ಮೂಡಿಗೆರೆ: ರಾಜ್ಯ ಸರಕಾರ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡುವ ನೀತಿಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಸರಕಾರಿ ಒತ್ತುವರಿ ಭೂಮಿ ಗುತ್ತಿಗೆ ವಿರೋಧಿ ಹೋರಾಟ ಸಮಿತಿಯಿಂದ ತಾಲೂಕು ಕಚೇರಿ ಎದುರು ಧರಣಿ ನಡೆಸಲಾಯಿತು.
ಸಮಿತಿಯ ಕಾರ್ಯದರ್ಶಿ ಹಾಗೂ ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಮಾತನಾಡಿ, ಸರಕಾರಿ ಭೂಮಿಯನ್ನು ಭೂ ಮಾಲೀಕರಿಗೆ ಗುತ್ತಿಗೆ ನೀಡುವ ಮೂಲಕ ಪ್ರಜಾಪ್ರಭುತ್ವ, ಪರಿಸರ ವಿರೋಧಿ, ದುಡಿಯುವ ವರ್ಗದ ವಿರೋಧಿ ನೀತಿ ಅನುಸರಿಸಲಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಕೂಲಿ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ನಿವೇಶನ ರಹಿತರು, ಅತಿವೃಷ್ಟಿ ದಾಳಿಗೆ ಸಿಲುಕಿದ ನಿರಾಶ್ರಿತರಿಗೆ ಭೂಮಿ ನೀಡಬೇಕಾದ ಸರಕಾರ, ಇವರನ್ನು ಹೊರತುಪಡಿಸಿ ಭೂ ಮಾಲೀಕರಿಗೆ 30 ವರ್ಷ ಸರಕಾರಿ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡಲು ಮುಂದಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಅವರು ಕೂಲಿ ಕಾರ್ಮಿಕರ, ಬಡವರ ನೆರವಿಗೆ ಬಾರದೆ ಭೂ ಮಾಲೀಕರ ಏಜೆಂಟರಂತೆ ಕೆಲಸ ಮಾಡುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಈಗಾಗಲೇ 300 ಕ್ಕೂ ಅಧಿಕ ಸಂಘಟನೆಗಳು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ. ನಮ್ಮ ಬೇಡಿಕೆಯನ್ನು ಸರಕಾರ ಈಡೇರಿಸದಿದ್ದರೆ ಮುಂದಿನ 15 ದಿನಗಳ ನಂತರ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಿತಿ ಅಧ್ಯಕ್ಷ ಯು.ಬಿ.ಮಂಜಯ್ಯ ಮಾತನಾಡಿ, ಒತ್ತುವರಿ ಭೂಮಿಯ ಗುತ್ತಿಗೆ ನೀಡುವ ನೀತಿ ಕೈ ಬಿಡಬೇಕು. ಅಕ್ರಮ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಭೂಹೀನ ಬಡವರಿಗೆ ತಲಾ 3 ಎಕರೆ ಭೂಮಿ ನೀಡಬೇಕು. ತಾಲೂಕಿನಲ್ಲಿ ನಿವೇಶನ ರಹಿತರ ಪಟ್ಟಿ ತಯಾರಿಸಿ ನಿವೇಶನ ಭೂಮಿ ಕಾಯ್ದಿರಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ದಲಿತರಿಗೆ ಮಂಜೂರಾದ ಭೂಮಿಯನ್ನು ದುರಸ್ತಿಪಡಿಸಿ ಸ್ವಾಧೀನಕ್ಕೆ ನೀಡಬೇಕು. 1975ರಿಂದ ದಲಿತ, ಆದಿವಾಸಿ ಬಡವರಿಗೆ ಮಂಜೂರಾದ ಭೂಮಿಯ ಒತ್ತುವರಿ ಪತ್ತೆ ಮಾಡಿ ಸಂಬಂಧಿಸಿದವರಿಗೆ ನೀಡಬೇಕು. ಮಲೆನಾಡು ಭೂಮಿಗೆ ಭೂ ಮಿತಿ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಬಳಿಕ ತಹಶೀಲ್ದಾರ್ ನಾಗರಾಜು ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಜಾಕೀರ್ ಹುಸೇನ್, ತಾಲೂಕು ಅಧ್ಯಕ್ಷ ಲೋಕವಳ್ಳಿ ರಮೇಶ್, ಮುಖಂಡರಾದ ಸುರೇಂದ್ರ ಉಗ್ಗೇಹಳ್ಳಿ, ಬಕ್ಕಿ ರವಿ, ಶೇಖರ್ ಹೊಸಳ್ಳಿ, ಭಾನುಪ್ರಕಾಶ್, ಸುರೇಂದ್ರ, ಪಿ.ಕೆ. ಮಂಜುನಾಥ್, ಜಗದೀಶ್, ಕೃಷ್ಣ, ಸಿದ್ದೇಶ್, ಸುರೇಶ್ ಮತ್ತಿತರರಿದ್ದರು.