ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಹೊಟ್ಟೆ ಮಂಜ ಅಲಿಯಾಸ್ ನವೀನ್ ಕುಮಾರ್‌ನನ್ನು ಏ.16ರಂದು ಗುಜರಾತ್‌ನ ವಿಧಿ ವಿಜ್ಞಾನ ಪರೀಕ್ಷಾ ಕೇಂದ್ರದಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ನಿರ್ಧರಿಸಿದೆ.
ಈ ಮಧ್ಯೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಮಂಜ, ಮಂಪರು ಪರೀಕ್ಷೆಗೆ ನಿರಾಕರಿಸಿ ಏ.13ರಂದು ಪರಪ್ಪನ ಅಗ್ರಹಾರ ಕಾರಾಗೃಹ ಅಧೀಕ್ಷರಿಗೆ ಪತ್ರ ಬರೆದಿದ್ದು, ಪತ್ರವನ್ನು ಕೋರ್ಟ್‌ಗೆ ಸಲ್ಲಿಸುವಂತೆ ಮನವಿ ಮಾಡಿದ್ದಾನೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಜೈಲಿನ ಅಧಿಕಾರಿಗಳು, ಇದುವರೆಗೂ ಮಂಜನಿಂದ ಯಾವುದೇ ಪತ್ರ ಬಂದಿಲ್ಲ ಎಂದು ತಿಳಿಸಿದ್ದಾರೆ.
ಪತ್ರದಲ್ಲೇನಿದೆ?: ಗೌರಿ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ನನ್ನನ್ನು ಬಂಧಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಿ ಮಂಪರು ಪರೀಕ್ಷೆಗೆ ಕೋರ್ಟ್ ಅನುಮತಿ ಕೋರಿದ್ದರು. ನ್ಯಾಯಾಧೀಶರು ಈ ಬಗ್ಗೆ ನನ್ನ ಪ್ರತಿಕ್ರಿಯೆ ಕೇಳಿದಾಗ ನಿರಾಕರಿಸಿದ್ದೆ. ಆದರೆ, ಎಸ್‌ಐಟಿ ಅಧಿಕಾರಿಗಳು ಮಂಪರು ಪರೀಕ್ಷೆಗೆ ಒಪ್ಪಿಗೆ ಸೂಚಿಸದಿದ್ದರೆ ಜಾಮೀನು ಸಿಗುವುದಿಲ್ಲ ಎಂದು ನನಗೆ ಹೆದರಿಸಿದರು.
ಹೀಗಾಗಿ ಮುಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಪರೀಕ್ಷೆಗೆ ಒಪ್ಪಿಗೆ ಸೂಚಿಸಿದೆ. ನಂತರ ಈ ಬಗ್ಗೆ ಯೋಚಿಸಿದ್ದು, ಮಂಪರು ಪರೀಕ್ಷೆಗೆ ಒಳಗಾಗಲು ಇಷ್ಟವಿಲ್ಲ. ಹೀಗಾಗಿ ಈ ಪತ್ರವನ್ನು 3ನೇ ಎಸಿಎಂಎಂ ನ್ಯಾಯಾಲಯಕ್ಕೆ ತಲುಪಿಸಿ ಅನುಮತಿ ಆದೇಶವನ್ನು ಹಿಂಪಡೆಯಲು ಸಹಾಯ ಮಾಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಪತ್ರದ ಬಗ್ಗೆ ಅನುಮಾನ: ಹೊಟ್ಟೆ ಮಂಜ ಬರೆದಿರುವ ಪತ್ರದ ಬಗ್ಗೆ ಜೈಲಿನ ಅಧಿಕಾರಿಗಳಲ್ಲಿ ಹಲವು ಅನುಮಾನ ಮೂಡಿವೆ. ಒಂದೆಡೆ ಜೈಲಿನ ಹಿರಿಯ ಅಧಿಕಾರಿಗಳೇ “ನಮಗೆ ಯಾವುದೇ ಪತ್ರಗಳು ಸಿಕ್ಕಿಲ್ಲ’ ಎನ್ನುತ್ತಿದ್ದಾರೆ. ಮತ್ತೂಂದೆಡೆ ಮಂಜ ಜೈಲಿನ ಅಧೀಕ್ಷರಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಜೈಲಿನ ಅಧೀಕ್ಷಕರಿಗೆ ಸ್ಪಷ್ಟ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.