ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಕೂಡಲಗಿ ಗ್ರಾಮದ ಕಾಂಗ್ರೆಸ್ ಮುಖಂಡ ಹಣಮಂತ ಕೂಡಲಗಿ ಕೊಲೆ ಪ್ರಕರಣದ ಎಫ್ ಆರ್‌ಐನಿಂದ ಬಿಜೆಪಿ ಮುಖಂಡರಾದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮತ್ತು ಇವರ ಸಹೋದರರಾದ ಜಿಪಂ ಮಾಜಿ ವಿರೊಧ ಪಕ್ಷದ ನಾಯಕ ಬಸವರಾಜ ಪಾಟೀಲ ನರಿಬೋಳ ಅವರ ಹೆಸರನ್ನು ತೆಗೆಯಬೇಕೆಂದು ಜೇವರ್ಗಿ ಮತ್ತು ಯಡ್ರಾಮಿ ತಾಲೂಕು ವ್ಯಾಪ್ತಿಯ ಮಠಾಧೀಶರು ಆಗ್ರಹಿಸಿದರು.
ರವಿವಾರ ವಿವಿಧ ಮಠಾಧೀಶರು ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ನೆಲೋಗಿ ವಿರಕ್ತ ಮಠದ ಸಿದ್ದಲಿಂಗ ಮಹಾಸ್ವಾಮಿ ಮಾತನಾಡಿ, ಕೂಡಲಗಿ ಕುಟುಂಬ ಮತ್ತು ಮಯೂರ ಗ್ರಾಮದ ಶಿವಲಿಂಗ ಭಾವಿಕಟ್ಟಿ ಕುಟುಂಬದ ನಡುವೆ ಹಳೆ ವೈಷಮ್ಯ ಇದೆ. ವೈಯಕ್ತಿಕ ಕಾರಣಗಳಿಂದ ಹಣಮಂತ ಕೂಡಲಗಿ ಕೊಲೆ ನಡೆದಿದೆ.
ಆದರೆ, ಈ ಕುರಿತು ದಾಖಲಾದ ಪ್ರಥಮ ವರ್ತಮಾನ ವರದಿ (ಎಫ್‌ಐಆರ್)ಯಲ್ಲಿ ನರಿಬೋಳ ಸಹೋದರರ ಹೆಸರನ್ನು ವಿನಾಕಾರಣ ಸೇರಿಸಲಾಗಿದೆ ಎಂದರು. ಜಿಪಂ ಮಾಜಿ ಸದಸ್ಯರಾದ ಶಾಂತಪ್ಪ ಕೂಡಲಗಿ ಅವರ ಸಹೋದರ ಹಣಮಂತ ಕೊಲೆ ನಮಗೂ ನೋವು ತಂದಿದೆ. ಅವರ ಕುಟುಂಬದವರ ನೋವಿನಲ್ಲಿ ಎಲ್ಲ ಮಠಾಧೀಶರು ಭಾಗಿಯಾಗಿದ್ದೇವೆ. ಹಣಮಂತ ಕೊಲೆ ಆರೋಪಿಗಳಿಗೆ ಖಂಡಿತ ಶಿಕ್ಷೆಯಾಗಲೇಬೇಕು.
ಪ್ರಕರಣದ ಬಗ್ಗೆ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಆದರೆ, ಈ ಪ್ರಕರಣದಲ್ಲಿ ನರಿಬೋಳ ಸಹೋದರರನ್ನು ಹೆಸರು ಮೂಲಕ ರಾಜಕೀಯ ಹಿನ್ನಡೆ ಉಂಟು ಮಾಡುವ ದುರುದ್ದೇಶ ಇರುವ ಶಂಕೆ ಇದೆ ಎಂದು ಹೇಳಿದರು. ಜೇವರ್ಗಿ-ಯಡ್ರಾಮಿ ತಾಲೂಕಿನಲ್ಲಿ ಶಿವಲಿಂಗಪ್ಪ ಪಾಟೀಲ ನರಿಬೋಳ ಕುಟುಂಬದವರ ಬಗ್ಗೆ ಅಪಾರ ಗೌರವವಿದೆ. ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಸವರಾಜ ಪಾಟೀಲ ನರಿಬೋಳ ಸಹೋದರರು ಒಳ್ಳೆಯ ಮನೆತನದವರು. ಜನಪರ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ಯಾವುದೋ ಕಾರಣಕ್ಕೆ ಇಂತಹ ಪ್ರಕರಣದಲ್ಲಿ ಅವರ ಹೆಸರು ಥಳಕು ಹಾಕಿರುವುದು ಸರಿಯಲ್ಲ. ಹೀಗಾಗಿ ಗೃಹ ಸಚಿವರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸಬೇಕೆಂದರು. ಜೇವರ್ಗಿ ಕ್ಷೇತ್ರ ಈ ಹಿಂದಿನಿಂದಲೂ ಜಾತಿ, ಧರ್ಮ ರಹಿತ ರಾಜಕಾರಣಕ್ಕೆ ಹೆಸರಾಗಿದೆ. ಇಲ್ಲಿನ ಜನರು ಸಹಬಾಳ್ವೆ ಮತ್ತು ಸಾಮರಸ್ಯಕ್ಕೆ ಹೆಸರು ಮಾಡಿದ್ದಾರೆ. ಹೀಗಾಗಿ ಇಂತಹ ಅತ್ಯುತ್ತಮ ಬಾಂಧವ್ಯಕ್ಕೆ ಯಾರೂ ಧಕ್ಕೆ ತರುವಂತ ಕೆಲಸ ಮಾಡಬಾರದು. ರಾಜಕೀಯ ಸೇಡಿನಂತಹ ಕೆಟ್ಟ ಸಂಪ್ರದಾಯ ಹುಟ್ಟು ಹಾಕಬಾರದು.
ಈ ನಿಟ್ಟಿನಲ್ಲಿ ಕೂಡಲಗಿ ಕುಟುಂಬದವೊಂದಿಗೂ ಎಲ್ಲ ಸ್ವಾಮೀಜಿಗಳು ಮಾತನಾಡುತ್ತೇವೆ ಎಂದು ತಿಳಿಸಿದರು. ಸೊನ್ನ ವಿರಕ್ತಮಠದ ಡಾ| ಶಿವಾನಂದ ಸ್ವಾಮೀಜಿ, ಕಡಕೋಳದ ಶ್ರೀ ಮಡಿವಾಳೇಶ್ವರ ಮಠದ ರುದ್ರಮುನಿ ಶಿವಾಚಾರ್ಯರು, ಜೇರಟಗಿಯ ವಿರಕ್ತಮಠದ ಮಹಾಂತ ಸ್ವಾಮೀಜಿ, ಯಡ್ರಾಮಿಯ ವಿರಕ್ತ ಮಠದ ಅಂಕಲಗಾ ಹಿರೇಮಠದ ಅಭಿನವ ಗುರುಬಸವ ಶಿವಾಚಾರ್ಯರು, ಗಂವ್ಹಾರದ ತ್ರಿವಿಕ್ರಮಾನಂದ ಮಠದ ಸೋಮಾನನಾಥ ಸ್ವಾಮೀಜಿ, ಚಿಗರಳ್ಳಿಯ ಸಿದ್ದಬಸವ ಕಬೀರ ಸ್ವಾಮೀಜಿ, ಕೋಳಕೂರದ ಹಿರೇಮಠದ ಕೆಂಚಬಸವ ಶಿವಾಚಾರ್ಯ, ಕಟ್ಟಿಸಂಗಾವಿಯ ಬಸಯ್ಯ ಸ್ವಾಮೀಜಿ ಇದ್ದರು.