Advertisement

Ellige Payana Yavudo Daari Movie; ದಾರಿ ಹೊಸದಾಗಿದೆ ಗೆಲುವು ಬೇಕಾಗಿದೆ

10:26 AM Oct 25, 2024 | Team Udayavani |

ಕನ್ನಡ ಚಿತ್ರರಂಗದಲ್ಲಿ ಅಭಿನಯ ಎನ್ನುವುದು ಅನೇಕರಿಗೆ ರಕ್ತಗತವಾಗಿ ಬಂದಿದೆ ಎನ್ನಬಹುದು. ಒಂದೇ ಕುಟುಂಬದಲ್ಲಿ ತಲೆತಲಾಂತರಗಳಿಂದ ಕಲಾವಿದರು ಬರುತ್ತಲೇ ಇರುತ್ತಾರೆ. ಕನ್ನಡ ಸಿನಿಮಾಗಳಲ್ಲಿ ಹೊಸ ಅಲೆ ಸೃಷ್ಟಿಸಿದ ನಟ, ನಿರ್ದೇಶಕ ಕಾಶಿನಾಥ್‌ ಅವರ ಮಗ ಅಭಿಮನ್ಯು ಮತ್ತೆ ಸಿನಿಮಾ ಮೂಲಕ ಪ್ರೇಕ್ಷಕರೆದುರು ಕಾಣಿಸಿಕೊಳ್ಳುತ್ತಿದ್ದಾರೆ. ಅವರು ನಟಿಸಿದ “ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾ ಇಂದು ತೆರೆ ಕಾಣುತ್ತಿದೆ. ಈ ಹಿನ್ನೆಲೆ ನಟ ಅಭಿಮನ್ಯು, ಚಿತ್ರದ ಬಗ್ಗೆ ಒಂದಿಷ್ಟು ಮಾತು ಹಂಚಿಕೊಂಡಿದ್ದಾರೆ.

Advertisement

ಎಲ್ಲಿಗೆ ಪಯಣ ಸಿನಿಮಾ ಅವಕಾಶ ಹೇಗೆ ಬಂತು?

ಬಹು ದಿನಗಳ ನಂತರ ನಾನು ಮತ್ತೆ ಸಿನಿಮಾಗೆ ಬರಲು ನಿರ್ಧರಿಸಿದ್ದೆ. ಜಿಮ್‌ ವರ್ಕೌಟ್‌ ಸೇರಿ ಅದಕ್ಕಾಗಿ ಒಂದಿಷ್ಟು ತಯಾರಿಯಲ್ಲಿ ತೊಡಗಿಕೊಂಡಿದ್ದೆ. ನಿರ್ದೇಶಕ ಕಿರಣ್‌ ಸೂರ್ಯ ಗೂಗಲ್‌ನಲ್ಲಿ ನನ್ನದೊಂದು ಫೋಟೋ ನೋಡಿ, ಅವರ ಕಥೆಯ ಪಾತ್ರಕ್ಕೆ ಸೂಕ್ತವಾಗಬಹುದು ಎಂದು ನನ್ನನ್ನು ಆಯ್ಕೆ ಮಾಡಿದರು.

 ಇಲ್ಲಿ ನಿಮ್ಮ ಪಾತ್ರದ ವೈಶಿಷ್ಟ್ಯವೇನು, ಅದಕ್ಕೆ ತಯಾರಿ ಹೇಗಿತ್ತು?

ಸಿನಿಮಾದಲ್ಲಿ ನನ್ನ ಪಾತ್ರದ ಮನಸ್ಥಿತಿಯೇ ಬೇರೆ. ತನ್ನ ಕೆಲಸದಲ್ಲಿ ತುಂಬಾ ಮಗ್ನನಾಗುವ ಪಾತ್ರ. ಒಮ್ಮೆ ಕೆಲಸದಲ್ಲಿ ಮುಳುಗಿದರೆ, ಹೊರಗಿನ ಪ್ರಪಂಚದ ಅರಿವೇ ಇರುವುದಿಲ್ಲ. ಅವನಿಗೆ ಅವನ ಕೆಲಸವೇ ಮುಖ್ಯ. ತನ್ನ ಲೋಕದಲ್ಲೇ ಕಳೆದು ಹೋಗುತ್ತಾನೆ. ಚಿತ್ರದ ಪಾತ್ರಕ್ಕಾಗಿ ಉದ್ದವಾಗಿ ಕೂದಲು, ಗಡ್ಡ ಬಿಟ್ಟಿದ್ದೇನೆ. 5 ಕೆಜಿ ತೂಕ ಕಡಿಮೆ ಮಾಡಿಕೊಂಡೆ. ಒಂದು ಸನ್ನಿವೇಶಕ್ಕೆ ರಗಡ್‌ ಆಗಿ ಕಾಣಿಸಬೇಕಿತ್ತು, ಅದಕ್ಕಾಗಿ ಮತ್ತಷ್ಟು ವರ್ಕೌಟ್‌ ಮಾಡಿದೆ.

Advertisement

 ಸಿನಿಮಾದ ಕಥೆ ಯಾವ ರೀತಿಯದ್ದು?

ನೈಜ ಘಟನೆಯೊಂದರ ಪ್ರಭಾವ ಹಾಗೂ ಒಂದು ವೃತ್ತಿಯಲ್ಲಿರುವ ಮಹಿಳೆ ಇವೆರಡನ್ನು ಸೇರಿಸಿ ನಿರ್ದೇಶಕ ಕಿರಣ್‌ ಅವರು ಕಾಲ್ಪನಿಕ ಪಾತ್ರವನ್ನು ಚಿತ್ರಿಸಿದ್ದಾರೆ. ಇಲ್ಲಿ ನಾಯಕ ನಟಿಯೇ ಕೇಂದ್ರ ಬಿಂದು. ಅವಳ ಸುತ್ತ ಹಲವು ಪಾತ್ರಗಳು ಸಾಗುತ್ತವೆ. ಅದರಲ್ಲಿ ನನ್ನದೂ ಒಂದು. ಇಲ್ಲಿ ಸುಮ್ಮನೆ ಬಂದು ಹೋಗುವ ಪಾತ್ರಗಳಿಲ್ಲ. ಎಲ್ಲ ಅಂಶಗಳಿಗೆ ಮಹತ್ವ ನೀಡಲಾಗಿದೆ.

ಚಿತ್ರದ ಟ್ರೇಲರ್ನಲ್ಲಿ ನಗ್ನತೆಯ ಅಂಶಗಳಿವೆ. ಕುಟುಂಬ ಸಮೇತ ಸಿನಿಮಾ ನೋಡಬಹುದಾ?

ಎಲ್ಲ ಮಹಿಳೆಯರು ನೋಡಬೇಕಾದ ಸಿನಿಮಾವಿದು. ಟ್ರೇಲರ್‌ನಲ್ಲೇ ಒಂದು ಸಂಭಾಷಣೆ ಇದೆ. “ಒಂದು ಹುಡುಗಿ ಬಟ್ಟೆ ಬಿಚ್ಚಿ ಬೇಕಿದ್ರೂ ನಿಂತ್ಕೊತಾಳೆ. ಆದರೆ, ಅವಳು ಮನಸ್ಸು ಬಿಚ್ಚಿ ಮಾತಾಡೋದು ಮಾತ್ರ ಅವಳಿಗೆ ಇಷ್ಟ ಆಗುವವರ ಜೊತೆ ಮಾತ್ರ.’ ಈ ಸಂಭಾಷಣೆಯ ಒಳ ಅರ್ಥ ಸಿನಿಮಾದಲ್ಲಿದೆ. ಕುಟುಂಬ ಸಮೇತ ಸಿನಿಮಾ ನೋಡಬಹುದು.

ಯಾವ ಕಾರಣಕ್ಕೆ ಪ್ರೇಕ್ಷಕರು ಸಿನಿಮಾ ನೋಡಬೇಕು?

ಸಿನಿಮಾ ಆರಂಭದಿಂದ ಕ್ಲೈಮ್ಯಾಕ್ಸವರೆಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತೆ. ಇಲ್ಲಿ ಪ್ರೇಮ, ಥ್ರಿಲ್ಲರ್‌, ಸಸ್ಪೆನ್ಸ್‌, ಭಾವನಾತ್ಮಕ ಅಂಶಗಳಿವೆ. ಎಲ್ಲರಿಗೂ ಆಪ್ತವಾಗುವ ಸಿನಿಮಾ. ಕೊಡುವ ದುಡ್ಡಿಗೆ ಮೋಸ ಆಗಲ್ಲ. ಈಗಾಗಲೇ ಟ್ರೇಲರ್‌ ಹಾಗೂ ಚಿತ್ರದ ಕಥೆ, ತಾಂತ್ರಿಕ ಅಂಶಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಇಡೀ ಚಿತ್ರತಂಡದ ಶ್ರಮದಿಂದ ಸಿನಿಮಾ ಚೆನ್ನಾಗಿ ಮೂಡಿದೆ. ಪ್ರೇಕ್ಷಕರ ತೀರ್ಪಿಗೆ ಕಾಯುತ್ತಿರುವೆ.

ಕಾಶೀನಾಥ್ಅವರು ಸಲಹೆ ನೀಡಿದ್ದುಂಟೇ?

ಅಪ್ಪ ನನ್ನನ್ನು ಹೊರಗಡೆ ಕಲಿಯಲು ಬಿಟ್ಟಿದ್ದೇ ಜಾಸ್ತಿ. ನಟನೆ ಕಲಿಯುವುದಲ್ಲ, ಅನುಭವಿಸೋದು. ಹಾಗಾಗಿ ಹೀಗೆ ನಟಿಸು, ಹಾಗೆ ನಟಿಸಬೇಕು ಅಂತ ಅವರು ಹೇಳಿಕೊಟ್ಟಿಲ್ಲ. ಸಿನಿಮಾ ಜಗತ್ತಿಗೆ ಬಂದಾಗ ನನ್ನ ಅರಿವಿಗೆ ಬಂದಿದ್ದು, ನಟನೆ ಹೇಳಿಸಿಕೊಂಡು ಮಾಡುವುದಲ್ಲ, ಅನುಭವಿಸಿ ಮಾಡುವುದು. ಇದಕ್ಕೆ ಯಾವುದೇ ಸೂತ್ರ ಇಟ್ಟುಕೊಳ್ಳಬಾರದು.

ನಿತೀಶ ಡಂಬಳ

Advertisement

Udayavani is now on Telegram. Click here to join our channel and stay updated with the latest news.

Next