Advertisement

ಅಭಿಷೇಕ ಅಮೋಘ ಸಾಧನೆ; ನಿತ್ಯ 140 ಕಿಮೀ ಸಂಚರಿಸಿ 7 ಚಿನ್ನದ ಪದಕ ಪಡೆದ!

05:46 PM Aug 02, 2023 | Team Udayavani |

ಬೆಳಗಾವಿ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಪುಟ್ಟ ಹಳ್ಳಿಯಿಂದ ನಿತ್ಯ 140 ಕಿಮೀ ಬಸ್‌ ನಲ್ಲಿ ಪ್ರಯಾಣ ಮಾಡಿ ರಾಜಧಾನಿ ಬೆಂಗಳೂರಿನ ಕಾಲೇಜಿನಲ್ಲಿ ಓದುತ್ತಿದ್ದ ಯುವಕನೊಬ್ಬ 7 ಚಿನ್ನದ ಪಡೆದು ಮಾದರಿಯಾಗಿದ್ದಾನೆ.

Advertisement

ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನ ಅಭಿಷೇಕ ಜಿ. ಮೆಕ್ಯಾನಿಕಲ್‌ ಎಂಜಿನಿಯರ್‌ ನಲ್ಲಿ ಚಿನ್ನದ ಹುಡುಗನಾಗಿ ಹೊರ ಹೊಮ್ಮಿದ್ದಾನೆ. ಚಿಂತಾಮಣಿ ತಾಲೂಕಿನ ತಳಗವಾರ ಎಂಬ ಪುಟ್ಟ ಹಳ್ಳಿಯಿಂದ ದಿನಾಲೂ 70 ಕಿಮೀ ಪ್ರಯಾಣ ಬೆಳೆಸಿ ಬೆಂಗಳೂರಿಗೆ ಬರುತ್ತಿದ್ದ. ಬೆಂಗಳೂರಿನಲ್ಲಿ ವಾಸಿಸುವುದು ದುಬಾರಿ ಆಗಿದ್ದರಿಂದ ಪ್ರತಿದಿನ ಹಳ್ಳಿಯಿಂದಲೇ ಬೆಂಗಳೂರಿಗೆ ಬಂದು ಹೋಗುತ್ತಿದ್ದ.

ತಂದೆ ಗಣಪತಿ ಕೆ.ಜಿ. ತಳಗವಾರ ಗ್ರಾಮದಲ್ಲಿಯೇ ಸ್ಟೇಷನರಿಯ ಗೂಡಂಗಡಿ ಇಟ್ಟುಕೊಂಡು ಮಗನನ್ನು ಓದಿಸಿದ್ದಾರೆ. ತಾಯಿ ಮಲ್ಲಿಕಾ ಗೃಹಿಣಿ. ಈ ದಂಪತಿಗೆ ಅಭಿಷೇಕ ಒಬ್ಬನೇ ಮಗ. ಚಿಕ್ಕಂದಿನಿಂದಲೂ ರ್‍ಯಾಂಕ್‌ ವಿದ್ಯಾರ್ಥಿ ಆಗಿರುವ ಅಭಿಷೇಕ ಜಿ. ಚಿಂತಾಮಣಿಯ ಕಿಶೋರ ವಿದ್ಯಾಭವನ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿ ಶೇ.90 ಹಾಗೂ ಆರ್‌.ಕೆ. ಪಿಯು ಕಾಲೇಜಿನಲ್ಲಿ ಪಿಯು ಓದಿ ಶೇ.93ರಷ್ಟು ಅಂಕ ಪಡೆದಿದ್ದು, ಈಗ ಬಿಇ ಪದವಿಯಲ್ಲಿಯೂ ಮೊದಲ ರ್‍ಯಾಂಕ್‌ ಗಳಿಸಿದ್ದಾನೆ.

ತಂದೆ-ತಾಯಿ ಕಷ್ಟಪಟ್ಟು ನನ್ನನ್ನು ಓದಿಸಿದ್ದಾರೆ. ಶ್ರಮ ಪಟ್ಟರೆ ಸಾಧನೆ ಮಾಡಲು ಸಾಧ್ಯವಿದೆ. ಮುಂದೆ ವಿದೇಶದಲ್ಲಿ ಎಂಎಸ್‌ ಮಾಡಬೇಕೆಂಬ ಕನಸಿದೆ. ಕಾಲೇಜು ಪ್ರಾಧ್ಯಾಪಕರ ಸಹಾಯ- ಸಹಕಾರದಿಂದ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಗಿದೆ ಎಂದು ಸಂತಸ ಹಂಚಿಕೊಂಡರು.

ಗುಡಿಕಲ್‌ ಸಾಯಿ ವಂಶಿಗೆ 7 ಬಂಗಾರ:
ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ವಿಭಾಗದ ಗುಡಿಕಲ್‌ ಸಾಯಿ ವಂಶಿ 7 ಚಿನ್ನ ಪಡೆದಿದ್ದಾರೆ. ತಂದೆ ಮುರಳಿ, ತಾಯಿ ಸುರೇಖಾ ಶಿಕ್ಷಕರಾಗಿದ್ದು,
ಆಂಧ್ರಪ್ರದೇಶದ ನೆಲ್ಲೂರು ಮೂಲದವರು. ಸಹೋದರ ಹರ್ಷಾ ಎಂ.ಟೆಕ್‌ ಓದುತ್ತಿದ್ದಾರೆ. ಗುಡಿಕಲ್‌ ಸಾಯಿ ವಂಶಿ ನಿತ್ಯ ಮೂರ್‍ನಾಲ್ಕು ಗಂಟೆ ಓದುತ್ತಿದ್ದರು.

Advertisement

ಕೀರ್ತನಾಗೆ ಚಿನ್ನ: ಬೆಂಗಳೂರಿನ ಬಿಎಂಎಸ್‌ಐಟಿ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ಟೆಲಿ ಕಮ್ಯನಿಕೇಷನ್‌ ವಿಭಾಗದಲ್ಲಿ ಕೀರ್ತನಾ ಆರ್‌. ಚಿನ್ನ ಪಡೆದಿದ್ದಾರೆ. ತಂದೆ ರಾಜು ಡಿ. ಒಟಿಐಎಸ್‌ನಲ್ಲಿ ಟೆಕ್ನಿಶಿಯನ್‌ ಆಗಿದ್ದು, ತಾಯಿ ರಂಜಿನಿ ವಿ. ಗೃಹಿಣಿ. ಮುಂದೆ ನೌಕರಿ ಮಾಡಬೇಕೆಂಬ ಕನಸು ಕಂಡಿದ್ದಾರೆ. ಕಠಿಣ ಶ್ರಮದಿಂದ ಓದಿದರೆ ರ್‍ಯಾಂಕ್‌ ಪಡೆಯಲು ಸಾಧ್ಯವಿದೆ. ಶಿಕ್ಷಕರು, ಸ್ನೇಹಿತರ ಸಹಾಯ ಬಹಳಷ್ಟಿದೆ ಎಂದು ಕೀರ್ತನಾ ಸಂತಸ ಹಂಚಿಕೊಂಡರು.

*ಭೈರೋಬಾ ಕಾಂಬಳೆ

ಪೊಲೀಸ್‌ ಪೇದೆ ಪುತ್ರನಿಗೆ 7 ಚಿನ್ನ
ಬಳ್ಳಾರಿಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ನಲ್ಲಿ ಕೆ.ಆರ್‌. ಸಂಪತ್‌ ಕುಮಾರ್‌ 7 ಚಿನ್ನ ಪಡೆದಿದ್ದಾರೆ. ತಂದೆ ರಮೇಶ ಕೆ. ಪೊಲೀಸ್‌ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಾಯಿ ಸುಶೀಲಾ ಕೆ.
ಗೃಹಿಣಿ. ತಂಗಿ ಪಲ್ಲವಿ ಬಿಇ ಓದುತ್ತಿದ್ದಾರೆ. ಸಂಪತಕುಮಾರ ಎಸ್ಸೆಸ್ಸೆಲ್ಸಿಯಲ್ಲಿ 9.2 ಹಾಗೂ ಪಿಯುಸಿಯಲ್ಲಿ ಶೇ. 85ರಷ್ಟು ಅಂಕ ಪಡೆದಿದ್ದಾರೆ. ಬಿಇ ಯಲ್ಲಿ ಮೊದಲ ರ್‍ಯಾಂಕ್‌ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಸಂಪತ್‌ ಕುಮಾರ ಯುಪಿಎಸ್‌ಸಿ ಮಾಡಬೇಕೆಂಬ ಕನಸು ಕಂಡಿದ್ದು, ಇದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಮೊದಲ ರ್‍ಯಾಂಕ್‌ ಪಡೆಯುವ ನಿರೀಕ್ಷೆ ಇತ್ತು. ಆದರೆ ಇಷ್ಟೊಂದು ಚಿನ್ನ ಸಿಗುತ್ತವೆ ಎಂಬ ನಿರೀಕ್ಷೆ ಇರಲಿಲ್ಲ ಎಂದರು.

ರೈತನ ಮಗನಿಗೆ ಬಂಗಾರದ ಫ‌ಸಲು
ಬೀದರ ಜಿಲ್ಲೆ ಭಾಲ್ಕಿಯ ರೈತನ ಮಗ ಮೆಕ್ಯಾನಿಕಲ್‌ ಎಂಜಿನಿಯರ್‌ನಲ್ಲಿ ರ್‍ಯಾಂಕ್‌ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ. ಭಾಲ್ಕಿಯ ಭೀಮಣ್ಣ ಖಂಡ್ರೆ ಇನ್‌ಸ್ಟಿಟ್ಯೂಟ್‌ ಆಪ್‌ ಟೆಕ್ನಾಲಾಜಿ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ನಲ್ಲಿ ಬಂಜಾರ ಸಮುದಾಯದ ವಿನೋದ ರಾಥೋಡ ಚಿನ್ನ ಪಡೆದಿದ್ದಾರೆ. ತಂದೆ ಶಂಕರ ರೈತರಾಗಿದ್ದು, ತಾಯಿ ಮಾಲನ ಬಾಯಿ ಗೃಹಿಣಿ. ನಾಲ್ಕು ಜನ ಗಂಡು ಮಕ್ಕಳಲ್ಲಿ ವಿನೋದ ಚಿಕ್ಕವನು. ನಾಲ್ವರು ಮಕ್ಕಳಲ್ಲಿ ಎರಡನೇ ಮಗ ಗಣೇಶ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನಿಬ್ಬರು ಮಕ್ಕಳಾದ ರಾಜಕುಮಾರ ಹಾಗೂ ಪ್ರೇಮಕುಮಾರ ಕೂಲಿ ಕೆಲಸ ಮಾಡುತ್ತಿದ್ದಾರೆ. ಬಡತನದಲ್ಲಿಯೇ ಚಿಕ್ಕ ಮಗ ವಿನೋದನನ್ನು ಚೆನ್ನಾಗಿ ಓದಿಸಿದ್ದಾರೆ. ವಿನೋದ ಚಿಕ್ಕಂದಿನಿಂದಲೂ ಪ್ರತಿಭಾವಂತ.
ಎಸ್ಸೆಸ್ಸೆಲ್ಸಿಯಲ್ಲಿ ಶೇ.83 ಹಾಗೂ ಪಿಯುಸಿಯಲ್ಲಿ ಶೇ.86 ಅಂಕ ಪಡೆದಿದ್ದಾರೆ. ಸದ್ಯ ಗುಜರಾತ್‌ನ ಸೂರತ ಎನ್‌ಐಟಿಯಲ್ಲಿ ಎಂ.ಟೆಕ್‌ ಓದುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next