ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಮಳೆಗಳು ಅಬ್ಬರಿಸುತ್ತಿದ್ದು, ಅದರಲ್ಲೂ ಆರಿದ್ರ ಮಳೆಯ ಅಬ್ಬರವು ರೈತರ ಮೊಗದಲ್ಲಿ ಖುಷಿಯನ್ನು ತರಿಸಿದೆ.
ಸಮೃದ್ಧಿ ಮಳೆಗೆ ಅನ್ನದಾತನು ಖುಷಿಯಾಗಿದ್ದು, ಕೆಲವು ಭಾಗದ ರೈತರು ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಿದ್ದಾರೆ. ಆರಿದ್ರ ಮಳೆಯು ಆದಂಗ.. ಹಿರೇಸೊಸಿ ನಡೆದಂಗ ಎನ್ನುವ ರೈತಾಪಿ ವಲಯದ ಮಾತು ಸುಳ್ಳಾದಂತಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಪೂರ್ವ ಮಳೆಗಳು ಉತ್ತಮವಾಗಿ ಆಗಿ ಕೃಷಿ ಚಟುವಟಿಕೆಗೆ ಹೆಚ್ಚಿನ ಶಕ್ತಿ ನೀಡಿದೆ.
ಕೋವಿಡ್ ಸಂಕಷ್ಟದಲ್ಲಿ ಬೆಂದು ಹೋಗಿದ್ದ ರೈತಾಪಿ ಸಮುದಾಯವು ಬಿತ್ತನೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡು, ಬಿತ್ತನೆ ಮಾಡಿ ಫೈರು ಮೊಳಕೆಯಲ್ಲಿರುವಾಗ ಮಳೆಯತ್ತ ಚಿತ್ತ ಹರಿಸಿದ್ದರು. ಸಾಮಾನ್ಯವಾಗಿ ರೈತಾಪಿ ವಲಯದಲ್ಲಿ ಆರಿದ್ರ ಮಳೆ ಬಗ್ಗೆ ಭರವಸೆ ಕಡಿಮೆ. ಆದ್ದರಿಂದ ಆರಿದ್ರ ಮಳೆ ಆದಂಗ.. ಮನೆಗೆ ಬಂದ ಹಿರೇ ಸೊಸೆಯು ಮನೆಯಲ್ಲಿ ನಡೆದಂಗ ಎನ್ನುವ ನಾಣ್ಣುಡಿ ಇದೆ. ಅದೆಲ್ಲವೂ ಸುಳ್ಳು ಎನ್ನುವಂತೆ ಆರಿದ್ರ ಮಳೆಯು ಎರಡು ದಿನಗಳಿಂದ ವಿವಿಧ ಹೋಬಳಿಯಲ್ಲಿ ಸುರಿಯುತ್ತಿದೆ. ಇದರಿಂದಾಗಿ ಫಲಸು ನಳ ನಳಿಸುವಂತಿದ್ದರೆ, ಕೆಲವು ಭಾಗಗಳಲ್ಲಿ ಇದೇ ಮಳೆಯಿಂದಾಗಿ ಬಿತ್ತನೆ ಕಾರ್ಯಕ್ಕೆ ಮತ್ತಷ್ಟು ವೇಗ ಬಂದಂತಾಗಿದೆ.
ಕೊಪ್ಪಳ, ಚುಕ್ಕನಕಲ್, ಮುದ್ದಾಬಳ್ಳಿ, ಗೊಂಡಬಾಳ, ಹ್ಯಾಟಿ ಸೇರಿದಂತೆ ಇತರೆ ಭಾಗದಲ್ಲಿ ರವಿವಾರ ಮಳೆ ಆರ್ಭಟಿಸಿತು. ಬೆಳಗ್ಗೆಯಿಂದಲೂ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಳೆಯು ಬರುವಿಕೆಯ ಲಕ್ಷಣವೇ ಇದ್ದಿತು. ಮಧ್ಯಾಹ್ನದ ವೇಳೆಗೆ ಮಳೆಯ ಆರ್ಭಟಕ್ಕೆ ಕೊಪ್ಪಳವು ಮಲೆ ನಾಡಿನಂತಹ ವಾತಾವರಣ ನಿರ್ಮಾಣವಾಯಿತು. ಅದರಲ್ಲೂ ಕೊಪ್ಪಳ ನಗರದಲ್ಲಿ ಜೋರಾಗಿ ಸುರಿದ ಮಳೆಯ ಮಧ್ಯೆಯೂ ಜನರು ನೆನೆಯುತ್ತಲೇ ವಾಹನಗಳಲ್ಲಿ ಸುತ್ತಾಡುತ್ತಿದ್ದದ್ದು ಕಂಡುಬಂತು. ಒಟ್ಟಿನಲ್ಲಿ ಆರಿದ್ರಾ ಮಳೆ ಭರವಸೆ ಮೂಡಿಸಿದ್ದು, ರೈತಾಪಿ ವಲಯದಲ್ಲಿ ಖುಷಿ ತರಿಸಿದೆ. ಇಳೆಯೂ ತಂಪಾಗಿ ಬಿತ್ತನೆ ಮಾಡಿದ ಫಸಲು ನಳನಳಿಸುವಂತಾಗಿದೆ. ಕೆಲ ಭಾಗದಲ್ಲಿ ಇದೇ ಮಳೆಗೆ ರೈತರು ಬಿತ್ತನೆಗೆ ಅಣಿಯಾಗುತ್ತಿದ್ದಾರೆ.