Advertisement

ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ದಸರಾ ಗಜಪಡೆ

05:10 PM Oct 17, 2021 | Team Udayavani |

ಮೈಸೂರು: ಕಳೆದೊಂದು ತಿಂಗಳಿಂದ ದಸರಾ ಉತ್ಸವಕ್ಕಾಗಿ ತಾಲೀಮಿನಲ್ಲಿ ತಲ್ಲೀನವಾಗಿದ್ದ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಗಜಪಡೆ ಯಶಸ್ವಿಯಾಗಿ ಜಂಬೂ ಸವಾರಿಯನ್ನು ಮುಗಿಸಿ ವಿಶ್ರಾಂತಿ ಪಡೆದವು. 2ನೇ ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತ ಅಭಿಮನ್ಯು, ಇನ್ನಿತರ ಆನೆಗಳಿಗೆ ಬೆಳಗ್ಗೆಯೇ ಎಣ್ಣೆ ಹಚ್ಚಿ, ಬಿಸಿ ನೀರಿನ ಮಜ್ಜನ ಮಾಡಿಸಲಾಯಿತು. ಅಲ್ಲದೆ ಮುಂಜಾನೆ ಅವಲಕ್ಕಿ, ಬೆಲ್ಲ, ಕಾಯಿ, ಗ್ಲುಕೋಸ್ ಮಿಶ್ರಿತ ಪುಷ್ಕಳ ಆಹಾರ ನೀಡಿ ಬಳಿಕ ಹಸಿ ಹುಲ್ಲು, ಕುಸುರೆ, ಸೊಪ್ಪು, ಬೇಯಿಸಿದ ಧಾನ್ಯ ನೀಡಲಾಯಿತು.‌

Advertisement

ಸಲ್ಲಾಪದಲ್ಲಿ ತಲ್ಲೀನ: ಮುಂಜಾನೆಯೇ ಮಜ್ಜನ ಮಾಡಿ, ಪುಷ್ಕಳ ಆಹಾರ ಸೇವಿಸಿದ್ದ ಅಭಿಮನ್ಯು ಆನೆ, ತನಗಾಗಿ ನಿರ್ಮಿಸಿರುವ ಶೆಡ್‌ನ‌ಲ್ಲಿ ವಿಶ್ರಾಂತಿ ಪಡೆದ. ಈ ನಡುವೆ ಪಕ್ಕದಲ್ಲೇ ಇದ್ದ ರಾಂಪುರ ಆನೆ ಶಿಬಿರದ 48 ವರ್ಷದ ಚೈತ್ರಾಳನ್ನು ಆಗಾಗ ರಮಿಸುತ್ತ, ತನ್ನ ಸೊಂಡಿಲಿನಲ್ಲಿ ಆಕೆಯ ಕಿವಿಗೆ ಏನೇನೊ ಉಸುರುತ್ತಾ ಸರಸ ಸಲ್ಲಾಪದಲ್ಲಿ ನಿರತನಾಗಿದ್ದ. ಇತ್ತ ಪಕ್ಕದ ಶೆಡ್‌ನ‌ಲ್ಲಿದ್ದ ಧನಂಜಯ ಆನೆ, ಜೊತೆಗೆ ನಿಂತಿದ್ದ ರಾಂಪುರ ಆನೆ ಶಿಬಿರದ ಲಕ್ಷ್ಮೀ ಜೊತೆಗೆ ಚಿನ್ನಾಟದಲ್ಲಿ ತೊಡಗಿದ್ದ. ತನ್ನೆರೆಡು ಕೊಂಬಿನೊಳಗೆ ಲಕ್ಷ್ಮೀಯ ಸೊಂಡಿಲನ್ನು ಬಂಧಿಸಿ, ರಮಿಸುವ ದೃಶ್ಯ ಕಂಡುಬಂದಿತು.

ಅಭಿಮನ್ಯು – ಚೈತ್ರಾ, ಧನಂಜಯ-ಲಕ್ಷ್ಮೀ ಜೋಡಿಯ ರೊಮ್ಯಾಂಟಿಕ್‌ ದೃಶ್ಯಗಳಿಗೆ ಪ್ರವಾಸಿಗರು ಹುಬ್ಬೇರಿಸಿದರು. ಇದೆಲ್ಲದಕ್ಕೂ ಪರಿವೇ ಇಲ್ಲದಂತೆ ಅಶ್ವತ್ಥಾಮ ಆನೆ ತನ್ನ ಪಾಡಿಗೆ ಹಸಿ ಹುಲ್ಲನ್ನು ಮೆಲ್ಲುತ್ತಾ ವಿಶ್ರಾಂತಿ ಪಡೆದರೆ, ಗೋಪಾಲಸ್ವಾಮಿ ಮಾವುತ ಮತ್ತು ಕಾವಾಡಿಯ ಹಾರೈಕೆಯಲ್ಲಿದ್ದ. ಉಳಿದಂತೆ ಮದವೇರಿದ ಪ್ರತ್ಯೇಕ ವಾಸದಲ್ಲಿರುವ ವಿಕ್ರಮ ಆನೆಗೆ ಕಾವೇರಿ ಜೊತೆಯಾಗಿದ್ದು ವಿಶೇಷವಾಗಿತ್ತು.

ಪ್ರವಾಸದ ಖುಷಿಯಲ್ಲಿ ಮಾವುತರು: ದಸರಾ ಮಹೋತ್ಸವದಲ್ಲಿ ಭಾಗಿಯಾಗಿ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಮಾವುತರು ಮತ್ತು ಕಾವಾಡಿಗಳು ಮತ್ತು ಅವರ ತಮ್ಮ ಕುಟುಂಬದ 83 ಜನರು ಶನಿವಾರ ಪ್ರವಾಸದ ಸಂಭ್ರಮದಲ್ಲಿದ್ದರು. ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಒಂದು ದಿನದ ಪ್ರವಾಸದಲ್ಲಿ ರಂಗನತಿಟ್ಟು ಹಾಗೂ ಶ್ರೀರಂಗ ಪಟ್ಟಣ ಕೆಲ ಸ್ಥಳಗಳನ್ನು ನೋಡಿ ಖುಷಿಪಟ್ಟರು. ರಂಗನ ತಿಟ್ಟಿನಲ್ಲಿ ಬೋಟಿಂಗ್‌ ಕೂಡ ನಡೆಸಿದರು. ಮಾವುತರು, ಕಾವಾಡಿಗರು ರಂಗನತಿಟ್ಟಿನಲ್ಲಿ ಬೋಟಿಂಗ್‌ನಲ್ಲಿ ತೆರಳಿ ಪಕ್ಷಿಗಳನ್ನು ವೀಕ್ಷಿಸಿ ಖುಸಿಪಟ್ಟರು.

ಭೋಜನ ಕೂಟ: ಅರಣ್ಯ ಇಲಾಖೆಯು ಶನಿವಾರ ಆನೆ ಮಾವುತರು, ಕಾವಾಡಿಗರು ಹಾಗೂ ಕುಟುಂಬ ವರ್ಗದವರಿಗೆ ಭೋಜನ ಕೂಟ ಹಮ್ಮಿಕೊಂಡಿತ್ತು. ಪ್ರವಾಸ ಮುಗಿಸಿ ಮಧ್ಯಾಹ್ನ ಅರಮನೆಗೆ ಹಿಂದಿರುಗಿದ ಮಾವುತರು ಮತ್ತು ಕಾವಾಡಿಗಳು ಭೋಜನ ಕೂಟದಲ್ಲೂ ಭಾಗವಹಿಸಿ ಸಂಭ್ರಮಿಸಿದರು.

Advertisement

ಭರವಸೆ ಮೂಡಿಸಿದ ಅಶ್ವತ್ಥಾಮ: ಅಭಿಮನ್ಯು 2ನೇ ಬಾರಿಗೆ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದಾನೆ. ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸಿದ್ದ ಅಶ್ವತ್ಥಾಮ ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಭರವಸೆ ಮೂಡಿಸಿದ್ದಾನೆ. ಉಳಿದ ಆನೆಗಳು ಸ್ಪಂದಿಸಿ ದಸರಾ ಉತ್ಸವವನ್ನು ಯಶಸ್ವಿಗೊಳಿಸಿವೆ. ನಾಡಹಬ್ಬ ದಸರಾ ಉತ್ಸವದಲ್ಲಿ ಪಾಲ್ಗೊಂಡು ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಗೊಳಿಸಿದ ಗಜಪಡೆ ಯನ್ನು ಭಾನುವಾರ ಬೀಳ್ಕೊಡಲಾಗುವುದು ಎಂದು ಡಿಸಿಎಫ್ ಡಾ|.ವಿ.ಕರಿಕಾಳನ್‌ ತಿಳಿಸಿದ್ದಾರೆ.

ಇದನ್ನೂ ಓದಿ;- ಉತ್ತರಾಖಂಡದಲ್ಲಿ ಭಾರಿ ಮಳೆ ಎಚ್ಚರಿಕೆ : ತುರ್ತು ಪರಿಸ್ಥಿತಿಗೆ ಅಗತ್ಯ ವ್ಯವಸ್ಥೆ

ಸುರಕ್ಷಿತವಾಗಿ ಇಡಲಾಯಿತು: ಮೆರವಣಿಗೆಗೆ ರಾಜಪೋಷಾಕಿನೊಂದಿಗೆ ಸಿಂಗಾರಗೊಂಡಿದ್ದ ಆನೆಗಳ ಮೇಲಿದ್ದ ವಸ್ತುಗಳು, ಗೆಜ್ಜೆ, ಆಭರಣ ಇತ್ಯಾದಿಗಳನ್ನು ಅರಮನೆ ಕಚೇರಿಯ ಭದ್ರತಾ ಕೊಠಡಿಯಲ್ಲಿ ಶನಿವಾರ ಸುರಕ್ಷಿತವಾಗಿ ಇಡಲಾಯಿತು. ಅರಮನೆ ಮಂಡಳಿಯಿಂದ ನೀಡಲಾಗಿದ್ದ ಈ ಆಭರಣ, ಸಮವಸ್ತ್ರಗಳನ್ನು ಬನ್ನಿಮಂಟಪದಿಂದ ವಾಪಸ್‌ ಆದಾಗ ರಾತ್ರಿಯೇ ತೆಗೆದು ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿರುವ ಕೊಠಡಿಯಲ್ಲಿ ಇರಿಸಲಾಗಿತ್ತು.

ಅಭಿಮನ್ಯು ದರ್ಶನಕ್ಕೆ ಮುಗಿಬಿದ್ದ ಜನ-

ಅರಮನೆ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು, ಅಂಬಾರಿ ಆನೆಯಾದ ಕ್ಯಾಪ್ಟನ್‌ ಅಭಿಮನ್ಯುವನ್ನು ನೋಡಲು ಮುಗಿಬೀಳುತ್ತಿದ್ದರು. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಇದಕ್ಕೆ ಅವಕಾಶ ನೀಡದಿದ್ದಾಗ ದೂರದಿಂದಲೆ ಅಭಿಮನ್ಯು ನೋಡಿ ಖುಷಿ ಪಟ್ಟರು. ಅಲ್ಲಿಂದಲೇ ಫೋಟೋ ಕ್ಲಿಕ್ಕಿಸಿ ಕೊಂಡರು. ಬಳಿಕ ಪಕ್ಕದ ಶೆಡ್‌ಗೆ ಹೋಗಿ ಧನಂಜಯ, ಲಕ್ಷ್ಮೀ, ಅಶ್ವತ್ಥಾಮ ಆನೆಗಳನ್ನು ಸಮೀಪದಿಂದಲೇ ನೋಡಿ ಖುಷಿಪಟ್ಟರು.

 ಆನೆ ಶೆಡ್‌ ಬಳಿ ಪ್ರವಾಸಿಗರ ದಂಡು-

ಅಭಿಮನ್ಯು ಸೇರಿದಂತೆ ದಸರಾ ಆನೆಗಳನ್ನು ವೀಕ್ಷಿಸಲು ಸಾಕಷ್ಟು ಜನರು ಆಗಮಿಸಿದ್ದರು. ಕೆಲವರು ಆನೆಯ ಬಳಿ ನಿಂತು ಫೋಟೋ ತೆಗೆಸಿಕೊಂಡರು. ಬಳಿಕ ಆನೆಗಳ ಮಜ್ಜನ ನೋಡಿ ಸಂಭ್ರಮಿಸಿದರು. ಹಿರಿಯರು-ಕಿರಿಯರು ಎನ್ನದೆ ನೂರಾರು ಜನರು ಭೇಟಿ ನೀಡಿದ್ದರು. ಚಿಣ್ಣರ ಸಂಭ್ರಮವಂತೂ ಮುಗಿಲು ಮುಟ್ಟಿತ್ತು.

ಆನೆಗಳನ್ನು ಹತ್ತಿರದಿಂದ ನೋಡಿ ಖುಷಿ ಪಟ್ಟರು. ಆನೆ ಬಗ್ಗೆ ತಮ್ಮಲ್ಲಿದ್ದ ಕುತೂಹಲದ ಸಂಗತಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಂಡರು.

ಇಂದು ಗಜಪಡೆಗೆ ಬೀಳ್ಕೊಡುಗೆ-

ನಾಡಹಬ್ಬ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಸೆ.13ರಂದು ಮೈಸೂರಿಗೆ ಆಗಮಿಸಿ ಜಂಬೂ ಸವಾರಿ ಮೆರವಣಿಗೆಯನ್ನು ಯಶಸ್ವಿಗೊಳಿಸಿದ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆಗೆ ಅ.17 ರಂದು (ಇಂದು) ಸಾಂಸ್ಕೃತಿಕ ನಗರಿಯಿಂದ ಬೀಳ್ಕೊಡಲಾಗುತ್ತದೆ.ಜಂಬೂಸವಾರಿ ಯನ್ನು ಯಶಸ್ವಿಗೊಳಿಸಿದ ಮಾವುತರು ಮತ್ತು ಕಾವಾಡಿಗಳು ತಮ್ಮ ಕುಟುಂಬ ಹಾಗೂ ಆನೆಗಳೊಂದಿಗೆ ನಾಡಿನಿಂದ ಕಾಡಿನತ್ತ ಪಯಣ ಬೆಳೆಸಲಿದ್ದಾರೆ.

ಬೆಳಗ್ಗೆ 9.30 ರಿಂದ 10.20ರ ನಡುವೆ ಅನೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಬೀಳ್ಕೊಡುಗೆ ಸಂದರ್ಭ ಆನೆ ಮಾವುತರು ಮತ್ತು ಕಾವಾಡಿಗರಿಗೆ ಮೈಸೂರು ಅರಮನೆ ಮಂಡಳಿ ವತಿಯಿಂದ ಗೌರವ ಧನ ನೀಡಲಾಗುತ್ತದೆ.

2ನೇ ಬಾರಿಯೂ ಸೈ ಎನಿಸಿಕೊಂಡ ಕೂಬಿಂಗ್‌ ಸ್ಪೆಷಲಿಸ್ಟ್‌-

ಮೈಸೂರು: ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಎರಡನೇ ಬಾರಿಗೆ 750 ಕೆ.ಜಿ. ತೂಕದ ಅಂಬಾರಿಯನ್ನು ಯಶಸ್ವಿಯಾಗಿ ಹೊರುವ ಮೂಲಕ ಅಭಿಮನ್ಯು ಸೈ ಎನಿಸಿಕೊಂಡಿದ್ದಾನೆ.

ದಸರಾ ಗಜಪಡೆಯಲ್ಲಿ ಅಭಿಮನ್ಯುನಷ್ಟು ಧೈರ್ಯ, ಸಾಹಸ ತೋರುವ ಆನೆ ಮತ್ತೂಂದು ಇಲ್ಲ. ಅಲ್ಲದೆ, ಮಾವುತನ ಮಾತನ್ನು ಚಾಚೂ ತಪ್ಪದೆ ಪಾಲಿಸುವುದರಲ್ಲಿ ಅಭಿಮನ್ಯು ಎತ್ತಿದ ಕೈ. ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಸಾಕಷ್ಟು ಅನುಭವವನ್ನು ಅಭಿಮನ್ಯು ಹೊಂದಿರುವುದು ವಿಶೇಷ.

ಇದರಿಂದಾಗಿಯೇ ಹಿಂದಿನ ಅಂಬಾರಿ ಆನೆಗಳಾದ ಬಲರಾಮ, ಅರ್ಜುಜನನ ಅನುಪಸ್ಥಿತಿ ಕಾಡಲಿಲ್ಲ. ಸತತ 13 ವರ್ಷಗಳ ಕಾಲ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಹೊತ್ತ ಮತ್ತಿಗೋಡು ಶಿಬಿರದ ಬಲರಾಮ, ವಯಸ್ಸು ಹಾಗೂ ಕಣ್ಣಿನ ದೃಷ್ಟಿ ಕೊರತೆಯಿಂದ ಬಲರಾಮ 2011ರಲ್ಲಿ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ಪಡೆದ.

2012 ರಿಂದ 2019ರ ವರೆಗೆ ಬಳ್ಳೆ ಶಿಬಿರದ ಅರ್ಜುನ ಯಶಸ್ವಿಯಾಗಿ 8 ವರ್ಷಗಳ ಕಾಲ ಅಂಬಾರಿ ಹೊತ್ತ. ಇವನಿಗೆ 60 ವರ್ಷ ಆಗಿದ್ದ ಕಾರಣ ಕಳೆದ ವರ್ಷವೇ ನಿವೃತ್ತಿ ನೀಡಲಾಗಿತ್ತು. ಇನ್ನು ಬಲರಾಮ ಅಂಬಾರಿ ಹೊರುವ ಜವಾªರಿಯಿಂದ ನಿವೃತ್ತಿ ಪಡೆದಿದ್ದರೂ 2019ರವರೆಗೆ ನಿಶಾನೆ ಆನೆಯಾಗಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ. ಜನರ ಪ್ರಮುಖ ಆಕರ್ಷಣೆಯಾಗಿದ್ದ ಈ ಎರಡೂ ಆನೆಗಳನ್ನು ಕಳೆ ವರ್ಷದಿಂದ ದಸರೆಯಲ್ಲಿ ಕೈಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next