ರಬಕವಿ-ಬನಹಟ್ಟಿ: ಬಡತನ ಮತ್ತು ದುರ್ಬಲತೆ ವಿರುದ್ಧ ಹೋರಾಡಲು ಮತ್ತು ಬಾಲ ಕಾರ್ಮಿಕತೆ ನಿರ್ಮೂಲನೆ ಮಾಡಲು ಸರಕಾರಿ ಸಾಮಾಜಿಕ ರಕ್ಷಾ ವ್ಯವಸ್ಥೆಗಳು ಅತ್ಯಗತ್ಯ ಎಂದು ಬನಹಟ್ಟಿಯ ದಿವಾಣಿ ನ್ಯಾಯಾಧಿಧೀಶರಾದ ಸುಷ್ಮಾ ಟಿ.ಸಿ. ಹೇಳಿದರು.
ಚಿಮ್ಮಡ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಶಾಲಾ ಸಭಾ ಭವನದಲ್ಲಿ ಜಿಪಂ., ತಾಪಂ ಹಾಗೂ ಚಿಮ್ಮಡ ಗ್ರಾಮ ಪಂಚಾಯಿತಿ ಅಶ್ರಯದಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮ ಸಭೆ, ವಿಶ್ವಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾದರು.
ಬಾಲ್ಯವೆಂಬುದು ಪ್ರತಿಯೊಬ್ಬರ ಜೀವನದ ಅತ್ಯಮೂಲ್ಯ ಘಟ್ಟವಾಗಿದೆ. ಬಾಲ್ಯದ ಘಟನಾವಳಿಗಳನ್ನು ಜೀವನಪರ್ಯಂತ ಮರೆಯಲು ಸಾಧ್ಯವಿಲ್ಲ. ಮಕ್ಕಳು ಬಾಲ್ಯವನ್ನು ಸಂತಸದಿಂದ ಕಳೆಯಬೇಕು. ಶಿಕ್ಷಣ ಪಡೆದು ಬೆಳೆದು, ಸಾಧಕರಾಗಿ ಹೊರಹೊಮ್ಮಬೇಕು ಎಂದರು.
ಗ್ರಾಮದ 16ಶಾಲೆಗಳ ಮಕ್ಕಳ ಧ್ವನಿ ಪೆಟ್ಟಿಗೆಯನ್ನು ರಬಕವಿ-ಬನಹಟ್ಟಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಂಜಯ ಹಿಪ್ಪರಗಿ ಉದ್ಘಾಟಿಸಿ, ಪೆಟ್ಟಿಗೆಯಲ್ಲಿದ್ದ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು. ಗ್ರಾಮ ಪಂಚಾಯಿತಿಯಿಂದ ಶಾಲೆಗಳಿಗೆ ಅವಶ್ಯಕ ಸೌಲಭ್ಯಗಳನ್ನು ಒದಗಿಸುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ಕವಟಿ ಭರವಸೆ ನೀಡಿದರು.
ಬನಹಟ್ಟಿ ಠಾಣಾಧಿಕಾರಿ ಸುರೇಶ ಮಂಟೂರ ಮಾತನಾಡಿ, ಮಕ್ಕಳ ಹಕ್ಕುಗಳು, ರಕ್ಷಣೆ, ಜವಾಬ್ದಾರಿ ಕುರಿತು ಮಾತನಾಡಿದರು. ಬನಹಟ್ಟಿಯ ಸಹಾಯಕ ಸರಕಾರಿ ಅಭಿಯೋಜಕ ಮಹಾಂತೇಶ ಮಸಳಿ ಮಾತನಾಡಿದರು. ವಿದ್ಯಾರ್ಥಿನಿ ಸುಪ್ರಿಯಾ ಎಂ. ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಮಿಕ ನಿರೀಕ್ಷಕರಾದ ಪಿ.ವ್ಹಿ.ಮಾವರ್ಕರ್ ಉಪನ್ಯಾಸ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಉಪಾಧ್ಯಕ್ಷ ರಾಜು ಗೂಗಾಡ, ನ್ಯಾಯವಾದಿ ಪವನ ಢವಳೇಶ್ವರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾರತಿ ಬರಗಲ್ಲ, ಅಭಿವೃದ್ಧಿ ಅಧಿ ಕಾರಿ ಸಂಗಮೇಶ ಸೋರಗಾಂವಿ, ತೇರದಾಳ ಕಂದಾಯ ನಿರೀಕ್ಷಕ ಪಿ.ಆರ್. ಮಠಪತಿ, ವಿದ್ಯಾರ್ಥಿನಿ ರಶ್ಮಿ ಶೇಖರ ದಡೂತಿ ವೇದಿಕೆಯಲ್ಲಿದ್ದರು.
ಶಿಕ್ಷಣ ಸಂಯೋಜಕ ಎಸ್.ಬಿ.ಬುರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಬನಶಂಕರಿ ಜನಪದ ಸಂಪ್ರದಾಯ ಕಲಾ ಸಂಘ ಕೆರೂರ ಇವರಿಂದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಜಾಗೃತಿ ಮೂಡಿಸುವ ಕಿರುನಾಟಕ ಪ್ರದರ್ಶಿಸಿದರು. ಸಹನಾ ಉಪ್ಪಲದಿನ್ನಿ, ಸಹನಾ ಯರಗಟ್ಟಿಕರ ಪ್ರಾರ್ಥಿಸಿದರು. ಸಿಆರ್‌ಪಿ ದಾಕ್ಷಾಯಣಿ ಮಂಡಿ ಸ್ವಾಗತಿಸಿದರು. ಮಂಜುಳಾ ಹನಗಂಡಿ ನಿರೂಪಿಸಿದರು. ಶಿಕ್ಷಕ ಮ.ಕೃ. ಮೇಗಾಡಿ ವಂದಿಸಿದರು.