Advertisement

ರಸಗೊಬ್ಬರ ಖರೀದಿಗೆ “ಆಧಾರ್‌’ಸಲ್ಲಿಕೆ ಕಡ್ಡಾಯ

12:03 PM May 20, 2017 | Harsha Rao |

ಬೆಂಗಳೂರು: ರೈತರು ರಸಗೊಬ್ಬರ ಸಬ್ಸಿಡಿ ಪಡೆಯಲು ಇದೀಗ “ಆಧಾರ್‌’ ಕಡ್ಡಾಯವಾಗಿದ್ದು ಜೂನ್‌ನಿಂದಲೇ
ರಾಜ್ಯದಲ್ಲಿ ಇದು ಜಾರಿಯಾಗಲಿದೆ. ರಸಗೊಬ್ಬರಕ್ಕೆ ನೀಡುವ ಸಬ್ಸಿಡಿ ದುರ್ಬಳಕೆ ತಡೆಯಲು ಕೇಂದ್ರದ ಸೂಚನೆ ಮೇರೆಗೆ “ಆಧಾರ್‌’ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸದ್ಯಕ್ಕೆ ಆಧಾರ್‌ ಜತೆಗೆ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಪರಿಗಣಿಸಲು ನಿರ್ಧರಿಸಲಾಗಿದೆ.

Advertisement

ಇದೇ ಮೊದಲ ಬಾರಿಗೆ ರಸಗೊಬ್ಬರ ಮಾರಾಟ ಚಿಲ್ಲರೆ ಮಳಿಗೆಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
ಸಂಘಗಳಲ್ಲಿ “ಪಾಯಿಂಟ್‌ ಆಪ್‌ ಸೇಲ್‌’ಯಂತ್ರದ ಮೂಲಕ ರಸಗೊಬ್ಬರ ಮಾರಾಟ ಕಡ್ಡಾಯಗೊಳಿಸಲು ಇಲಾಖೆ
ಮುಂದಾಗಿದೆ. ಪಾಯಿಂಟ್‌ ಆಫ್ ಸೇಲ್‌ನಲ್ಲಿ ವ್ಯವಹಾರ ಮಾಡಿದಾಗ ಆಯಾ ಭಾಗದ ರೈತರು ಹಾಗೂ ಅವರು ಹೊಂದಿರುವ ಜಮೀನಿನ ವಿಸ್ತೀರ್ಣ ಸೇರಿ ಸಮಗ್ರ ಮಾಹಿತಿ ಹಾಗೂ ರೈತ ಖರೀದಿಸಿದ ರಸಗೊಬ್ಬರ ಪ್ರಮಾಣ ಮಾಹಿತಿ ಕೇಂದ್ರಕ್ಕೆ ರವಾನೆಯಾಗಲಿದೆ.

ಸಿದ್ಧತೆ: ಈ ಮಧ್ಯೆ, ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಈ ವರ್ಷಕ್ಕೆ 8.53 ಲಕ್ಷ ಕ್ವಿಂಟಾಲ್‌ ಬಿತ್ತನೆ ಬೀಜ ಹಾಗೂ 36 ಲಕ್ಷ ಟನ್‌ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಲು ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಈ ಬಾರಿ ಒಟ್ಟು 8,53,450 ಕ್ವಿಂಟಾಲ್‌ ಬಿತ್ತನೆ ಬೀಜಕ್ಕೆ ಬೇಡಿಕೆಯಿದೆ. ಅದರಂತೆ ಗೋದಾಮುಗಳಲ್ಲಿರುವ ದಾಸ್ತಾನು, ಟೆಂಡರ್‌ ಮೂಲಕ ಖರೀದಿ ಸೇರಿ ನಾನಾ ಕ್ರಮಗಳ ಮೂಲಕ 8,70,418 ಕ್ವಿಂಟಾಲ್‌ ಬಿತ್ತನೆ ಬೀಜವನ್ನು ಇಲಾಖೆ ದಾಸ್ತಾನು ಮಾಡಿಕೊಂಡಿದೆ. ಮಳೆಯಾದಾಗ ಸಕಾಲದಲ್ಲಿ ಬಿತ್ತನೆ ಬೀಜ ಸಿಗದೆ ರೈತರು ಪರದಾಡುವಂತಾಗಬಾರದು ಎಂಬ ಕಾರಣಕ್ಕೆ ಅಂದಾಜು ಬೇಡಿಕೆಗಿಂತಲೂ ಹೆಚ್ಚುವರಿಯಾಗಿ 14,000 ಕ್ವಿಂಟಾಲ್‌ ಬಿತ್ತನೆ ಬೀಜದ ದಾಸ್ತಾನು ಇಟ್ಟುಕೊಂಡಿದೆ.

4.41 ಲಕ್ಷ ಟನ್‌ ರಸಗೊಬ್ಬರ ದಾಸ್ತಾನು: ಈ ವರ್ಷದಲ್ಲಿ ಒಟ್ಟು 36 ಲಕ್ಷ ಟನ್‌ ರಸಗೊಬ್ಬರಕ್ಕೆ ಬೇಡಿಕೆ ಇದೆ. ಮುಂಗಾರು ಹಂಗಾಮಿಗೆ 21 ಲಕ್ಷ ಟನ್‌ ಹಾಗೂ ಹಿಂಗಾರು ಹಂಗಾಮಿಗೆ 15 ಲಕ್ಷ ಟನ್‌ ರಸಗೊಬ್ಬರಕ್ಕೆ ಬೇಡಿಕೆ
ಸೃಷ್ಟಿಯಾಗಲಿದೆ. ಸದ್ಯ ಮುಂಗಾರಿಗೆ ಕೇಂದ್ರ ಸರ್ಕಾರದಿಂದ 19,68,250 ಟನ್‌ ರಸಗೊಬ್ಬರ ಹಂಚಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಈ ಪೈಕಿ 2,03,959 ಟನ್‌ ರಸಗೊಬ್ಬರ ಪೂರೈಕೆ ಮಾಡಲಾಗಿದೆ. ಅಲ್ಲದೆ ಕಾಪು ದಾಸ್ತಾನು (ಬಫ‌ರ್‌ ಸ್ಟಾಕ್‌)
ಅಡಿಯಲ್ಲಿ 2,03,902 ಟನ್‌ ರಸಗೊಬ್ಬರ ಸಂಗ್ರಹವಿದೆ. ಅಂದರೆ ಒಟ್ಟಾರೆ 4,41,212 ಟನ್‌ ರಸಗೊಬ್ಬರ ದಾಸ್ತಾನು
ವಿತರಣೆಗೆ ಲಭ್ಯವಿದೆ. ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ನಿಗದಿತ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆಯಾಗಲಿದ್ದು, ಅದರಂತೆ ರೈತರಿಗೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಬಿತ್ತನೆ ಆರಂಭ: ಮುಂಗಾರು ಪೂರ್ವ ಮಳೆ ಚುರುಕಾಗಿರುವುದರಿಂದ ಈಗಾಗಲೇ ಕೆಲವೆಡೆ ಬಿತ್ತನೆ ಕಾರ್ಯ ಆರಂಭವಾಗಿದೆ. ಮೇ 15ರವರೆಗೆ 1.83 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 90,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ತುಮಕೂರು ಇತರೆಡೆ ಬಿತ್ತನೆ ಶುರುವಾಗಿದ್ದು, 3,412 ಕ್ವಿಂಟಾಲ್‌ ಬಿತ್ತನೆ ಬೀಜ ಪೂರೈಕೆಯಾಗಿದೆ.

ಪ್ರಸಕ್ತ ವರ್ಷದಲ್ಲಿ 73 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆ ಇದೆ. ಕಳೆದ ವರ್ಷ 71.67 ಲಕ್ಷ
ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೂ ಬರದಿಂದಾಗಿ ಬಹಳಷ್ಟು ಬೆಳೆ ಕೈಕೊಟ್ಟಿತ್ತು. ಈ ಬಾರಿ ಉತ್ತಮ ಮಳೆ ನಿರೀಕ್ಷೆ
ಹಿನ್ನೆಲೆಯಲ್ಲಿ ಕಳೆದ ಬಾರಿಗಿಂತ ಇನ್ನೂ ಎರಡು ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆಯಾಗುವ ಅಂದಾಜು ಇದೆ.

ಜೂನ್‌ 1ರಿಂದ ರಸಗೊಬ್ಬರ ಪಡೆಯಲು “ಆಧಾರ್‌’ ಸಲ್ಲಿಸುವುದು ಕಡ್ಡಾಯವಾಗಲಿದೆ. ಕೇಂದ್ರ ಸರ್ಕಾರ ದೇಶದ 19 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ “ಆಧಾರ್‌’ ಸಲ್ಲಿಸುವ ವ್ಯವಸ್ಥೆ ಜಾರಿಗೊಳಿಸಿದೆ. ಇದರಲ್ಲಿ ರಾಜ್ಯದ ತುಮಕೂರು ಜಿಲ್ಲೆಯೂ ಸೇರಿದ್ದು, ಮಾರ್ಚ್‌ನಿಂದ ಜಾರಿಯಾಗಿದೆ. ಆರಂಭದಲ್ಲಿ “ಆಧಾರ್‌’ ಜತೆಗೆ ಮತದಾರರ ಗುರುತಿನ ಚೀಟಿಯನ್ನು ಪರಿಗಣಿಸಲಾಗುವುದು. ನಂತರ
“ಆಧಾರ್‌’ ಸಲ್ಲಿಕೆ ಕಡ್ಡಾಯವಾಗಲಿದೆ. ಇದರಿಂದ ರೈತರು ರಸಗೊಬ್ಬರ ಖರೀದಿಸಿದ ಪ್ರಮಾಣಕ್ಕಷ್ಟೇ ಸಬ್ಸಿಡಿ ಮೊತ್ತವು
ಸಂಬಂಧಪಟ್ಟ ಗೊಬ್ಬರ ಕಂಪನಿಗಳಿಗೆ ತಲುಪಲಿದೆ.
– ಎಚ್‌.ಎಸ್‌.ದೇವರಾಜ್‌. ಜಂಟಿ ಕೃಷಿ ನಿರ್ದೇಶಕ, ಕೃಷಿ ಇಲಾಖೆ

ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಅಗತ್ಯವಿರುವ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರಿಗೆ
ಸಕಾಲದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ ವಹಿಸಲಾಗಿದ್ದು, ಯಾವುದೇ ರೀತಿಯಲ್ಲಿ
ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
– ಬಿ.ವೈ.ಶ್ರೀನಿವಾಸ್‌,ಕೃಷಿ ಇಲಾಖೆ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next