Advertisement
ರಾಷ್ಟ್ರೀಯ ಪತ್ರಿಕೆ “ದ ಎಕಾನಮಿಕ್ ಟೈಮ್ಸ್’ ಈ ಬಗ್ಗೆ ವರದಿ ಮಾಡಿದ್ದು, ಕಪ್ಪುಹಣ ಚಲಾವಣೆಗೆ ಕಡಿವಾಣ ಹಾಕಬೇಕೆನ್ನುವ ನಿಟ್ಟಿನಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ವಿಶೇಷವಾಗಿ ಷೇರು ಖರೀದಿ ಸಹಿತ ಬೇರೆ ಕ್ಷೇತ್ರಗಳಲ್ಲಿ ಹಣ ಹೂಡಿಕೆ ವೇಳೆ ವಹಿವಾಟು ನಡೆಸುವಾಗ ಈ ಬಗ್ಗೆ ತಿಳಿದುಕೊಳ್ಳುವ ಉದ್ದೇಶದೊಂದಿಗೆ ಆಧಾರ್ ಕಡ್ಡಾಯಕ್ಕೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಇಲ್ಲಿ ಪ್ಯಾನ್ ಬದಲಾಗಿ ಆಧಾರ್ ಕಡ್ಡಾಯ ಮಾಡಲಾಗುತ್ತದೋ ಅಥವಾ ಪ್ಯಾನ್ ಜತೆಯಲ್ಲಿ ಆಧಾರ್ ಕಡ್ಡಾಯಕ್ಕೆ ಆದೇಶಿಸುತ್ತದೋ ಎನ್ನುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಹೇಳಲಾಗಿದೆ.
“ಆಧಾರ್ ಹೊಂದಿಲ್ಲ ಎನ್ನುವ ಕಾರಣ ನೀಡಿ ಫಲಾನುಭವಿಗಳಿಗೆ ಸಿಗಬೇಕಾದ ಪ್ರಯೋಜನಕ್ಕೆ ಕೊಕ್ಕೆ ಹಾಕಿದಲ್ಲಿ ಅಥವಾ ತಡೆಹಿಡಿದು ನಿಲ್ಲಿಸಿದ ಪಕ್ಷದಲ್ಲಿ, ಅಂಥವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು’ ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಅಜಯ್ ಭೂಷಣ್ ತಿಳಿಸಿದ್ದಾರೆ. ಈ ಕುರಿತು ಖಡಕ್ ಮಾತುಗಳನ್ನು ಆಡಿರುವ ಅಜಯ್ ಭೂಷಣ್, “116 ಕೋಟಿ ಭಾರತೀಯರ ಪೈಕಿ ಶೇಕಡಾ 99ರಷ್ಟು ಮಂದಿ ಆಧಾರ್ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ. ಗುರುತಿನ ಚೀಟಿ ಹೊಂದಬೇಕಾದುದು ಕಡ್ಡಾಯ. ಹಾಗಂತ ಇಲ್ಲದೇ ಇದ್ದಲ್ಲಿ ಅಂಥವರು ಅದೇ ಕಾರಣಕ್ಕಾಗಿ ಫಲಾನುಭವದಿಂದ ವಂಚನೆಗೆ ಒಳಗಾಗಬಾರದು. ಹಾಗೆ ಆಗದೇ ಇರುವಂತೆ ನೋಡಿಕೊಳ್ಳುವಲ್ಲಿ ಅಧಿಕಾರಿಗಳ ಪಾತ್ರ ಬಹುಮುಖ್ಯ. ಅರ್ಹ ಫಲಾನುಭವಿ ಸೂಕ್ತ ರೀತಿಯ ಪ್ರಯೋಜನ ಸುಲಭವಾಗಿ ಪಡೆದುಕೊಳ್ಳಲೆಂದೇ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲಾಗಿದೆ ಎಂದು ಹೇಳಿದ್ದಾರೆ.