಳಿಗೆ ಬೇಕಾದ ಔಷಧಿಗಳು ಲಭ್ಯವಿವೆ. ತಾಲೂಕು ಮಟ್ಟದಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ವರದಿ ನೀಡಿ ಸಚಿವರಿಂದ ಶಹಬ್ಟಾಸ್‌ಗಿರಿ ಪಡೆದರು.
ಜನತೆಗೆ ಸಚಿವರ ಮನವಿ: ಕೋವಿಡ್ ವೈರಸ್ ಪ್ರಭಾವ ತಡೆಗಟ್ಟಲು ಸರ್ಕಾರದ ಮಾರ್ಗಸೂಚಿ, ನಿರ್ಣಯದ ಜತೆಗೆ ಜನರ ಸಹಕಾರ ಅತ್ಯಗತ್ಯವಾಗಿದೆ. ಜನತೆ ಪ್ರವಾಸ, ಮದುವೆ, ಮುಂಜಿ, ಸಭೆ, ಸಮಾರಂಭ ಇತರೆಲ್ಲ ಜನ ಸೇರುವ ಕಾರ್ಯಕ್ರಮನ್ನು ಮುಂದೂಡಬೇಕು. ನಮ್ಮ ಆರೋಗ್ಯದ ಜತೆಗೆ ಕುಟುಂಬದ, ಊರಿನ ಜನರ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಮಾರ್ಕೆಟ್‌ನಲ್ಲಿ ಜನಸಂದಣಿ ಕಡಿಮೆಯಾಗಬೇಕು. ಅಕ್ಕಪಕ್ಕದ ಮನೆಗೆ ಅಂತರ ಜಿಲ್ಲೆ, ರಾಜ್ಯದಿಂದ ಯಾರಾದರೂ ಆಗಮಿಸಿದ್ದರೆ ಕೂಡಲೇ ಸ್ಥಳೀಯ ಅಧಿಕಾರಿಗಳು ಮಾಹಿತಿ, ತಿಳಿವಳಿಕೆ ನೀಡಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ವ್ಯಕ್ತಿಗತ ಅಂತರ ಕಾಯಬೇಕು ಎಂದು ಮನವಿ ಮಾಡಿದರು.
ಶಾಸಕ ರಾಮಣ್ಣ ಲಮಾಣಿ, ಜಿಲ್ಲಾ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿವೈಎಸ್‌ಪಿ ಎಸ್.ಕೆ. ಪ್ರಹ್ಲಾದ, ಸಿಪಿಐ ವಿಕಾಸ ಪಿ.ಎಲ್., ಪುರಸಭೆ ಮುಖ್ಯಾಧಿಕಾರಿಗಳಾದ ಆರ್.ಎಂ. ಪಾಟೀಲ, ಮಲ್ಲೇಶ ಎಂ., ಪಿಎಸ್‌ಐಗಳಾದ ಶಿವಯೋಗಿ ಲೋಹಾರ, ಸುನೀಲಕುಮಾರ ನಾಯಕ, ಕಂದಾಯ ನಿರೀಕ್ಷಕರಾದ ಎಸ್.ಎಸ್. ಪಾಟೀಲ, ಎಂ.ಬಿ. ಮುಗದೂಮ, ಆನಂದ ಬದಿ, ಮಂಜುನಾಥ ಮುದಗಲ್, ಸಿಡಿಪಿಒ ಮೃತ್ಯುಂಜಯ ಎಚ್. ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.