ನವದೆಹಲಿ: ಶ್ರದ್ದಾ ವಾಲ್ಕರ್ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ವಿಚಾರಣೆ ವೇಳೆ ಒಂದೊಂದೇ ಮಾಹಿತಿಯನ್ನು ಬಹಿರಂಗಗೊಳಿಸುತ್ತಿದ್ದು, “ತಾನು ಮಾದಕ ವ್ಯಸನಿಯಾಗಿದ್ದು, ಮೇ 18ರಂದು ಗಾಂಜಾ ಮತ್ತಿನಲ್ಲಿ ಶ್ರದ್ಧಾಳ ದೇಹವನ್ನು ತುಂಡು, ತುಂಡು ಮಾಡಿರುವುದಾಗಿ ತಿಳಿಸಿದ್ದಾನೆ.
ಇದನ್ನೂ ಓದಿ:ಹೋರಾಟಗಾರರೊಂದಿಗಿದ್ದು ಪ್ರಚಾರ ಪಡೆದ ಖಾದರ್ ಗೆ ಟೋಲ್ ಗೇಟ್ ತೆರವು ಮಾಡಲು ಸಾಧ್ಯವಾಯಿತೆ?
ಪೊಲೀಸರ ತನಿಖೆಯ ಸಂದರ್ಭದಲ್ಲಿ ತಾನು ಮಾರಿಜುವಾನಾ ಸೇದುತ್ತಿದ್ದ ಬಗ್ಗೆ ಶ್ರದ್ದಾ ತಗಾದೆ ತೆಗೆಯುತ್ತಿದ್ದಳು ಎಂದು ಅಫ್ತಾಬ್ ತಿಳಿಸಿದ್ದು, ಆಕೆಯನ್ನು ದಾರುಣವಾಗಿ ಅಂತ್ಯಗೊಳಿಸುವ ದಿನದಂದು ಇಬ್ಬರು ಹಣಕಾಸಿನ ವಿಚಾರದಲ್ಲಿ ಜಗಳವಾಡಿಕೊಂಡಿರುವುದಾಗಿ ತಿಳಿಸಿದ್ದಾನೆ.
ಮುಂಬೈನಿಂದ ದೆಹಲಿಗೆ ತಮ್ಮ ಲಗೇಜ್ ಅನ್ನು ಯಾರು ತರುತ್ತಾರೆ ಎಂಬ ವಿಚಾರದಲ್ಲಿ ಇಬ್ಬರ ನಡುವೆಯೂ ಜಗಳ ನಡೆದಿತ್ತು. ಹೀಗೆ ಜಗಳ ವಿಕೋಪಕ್ಕೆ ಹೋದಾಗ ಅಫ್ತಾಬ್ ಫ್ಲ್ಯಾಟ್ ನಿಂದ ಹೊರಬಂದು ಮಾರಿಜುವಾನಾ ಸೇದಿ ಮತ್ತಿನಲ್ಲಿಯೇ ವಾಪಸ್ ಬಂದಿರುವುದಾಗಿ ವಿವರಿಸಿದ್ದು, ತನಗೆ ಶ್ರದ್ದಾಳ ಬದುಕನ್ನು ಕೊನೆಗಾಣಿಸುವ ಯಾವುದೇ ಇರಾದೆ ಇರಲಿಲ್ಲವಾಗಿತ್ತು. ಆದರೆ ಮಾದಕ ವಸ್ತುವಿನ ಮತ್ತಿನ ಪರಿಣಾಮ ಬರ್ಬರ ಕೃತ್ಯ ಎಸಗಿರುವುದಾಗಿ ಅಫ್ತಾಬ್ ಹೇಳಿದ್ದಾನೆ.
ಮೇ 18ರ ರಾತ್ರಿ 9ರಿಂದ 10 ಗಂಟೆ ನಡುವೆ ಶ್ರದ್ದಾಳ ದೇಹವನ್ನು ತುಂಡು, ತುಂಡಾಗಿ ಕತ್ತರಿಸಿದ ನಂತರ ಅಫ್ತಾಬ್ ಆಕೆಯ ದೇಹದ ಭಾಗಗಳೊಂದಿಗೆ ಗಾಂಜಾ ತುಂಬಿದ ಸಿಗರೇಟ್ ಸೇದುತ್ತಾ ಇಡೀ ರಾತ್ರಿ ಕಳೆದಿದ್ದ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಆಕೆಯ ದೇಹವನ್ನು 35 ಭಾಗಗಳನ್ನಾಗಿ ಮಾಡಿದ ನಂತರ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ 300 ಲೀಟರ್ ನ ಫ್ರಿಡ್ಜ್ ನಲ್ಲಿ ಇಟ್ಟುಬಿಟ್ಟಿದ್ದ. ಬಳಿಕ 18 ದಿನಗಳ ಕಾಲ ಪ್ರತಿದಿನ ರಾತ್ರಿ ಮೆಹರೌಲಿ ಕಾಡಿನೊಳಗೆ ಒಂದೊಂದೇ ಭಾಗವನ್ನು ಎಸೆದು ಬರುತ್ತಿದ್ದ ಎಂದು ವರದಿ ವಿವರಿಸಿದೆ.
ಗುರುವಾರ ದೆಹಲಿ ಕೋರ್ಟ್ ಅಫ್ತಾಬ್ ಪೂನಾವಾಲನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಅಲ್ಲದೇ ತನಿಖೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಅಫ್ತಾಬ್ ನಿಗೆ ಮಂಪರು ಪರೀಕ್ಷೆ ನಡೆಸಲು ಅನುಮತಿ ನೀಡಿದೆ.