ನವದೆಹಲಿ : ಶ್ರದ್ಧಾ ವಾಲ್ಕರ್ ಅವರ ಘೋರ ಅಂತ್ಯಕ್ಕೆ ಕಾರಣವಾದ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ ನ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ಶುಕ್ರವಾರ ನ್ಯಾಯಾಲಯ ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ.
ಪೂನಾವಾಲಾ ನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ. ನವೆಂಬರ್ 26 ರಂದು ಪ್ರಕರಣದ ಕೊನೆಯ ವಿಚಾರಣೆಯಲ್ಲಿ, ನ್ಯಾಯಾಲಯವು ಆರೋಪಿಯ ನ್ಯಾಯಾಂಗ ಬಂಧನವನ್ನು 13 ದಿನಗಳವರೆಗೆ ವಿಸ್ತರಿಸಿತ್ತು.
ಹತ್ಯೆಗೀಡಾದ ಶ್ರದ್ಧಾ ವಾಲ್ಕರ್ ಅವರ ತಂದೆ ವಿಕಾಸ್ ವಾಲ್ಕರ್ ಶುಕ್ರವಾರ ತಮ್ಮ ಮಗಳನ್ನು ಕೊಂದ ಆಕೆಯ ಲಿವ್ ಇನ್ ಪಾಲುದಾರ ಆಫ್ತಾಬ್ ಪೂನಾವಾಲಾನನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದ್ದಾರೆ.
“ನನ್ನ ಮಗಳನ್ನು ಕೊಂದಿದ್ದಕ್ಕಾಗಿ ಆಫ್ತಾಬ್ ಪೂನಾವಾಲಾಗೆ ಗಲ್ಲು ಶಿಕ್ಷೆಯನ್ನು ನೀಡಲೇ ಬೇಕಾಗಿದೆ… ಪೂನಾವಾಲಾ ಮತ್ತು ಪ್ರಕರಣದಲ್ಲಿ ಭಾಗವಹಿಸಿರುವ ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು” ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದ ನಂತರ ವಿಕಾಸ್ ವಾಲ್ಕರ್ ಸುದ್ದಿಗಾರರಿಗೆ ಹೇಳಿದ್ದಾರೆ.
ಪೂನಾವಾಲಾ ಶ್ರದ್ಧಾಳನ್ನು ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 300-ಲೀಟರ್ ಫ್ರಿಡ್ಜ್‌ನಲ್ಲಿ ಸುಮಾರು ಮೂರು ವಾರಗಳ ಕಾಲ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಇರಿಸಿ ಈ ವರ್ಷದ ಮೇ ತಿಂಗಳಲ್ಲಿ ನಗರದಾದ್ಯಂತ ಎಸೆದಿದ್ದ.