ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ಬಾಲಿ’ ಮತ್ತು “ಏಕಮ್’ ಸಿನಿಮಾಗಳು ಏಕಕಾಲಕ್ಕೆ ಮುಹೂರ್ತವನ್ನು ಆಚರಿಸಿಕೊಂಡಿವೆ. “ಅಕ್ಷರಾ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ಈ ಎರಡು ಸಿನಿಮಾಗಳು ನಿರ್ಮಾಣವಾಗುತ್ತಿದ್ದು, “ಬಾಲಿ’ ಚಿತ್ರಕ್ಕೆ ಗಣಿದೇವ್ ಕಾರ್ಕಳ ಕಥೆ, ಚಿತ್ರಕಥೆ ಬರೆದ ನಿರ್ದೇಶನ ಮಾಡಿದರೆ, “ಏಕಮ್’ ಚಿತ್ರಕ್ಕೆ ವಿದ್ಯುತ್ ಶಿವ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಮೊದಲನೆಯದಾಗಿ “ಬಾಲಿ’ ಕ್ರೀಡಾ ಕಥಾಹಂದರದ ಚಿತ್ರವಾಗಿದ್ದು, ಹಳ್ಳಿಯ ಬಡಕುಟುಂಬದ ಹುಡುಗಿಯೊಬ್ಬಳು ಓಟಗಾರ್ತಿಯಾಗಿ ಗುರಿ ಸಾಧಿಸಲು ಹೋಗುತ್ತಾಳೆ. ಅವಳ ಕ್ರೀಡಾ ಸಾಧನೆಯ ಹಾದಿಯ ಏಳು-ಬೀಳುಗಳ ಸುತ್ತ “ಬಾಲಿ’ ಸಿನಿಮಾದ ಕಥಾ ಹಂದರ ಸಾಗುತ್ತದೆ. ಮೂಲತಃ ಅಥ್ಲೀಟ್ ಪಟುವಾಗಿರುವ ಕುಮಾರಿ ಹರಿಣಿ ಜಯರಾಜ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ
ಕಾಣಿಸಿಕೊಳ್ಳುತ್ತಿದ್ದು, ನೀರಜ್ ಕುಮಾರ್, ಮೀನಾ ಕಿರಣ್, ಸಂದೀಪ್ ಮಲಾನಿ, ಪ್ರಶಾಂತ್ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅಮೋಘ್ ಕೊಡಂಗಾಲ ಸಂಗೀತವಿದ್ದು, ಕುಂದಾಪುರ, ಮಂಗಳೂರು, ಬೆಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಎರಡನೆಯದಾಗಿ “ಏಕಮ್’, ಹಾಲಿವುಡ್‌ನ ಅಲೆಜಾಂಡ್ರೆ ಇನರುತು ನಿರ್ದೇಶನದ “ಬೆಬಲ್’ ಚಿತ್ರದ ಪ್ರೇರಣೆಯಿಂದ ಮೂಡಿಬರುತ್ತಿದೆ. ಐದು ಜನರ ಜೀವನದ ಕಥೆಯಿರುವ ಈ ಚಿತ್ರದಲ್ಲಿ ಒಬ್ಬ ವ್ಯಕ್ತಿಯ ಅನಾಹುತದಿಂದ ಇನ್ನೊಬ್ಬ ವ್ಯಕ್ತಿಗೆ ಆಗುವ ಘರ್ಷಣೆಗಳು ಒಂದಕ್ಕೊಂದು ಪ್ರಾರಂಭದಿಂದಲೇ ಲಿಂಕ್ ಆಗುತ್ತಾ ಹೋಗುತ್ತದೆ. ಜೊತೆಗೆ ಲವ್, ರಕ್ತಪಾತ, ಫ್ಯಾಂಟಸಿ ಎಲ್ಲವೂ ಚಿತ್ರದಲ್ಲಿರಲಿದೆ.
ಶಹನಾ, ಹರಿಶ್ರಾಮ್, ಮೀನಾ ಕಿರಣ್, ಐಶ್ವರ್ಯಾ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅಲನ್ ಭರತ್ ಛಾಯಾಗ್ರಹಣ, ಸಂಕಲನ ಸ್ಟೀಫೆನ್ ಸಂಕಲನವಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ ಎನ್ನುವುದು ಚಿತ್ರತಂಡದ ಮಾಹಿತಿ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್ ಮತ್ತು ಚಿತ್ರರಂಗದ ಹಲವು ಗಣ್ಯರು “ಬಾಲಿ’ ಮತ್ತು “ಏಕಮ್’ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು, ಎರಡೂ ಚಿತ್ರಗಳ ಚಿತ್ರೀಕರಣಕ್ಕೆ ಚಾಲನೆ ನೀಡಿದರು.