Advertisement

ಆಪ್‌ಗೆ ರಾಷ್ಟ್ರೀಯ ಪಕ್ಷ ಸ್ಥಾನಮಾನ: ಈ ಸ್ಥಾನಮಾನ ಸಿಗುವುದು ಹೇಗೆ?

11:43 AM Dec 09, 2022 | Team Udayavani |

ಗುಜರಾತ್‌ ಫ‌ಲಿತಾಂಶದ ಮೂಲಕ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು(ಆಪ್‌) “ರಾಷ್ಟ್ರೀಯ ಪಕ್ಷ’ ಸ್ಥಾನಮಾನವನ್ನು ಪಡೆಯುವತ್ತ ದಾಪುಗಾಲಿಟ್ಟಿದೆ. ಗುಜರಾತ್‌ನಲ್ಲಿ ಶೇ.12.9ರಷ್ಟು ಮತಗಳನ್ನು ಗಳಿಸುವ ಮೂಲಕ, ಅಸ್ತಿತ್ವಕ್ಕೆ ಬಂದ ಕೇವಲ 10 ವರ್ಷಗಳಲ್ಲೇ ಈ ಸ್ಥಾನಮಾನ ಪಡೆದ ಖ್ಯಾತಿಯನ್ನೂ ಗಳಿಸಿಕೊಳ್ಳಲಿದೆ.   ಕೇಜ್ರಿವಾಲ್‌ ಅವರು ಆಪ್‌ ಸ್ಥಾಪನೆ ಮಾಡಿ ಸರಿಯಾಗಿ 10 ವರ್ಷಗಳು ಸಂದಿವೆ. ಈ 10 ವರ್ಷಗಳಲ್ಲಿ ದೇಶದ ರಾಜಕೀಯವು 2 ದೊಡ್ಡಮಟ್ಟದ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಅವೆಂದರೆ ಬಿಜೆಪಿಯ ಬೆಳವಣಿಗೆ ಮತ್ತು ಕಾಂಗ್ರೆಸ್‌ನ ಕುಸಿತ. ಈ 2 ಬದಲಾವಣೆಗಳ ನಡುವೆ, “ಆಪ್‌’ ರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದೆ.

Advertisement

ಕೇಜ್ರಿವಾಲ್‌ ಹೇಳಿದ್ದೇನು?: ಫ‌ಲಿತಾಂಶದ ಕುರಿತು ಗುರುವಾರ ಮಾತನಾಡಿದ ದಿಲ್ಲಿ ಸಿಎಂ ಕೇಜ್ರಿವಾಲ್‌, “ನಮಗೆ ರಾಷ್ಟ್ರೀಯ ಪಕ್ಷ ಸ್ಥಾನಮಾನ ದೊರಕಿಸಿಕೊಡಲು ನೆರವಾದ ಗುಜರಾತ್‌ ಜನತೆಗೆ ಧನ್ಯವಾದ ಹೇಳಬಯಸುತ್ತೇನೆ. ಗುಜರಾತ್‌ ಅನ್ನು ಬಿಜೆಪಿಯ ಭದ್ರಕೋಟೆ ಎಂದು ಕರೆಯಲಾಗುತ್ತದೆ. ಆ ಕೋಟೆಯಲ್ಲಿ ಕುಳಿ ಮೂಡಿಸಲು ಜನರು ನಮಗೆ ಸಹಾಯ ಮಾಡಿದ್ದಾರೆ. ಮುಂದಿನ ಬಾರಿಯಾದರೂ ನಾವು ಗೆದ್ದೇ ಗೆಲ್ಲುತ್ತೇವೆ’ ಎಂದು ಹೇಳಿದ್ದಾರೆ.

ಈ ಸ್ಥಾನಮಾನ ಸಿಗುವುದು ಹೇಗೆ?:

ಯಾವುದೇ ರಾಜಕೀಯ ಪಕ್ಷಕ್ಕೆ “ರಾಷ್ಟ್ರೀಯ ಪಕ್ಷ ಸ್ಥಾನಮಾನ’ ಸಿಗಬೇಕೆಂದರೆ ಆ ಪಕ್ಷವು ಕನಿಷ್ಠ ಮೂರು ರಾಜ್ಯಗಳಲ್ಲಿ ಶೇ.2ರಷ್ಟು ಲೋಕಸಭಾ ಸೀಟುಗಳನ್ನು ಹೊಂದಿರಬೇಕು. ಅಂದರೆ ಒಟ್ಟು 11 ಸೀಟುಗಳು ಇರಬೇಕು. ಆದರೆ ಆಪ್‌ ಲೋಕಸಭೆಯಲ್ಲಿ ಯಾವುದೇ ಸ್ಥಾನ ಹೊಂದಿಲ್ಲ. ಇನ್ನೊಂದು ಮಾನದಂಡವೆಂದರೆ ರಾಷ್ಟ್ರೀಯ ಪಕ್ಷ ಸ್ಥಾನಮಾನ ಸಿಗಬೇಕೆಂದರೆ ಆ ಪಕ್ಷವು ಕನಿಷ್ಠ 4 ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿರಬೇಕು. ರಾಜ್ಯ ಪಕ್ಷ ಎಂದು ಗುರುತಿಸಿಕೊಳ್ಳಬೇಕೆಂದರೆ ವಿಧಾನಸಭೆ ಚುನಾವಣೆಯಲ್ಲಿ ಆ ಪಕ್ಷವು ಕನಿಷ್ಠ 2 ಸೀಟುಗಳಲ್ಲಿ ಗೆದ್ದು, ಶೇ.6ರಷ್ಟು ಮತಗಳನ್ನು ಗಳಿಸಬೇಕು. ಆಪ್‌ ಗೆದ್ದಿದ್ದೇ ಇಲ್ಲಿ: ಆಪ್‌ ಈಗಾಗಲೇ ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರದಲ್ಲಿದೆ. ಗೋವಾದಲ್ಲಿ ಶೇ.6ರಷ್ಟು ಮತ/2 ಸೀಟುಗಳ ಅಗತ್ಯತೆಯನ್ನು ಪೂರೈಸಿದೆ. ಈಗ ಗುಜರಾತ್‌ನಲ್ಲಿ ಬಿಜೆಪಿಯ ಅಭೂತಪೂರ್ವ ಜಯದ ನಡುವೆಯೂ ಶೇ.12.9ರಷ್ಟು ಮತಗಳನ್ನು ಗಳಿಸುವಲ್ಲಿ ಆಪ್‌ ಯಶಸ್ವಿಯಾಗಿದೆ.

ದೇಶದಲ್ಲಿ ಎಷ್ಟಿವೆ?:

Advertisement

ಪ್ರಸ್ತುತ ದೇಶದಲ್ಲಿ 8 ಪಕ್ಷಗಳನ್ನು ಚುನಾವಣ ಆಯೋಗವು ರಾಷ್ಟ್ರೀಯ ಪಕ್ಷಗಳೆಂದು ಗುರುತಿಸಿದೆ. ಅವೆಂದರೆ ಬಿಜೆಪಿ, ಕಾಂಗ್ರೆಸ್‌, ನ್ಯಾಶನಲ್‌ ಪೀಪಲ್ಸ್‌ ಪಾರ್ಟಿ, ಟಿಎಂಸಿ, ಎನ್‌ಸಿಪಿ, ಸಿಪಿಐ, ಸಿಪಿಎಂ ಮತ್ತು ಬಿಎಸ್‌ಪಿ. ಆದರೆ ಎನ್‌ಸಿಪಿ, ಟಿಎಂಸಿ, ಸಿಪಿಐ ಮತ್ತು ಬಿಎಸ್‌ಪಿ ಈಗ ಮಾನದಂಡಗಳನ್ನು ಪೂರೈಸುವಲ್ಲಿ ವಿಫ‌ಲವಾಗಿರುವ ಕಾರಣ, “ರಾಷ್ಟ್ರೀಯ ಪಕ್ಷ ಸ್ಥಾನಮಾನ’ವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿವೆ.

 

Advertisement

Udayavani is now on Telegram. Click here to join our channel and stay updated with the latest news.

Next