Advertisement

ಮನೆಗೇ ಪಡಿತರ ಕೈಬಿಟ್ಟ ಸರಕಾರ; ಆರ್ಥಿಕ ಹೊರೆ ಆತಂಕ

01:43 AM Nov 25, 2021 | Team Udayavani |

ಬೆಂಗಳೂರು: ಮನೆ ಬಾಗಿಲಿಗೆ ಪಡಿತರ ಪೂರೈಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸದ್ಯಕ್ಕೆ ಕೈಬಿಡಲು ರಾಜ್ಯ ಸರಕಾರ ತೀರ್ಮಾನಿಸಿದೆ.

Advertisement

ಆಂಧ್ರಪ್ರದೇಶದ ಮಾದರಿಯಲ್ಲಿ ಮಿನಿ ಟೆಂಪೋ ಅಥವಾ ಸರಕು ಸಾಗಣೆ ಆಟೋ ಗಳ ಮೂಲಕ ಕಾರ್ಡ್‌ದಾರರ ಮನೆಗೇ ಪಡಿತರ ಪೂರೈಸಲು ಎರಡು ಹಂತದ ಸಭೆ ನಡೆದಿತ್ತಾದರೂ ದಿಢೀರನೆ ಯೋಜನೆ ಕೈ ಬಿಡಲು ನಿರ್ಧರಿಸಲಾಗಿದೆ.

ರಾಜ್ಯದ 19,963 ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಯೋಜನೆ ಜಾರಿ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆದು ರೂಪರೇಖೆ ನಿಗದಿಪಡಿಸಲಾಗಿತ್ತು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಎರಡು ತಿಂಗಳಿ ನಿಂದ ಯೋಜನೆ ಜಾರಿಗೆ ತಯಾರಿ ಮಾಡಿ ಕೊಂಡಿತ್ತು. ಅದಕ್ಕಾಗಿ 540 ಕೋಟಿ ರೂ. ಹಾಗೂ 9,260 ವಾಹನಗಳ ವ್ಯವಸ್ಥೆ ಮಾಡಬೇಕಿತ್ತು. ಖಾಸಗಿ ಸಹಭಾಗಿತ್ವದ ಚಿಂತನೆಯೂ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಕೈಬಿಡಲು ತೀರ್ಮಾನಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಹೊಸ ವ್ಯವಸ್ಥೆಗೆ ನ್ಯಾಯಬೆಲೆ ಅಂಗಡಿ ಮಾಲಕರ ವಿರೋಧವೂ ಇತ್ತು. ನ್ಯಾಯಬೆಲೆ ಅಂಗಡಿಗಳಲ್ಲಿ ಮೈಸೂರು ಸ್ಯಾಂಡಲ್‌ ಸೋಪ್‌ ಸೇರಿದಂತೆ ಇತರ ಸಾಮಗ್ರಿಗಳ ಮಾರಾಟಕ್ಕೆ ಅವಕಾಶ ಕೊಡಲು ಸರಕಾರದ ಮುಂದೆ ಮನವಿ ಇಟ್ಟಿರುವಾಗ ಮನೆ ಬಾಗಿಲಿಗೆ ಪಡಿತರ ಪೂರೈಸುವುದರಿಂದ ನಮಗೆ ಸಮಸ್ಯೆಯಾಗಬಹುದು ಎಂದು ಅಸಮಾಧಾನ ಹೊರಹಾಕಿದ್ದರು.

ಇದನ್ನೂ ಓದಿ:ಗರೀಬ್‌ ಕಲ್ಯಾಣ ವಿಸ್ತರಣೆ: ಪ್ರಧಾನಿಗೆ ನಳಿನ್‌ ಕುಮಾರ್‌ ಕಟೀಲ್‌ ಧನ್ಯವಾದ

Advertisement

ಏನಿದು ಯೋಜನೆ?
ಆಂಧ್ರದಲ್ಲಿ ಮನೆಬಾಗಿಲಿಗೆ ಪಡಿತರ ಪೂರೈಸುತ್ತಿದ್ದು, ಇದರಿಂದ ಪಡಿತರದಾರರು ಪ್ರತೀ ತಿಂಗಳು ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲು ನಿಲ್ಲುವುದು ತಪ್ಪುತ್ತಿದೆ. ಗುಡ್ಡಗಾಡು ಪ್ರದೇಶ ಹಾಗೂ ಗ್ರಾಮಾಂತರ ಭಾಗದಲ್ಲಿ ನ್ಯಾಯಬೆಲೆ ಅಂಗಡಿಗೆ ಕಿ.ಮೀ. ಗಟ್ಟಲೆ ದೂರ ಬರುವುದೂ ತಪ್ಪುತ್ತಿದೆ.

ಕೈಬಿಡಲು ಕಾರಣವೇನು?
01ಸರಕಾರಕ್ಕೆ ಆರ್ಥಿಕವಾಗಿ ಹೊರೆಯಾಗುವ ಆತಂಕ
02ಪಾರದರ್ಶಕ ಪಡಿತರ ಪೂರೈಕೆ ಹಾಗೂ ನಿಗಾ ವಹಿಸುವುದು ಕಷ್ಟವಾಗಬಹುದು ಎಂಬ ಅಭಿಪ್ರಾಯ
03 ವಾಹನ ಹೋಗುವ ಸಮಯಕ್ಕೆ ಪಡಿತರದಾರರು ಮನೆಯಲ್ಲಿ ಇರದಿದ್ದರೆ ಹೇಗೆ ಎಂಬ ಪ್ರಶ್ನೆ
04 ನ್ಯಾಯಬೆಲೆ ಅಂಗಡಿ ವ್ಯವಸ್ಥೆ ಹಾಗೂ ಮನೆಗೆ ಪಡಿತರ ಪೂರೈಕೆ ಎರಡನ್ನೂ ಮುಂದು ವರಿಸುವುದು ಕಷ್ಟ ಎಂಬ ಅಭಿಪ್ರಾಯ
05 ನ್ಯಾಯಬೆಲೆ ಅಂಗಡಿ ಮಾಲಕರ ವಿರೋಧ

ನ. 1ರಂದೇ ಜಾರಿಯಾಗಬೇಕಿತ್ತು
ರಾಜ್ಯದಲ್ಲಿ 1.15 ಕೋಟಿ ಬಿಪಿಎಲ್‌, 21 ಲಕ್ಷ ಎಪಿಎಲ್‌, 10.89 ಲಕ್ಷ ಅಂತ್ಯೋದಯ ಸೇರಿ 1.47 ಕೋಟಿ ಪಡಿತರ ಕಾರ್ಡ್‌ಗಳಿದ್ದು ಎಲ್ಲರಿಗೂ ಮನೆ ಬಾಗಿಲಿಗೆ ಪಡಿತರ ಪೂರೈಸಲು ನಿರ್ಧರಿಸಲಾಗಿತ್ತು. 19,963 ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೊಳಿಸಲು ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆದು ಚರ್ಚಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನ. 1ರಂದು ಕರ್ನಾಟಕ ರಾಜ್ಯೋತ್ಸವದಂದು ಯೋಜನೆ ಜಾರಿಗೆ ಬರಬೇಕಿತ್ತು.

-ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next