Advertisement

ಕಲೋಪಾಸನಾದಲ್ಲಿ ಶಾಸ್ತ್ರೀಯ ಗಾಯನದ “ಅಭಿಷೇಕ’ 

06:00 AM Jun 01, 2018 | Team Udayavani |

ಶಿಸ್ತುಬದ್ಧವಾದ ಪಾರಂಪರಿಕ ಪಾಠದೊಂದಿಗೆ ಬಳುವಳಿಯಾಗಿ ಬಂದ ಪ್ರತಿಭೆ. ಹೊಸತನದ ತುಡಿತದೊಂದಿಗೆ ಸತಃ ಅನುಭವಿಸಿ ಹಾಡುವ  ಕಲೆಗಾರಿಕೆ ಇವರ ವೈಶಿಷ್ಟ್ಯ 

Advertisement

ಕಲೋಪಾಸನಾ ಸಾಂಸ್ಕೃತಿಕ ಕಲಾ ಸಂಭ್ರಮ ಪುತ್ತೂರಿನ ಎಸ್‌ಡಿಪಿ ರೆಮೆಡೀಸ್‌ ಮತ್ತು ರೀಸರ್ಚ್‌ ಸೆಂಟರ್‌ನ ಸಂಸ್ಥಾಪಕ ಹಾಗೂ ಮಾರ್ಗದರ್ಶಕರಾದ ಡಾ| ಹರಿಕೃಷ್ಣ ಪಾಣಾಜೆಯವರ ಸಮಾಜಮುಖಿ ಚಟುವಟಿಕೆಗಳ ಫ‌ಲವಾಗಿ ಹದಿನಾಲ್ಕು ವರ್ಷಗಳಿಂದ ಚಟುವಟಿಕೆಗಳನ್ನು ಅನೂಚಾನವಾಗಿ ನಡೆಸುತ್ತಾ ಅನೇಕ ಪ್ರಖ್ಯಾತ ಕಲಾವಿದರುಗಳನ್ನು ಪುತ್ತೂರಿಗೆ ಪರಿಚಯಿಸಿದೆ. 

ಈ ಸಾಲಿನ ಪ್ರಥಮ ಕಾರ್ಯಕ್ರಮ ವಿದ್ವಾನ್‌ ಅಭಿಷೇಕ್‌ ರಘುರಾಮ್‌ ಚೆನ್ನೈ ಇವರ ಕರ್ನಾಟಕ ಶಾಸ್ತ್ರೀಯ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಂಡಿತು. ಶಿಸ್ತುಬದ್ಧವಾದ ಪಾರಂಪರಿಕ ಪಾಠದೊಂದಿಗೆ ಬಳುವಳಿಯಾಗಿ ಬಂದ ಪ್ರತಿಭೆಯೊಂದಿಗೆ ಹೊಸತನಕ್ಕಾಗಿನ ತುಡಿತ ಅವರ ಕಾರ್ಯಕ್ರಮದುದ್ದಕ್ಕೂ ವೇದ್ಯವಾಯಿತು. ಪುಂಖಾನುಪುಂಖವಾಗಿ ಹೊರಹೊಮ್ಮುವ ಕಲ್ಪನಾ ವಿಲಾಸಗಳನ್ನು ಸ್ವತಃ ಅನುಭವಿಸಿ ಸಂತೋಷಪಡುತ್ತಾ ಸಹವಾದಕರನ್ನು ಅಚ್ಚರಿಗೆ ಕೆಡವುತ್ತಾ ಶ್ರೋತೃಗಳನ್ನು ತುದಿಗಾಲಲ್ಲಿ ನಿಲ್ಲಿಸುತ್ತಾ ಸಾಗುವ ಇವರ ಕಾರ್ಯಕ್ರಮ ಒಂದು ವಿಶಿಷ್ಟ ಅನುಭವ.

ವಾತಾಪಿ ಗಣಪತಿಯನ್ನು ನೆನೆಯುತ್ತಾ ಮುಂದೆ ದರ್ಬಾರ್‌ ರಾಗವನ್ನು ಆಯ್ದುಕೊಂಡು “ಯೋಚನಾ ಕಮಲ ಲೋಚನಾ’ವನ್ನು ಕಲ್ಪನಾಸ್ವರಗಳೊಂದಿಗೆ ಮುಂದಿರಿಸಿದಾಗ ಮುಂದೆ ಬರಲಿರುವ ಕಲ್ಯಾಣಿಯ “ಪಂಕಜಲೋಚನ’ ಅದ್ಭುತ ಎನ್ನಬಹುದಾದ ನಿರ್ವಹಣೆಯ ಕುರುಹು ಯಾರಿಗೂ ಆಗದಿದ್ದುದು ಸಹಜವೇ. ಕಲ್ಯಾಣಿಯ ರಾಗವಿಸ್ತಾರವನ್ನು ದೀರ್ಘ‌ವಾಗಿ ಎತ್ತಿಕೊಂಡು ಎಲ್ಲ ಸಾಂಪ್ರದಾಯಿಕ ಸಿದ್ಧ ಸಂಚಾರಗಳೊಂದಿಗೆ ಗೃಹಭೇದವನ್ನೂ ಮಾಡಿ ಮುಂದೆ ಕೃತಿಯ ಪ್ರಸ್ತುತಿಯಾಯಿತು. ‘ಬೃಂದಾವನ’ಎಂಬಲ್ಲಿ ಸಾಹಿತ್ಯ ವಿಸ್ತಾರ ಕೈಗೆತ್ತಿಕೊಂಡು ಎಳೆಎಳೆಯಾಗಿ ಬಿಡಿಸಿದ ವಿಚಾರ ವಿಧಾನ ವಿಶಿಷ್ಟವಾಗಿತ್ತು. 

ಮುಂದೆ ಬಂದ ಕಲ್ಪನಾಸ್ವರದ ನಿರ್ವಹಣೆ ಅಸಾಮಾನ್ಯವಾಗಿದ್ದು ಮಿಶ್ರಛಾಪು ತಾಳದ ಸೌಂದರ್ಯದ ಅನಾವರಣವಾಯಿತು. ಈ ಹಂತದಲ್ಲಿ ವಯಲಿನ್‌ ವಾದಕರಾದ ವಿಠಲ ರಂಗನ್‌, ಮೃದಂಗವಾದಕರಾಗಿದ್ದ ಜಯಚಂದ್ರರಾವ್‌ ಹಾಗೂ ಖಂಜಿರ ವಾದಕರಾಗಿದ್ದ ಗುರುಪ್ರಸನ್ನರೊಂದಿಗೆ ಕಲಾವಿದರು ನಡೆಸಿದ ಪ್ರೀತಿಯ ಕಾದಾಟ ಶ್ರೋತೃಗಳನ್ನು ತುದಿಗಾಲಲ್ಲಿ ನಿಲ್ಲಿಸಿತು. ಜಯಚಂದ್ರರಾವ್‌ ಹಾಗೂ ಗುರುಪ್ರಸನ್ನ ಮಿಶ್ರಛಾಪುತಾಳದಲ್ಲಿ ನಿರ್ವಹಿಸಿದ ತನಿ ಆವರ್ತನಕ್ಕೆ ವಿಶೇಷ ಗೌರವ ಸಲ್ಲಲೇಬೇಕು.

Advertisement

ಗುಡುಗುಮಿಂಚಿನ ನಂತರ ಬರುವ ಶಾಂತವಾದ ತುಂತುರು ಹನಿಯಂತೆ ನಂತರದ “ಮಾಯಮ್ಮ (ಆಹಿರಿ) ನ್ಯಾಯಮಾ ಮೀನಾಕ್ಷಿ’ಯಿಂದ ಮೊದಲ್ಗೊಂಡು ಹಿತವೆನಿಸಿತು. ಮುಂದೆ ಕುಮುದ ಕ್ರಿಯರಾಗದ ಅರ್ಧನಾರೀಶ್ವರನ ದರ್ಶನ ಮಾಡಿಸಿ ಅಲ್ಲಿಯೂ ‘ಅತ್ರಿ ಭೃಗು ವಸಿಷ್ಟಾದಿ’ ಎಂಬಲ್ಲಿ ಮತ್ತೆ ಕುಸುರಿ ಕೆಲಸ ಮಾಡಿ ಕರ್ನಾಟಕ ಕಾಪಿರಾಗದ ಸುಮಸಾಯಕವನ್ನು ಶ್ಲೋಕದೊಂದಿಗೆ ಮಂಡಿಸಿದರು. “ವಿಠಲ ಸಲಹೋ’ ಹಾಗೂ ಭುಜನಶಾಯಿನೊದೊಂದಿಗೆ ಸುಮಾರು ಮೂರು ಗಂಟೆಗಳಿಗೂ ಮಿಕ್ಕಿದ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.

ವಿ| ರಾಮಕೃಷ್ಣ ಭಟ್‌ ಯು.ಯಸ್‌.

Advertisement

Udayavani is now on Telegram. Click here to join our channel and stay updated with the latest news.

Next