Advertisement

ರಾಷ್ಟ್ರೀಯ ನಾಯಕರ ಗೈರು: ವಾಕ್ಸಮರ

01:14 AM Jan 24, 2019 | |

ಬೆಂಗಳೂರು: ಶಿವಕುಮಾರ ಸ್ವಾಮೀಜಿ ಕ್ರಿಯಾ ವಿಧಿ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಹಾಗೂ ಬಿಜೆಪಿಯ ರಾಷ್ಟ್ರೀಯ ನಾಯಕರು ಯಾರೂ ಬಾರದ ಬಗ್ಗೆ ಎರಡೂ ಪಕ್ಷಗಳ ರಾಜ್ಯ ನಾಯಕರ ನಡುವೆ ಮಾತಿನ ಸಮರ ಆರಂಭವಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಆಗಮಿಸದಿರುವ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದು, ಸಿನಿಮಾ ನಟರು ಹಾಗೂ ಸೆಲೆಬ್ರೆಟಿಗಳ ಕಾರ್ಯಕ್ರಮಕ್ಕೆ ಹೋಗುವ ಪ್ರಧಾನಿಯವರು ಶ್ರೀಗಳ ಅಂತಿಮ ದರ್ಶನ ಪಡೆಯಲು ಬರಲಿಲ್ಲ. ಇಡೀ ದೇಶವೇ ಶ್ರೀಗಳನ್ನು ಕಾಣಲು ಆಗಮಿಸಿದ್ದರೂ, ಪ್ರಧಾನಿ ಮಾತ್ರ ಬಾರದೇ ಇದ್ದುದು ಸರಿಯಲ್ಲ. ಅವರು ಪ್ರಧಾನಿಯಂತ ಹುದ್ದೆಯಲ್ಲಿದ್ದರೂ ಆಗಮಿಸದೇ ಇರುವುದು ಶ್ರೀಗಳಿಗೆ, ಸಮಾಜಕ್ಕೆ ಅಗೌರವ ತೋರಿದಂತೆ. ಎರಡು ವರ್ಷಗಳ ಹಿಂದೆಯೇ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಮನವಿ ಮಾಡಿದ್ದೇವು. ಪ್ರಧಾನಿಯವರು ಯಾವುದಕ್ಕೂ ಸ್ಪಂದಿಸಿಲ್ಲ. ಇದು ಇಡೀ ಸಮಾಜಕ್ಕೆ ತೋರುವ ಅಗೌರವ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಮೇಶ್ವರ್‌ ಹೇಳಿಕೆಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದು, ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಯಾಕೆ ಬರಲಿಲ್ಲ ಎಂದು ಹೇಳಬೇಕು ಎಂದು ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.

ಸೋನಿಯಾ ಗಾಂಧಿ ಅವರು ಶೋಕ ಸಂತಾಪದಲ್ಲಿ ಸ್ವಾಮೀಜಿಯವರನ್ನು ಲಿಂಗಾಯತ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಪರಮೇಶ್ವರ್‌ ಕಾಂಗ್ರೆಸ್‌ನಲ್ಲಿ ಕಳೆದುಹೋಗುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ವಿಧಾನ ಪರಿಷತ್‌ ಸದಸ್ಯ ವೈ. ಎ. ನಾರಾಯಣಸ್ವಾಮಿ, ಉಪ ಮುಖ್ಯಮಂತ್ರಿಯಾಗಿದ್ದವರು ಈ ರೀತಿಯ ಹೇಳಿಕೆ ನೀಡಿರುವುದು ವಿಷಾದನೀಯ. ಪರಮೇಶ್ವರ್‌ಗೆ ತಾವು ಕಾಂಗ್ರೆಸ್‌ನಲ್ಲಿ ಕಳೆದು ಹೋಗುತ್ತಿರುವ ಭೀತಿ ಇರಬಹುದು. ಹಾಗಾಗಿ ಎಲ್ಲರಿಗಿಂತ ಮೊದಲು ಟೀಕೆ ಮಾಡಬೇಕೆಂಬ ಉಮೇದಿನಲ್ಲಿ ಟ್ವೀಟ್ ಮಾಡಿದಂತಿದೆ. ಅವರು ಆರೋಪ ಮಾಡಿದಂತೆ ನಾವು ರಾಹುಲ್‌, ಸೋನಿಯಾ ಗಾಂಧಿ, ಮನಮೋಹನ್‌ ಸಿಂಗ್‌ ಯಾಕೆ ಬಂದಿಲ್ಲ ಎಂದು ಕೇಳುವುದಿಲ್ಲ.

Advertisement

ಇನ್ನೊಂದೆಡೆ ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿಯವರು ಲಿಂಗಾಯತ ಸಮುದಾಯದವರ ದು:ಖದಲ್ಲಿ ಭಾಗಿಯಾಗುವುದಾಗಿ ಹೇಳುವ ಮೂಲಕ ಸ್ವಾಮೀಜಿಯವನ್ನು ಒಂದು ಜಾತಿಗೆ ಸೀಮಿತಗೊಳಿಸಿರುವುದು ಖಂಡನೀಯ ಎಂದು ತಿರುಗೇಟು ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ರಾಷ್ಟ್ರೀಯ ನಾಯಕರ ಗೈರಿನ ಬಗ್ಗೆ ವಿವಾದ ಬೆಳೆಸದೆ ಪ್ರಧಾನಿಯವರಿಗೆ ಕಾರ್ಯಕ್ರಮಗಳ ಒತ್ತಡ ಇರುವುದರಿಂದ ಬರಲು ಆಗದಿರಬಹುದು ಎಂದು ಸಮಜಾಯಿಸಿ ನೀಡುವ ಪ್ರಯತ್ನ ನಡೆಸಿದ್ದಾರೆ.

ಆದರೆ, ಗೃಹ ಸಚಿವ ಎಂ.ಬಿ.ಪಾಟೀಲ್‌ ಪ್ರಧಾನಿ ಮೋದಿ ಅವರ ಗೈರು ಹಾಜರಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಈ ಬಗ್ಗೆ ಮಾತನಾಡಿದರೆ,ಅನಗತ್ಯ ಗೊಂದಲ ಸೃಷ್ಠಿಯಾಗುತ್ತದೆ. ನಾನು ವಿವಾದ ಮಾಡಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next