Advertisement

ನೇರ ನಗದು ವರ್ಗಕ್ಕೆ ಆಧಾರ್‌ ಸೀಡಿಂಗ್‌ ಸಮಸ್ಯೆ! ಕೆವೈಸಿ ಬೇರೆ, ಸೀಡಿಂಗ್‌ ಬೇರೆ

12:59 AM Sep 29, 2022 | Team Udayavani |

ಕುಂದಾಪುರ: ಸರಕಾರದ ವಿವಿಧ ಯೋಜನೆಗಳ ಫ‌ಲಾನುಭವಿಗಳು ಮತ್ತು ಅರೆಕಾಲಿಕ ನೌಕರಿಯ ವೇತನ ಪಡೆಯುವವರಿಗೆ ಬ್ಯಾಂಕ್‌ ಖಾತೆಗೇ ನೇರ ನಗದು ವರ್ಗಾವಣೆ ನಡೆಯುತ್ತಿದೆ. ಆದರೆ ಆಧಾರ್‌ ಸೀಡಿಂಗ್‌ ಸಮಸ್ಯೆಯ ಕಾರಣ ಪ್ರಸ್ತುತ ಎಲ್ಲೆಡೆ ಗೊಂದಲ ಉಂಟಾಗಿದೆ.

Advertisement

ನಕಲಿ ಫಲಾನುಭವಿಗಳನ್ನು ತಡೆಯಲು, ಸರಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಆಧಾರ್‌ ಆಧಾರಿತ ನೇರ ನಗದು ವರ್ಗಾವಣೆಯ ಮೂಲಕ ತಲುಪಿಸುವಂತೆ ಕೇಂದ್ರ ಸರಕಾರ ಸೂಚನೆ ನೀಡಿದೆ.
ಯಾರಿಗೆಲ್ಲ ಕಾರ್ಮಿಕ ಯೋಜನೆಗಳು, ವಸತಿ ಯೋಜನೆಗಳು, ಸಬ್ಸಿಡಿಗಳು, ಕಂದಾಯ ಇಲಾಖೆಯ ವಿವಿಧ ಸೌಲಭ್ಯ, ಪಿಂಚಣಿ, ಅಡುಗೆ ಅನಿಲ, ತೋಟಗಾರಿಕೆ, ಕೃಷಿ ಇಲಾಖೆ ಸೌಲಭ್ಯದ ರೈತರು, ಆರೋಗ್ಯ ಕಾರ್ಯಕರ್ತರು (ಆಶಾ), ಅಂಗನವಾಡಿ ಕಾರ್ಯಕರ್ತರು, ಶಾಲಾ ಅಡುಗೆ ಸಿಬಂದಿ, ಪೌರ ಕಾರ್ಮಿಕರು ಮೊದಲಾದವರಿಗೆ ಇದು ಅನ್ವಯ ಪಾವತಿ ದೇಶದಲ್ಲಿ 77 ಕೋಟಿಗೂ ಹೆಚ್ಚು ಬ್ಯಾಂಕ್‌ ಖಾತೆಗಳು ಆಧಾರ್‌ನೊಂದಿಗೆ ಲಿಂಕ್‌ ಆಗಿವೆ. ಕಳೆದ 3 ವರ್ಷಗಳಲ್ಲಿ 20 ಇಲಾಖೆಗಳಲ್ಲಿ 117 ಯೋಜನೆಗಳ ಪ್ರಯೋಜನಗಳನ್ನು, 500 ಲಕ್ಷಕ್ಕೂ ಹೆಚ್ಚು ವಹಿವಾಟಿನಲ್ಲಿ 13,200 ಕೋ. ರೂ.ಗಳನ್ನು ಡಿಬಿಟಿ ಮೂಲಕ ವಿತರಿಸಲಾಗಿದೆ.

ಬಾಕಿ
ರಾಜ್ಯದಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ  ಯೋಜನೆಯಡಿ ರೈತರಿಗೆ 91.99 ಕೋಟಿ ರೂ. ಡಿಬಿಟಿಯಲ್ಲಿ ಪಾವತಿಯಾಗದೆ ಮೂರು ವರ್ಷಗಳಿಂದ ಬಾಕಿಯಿದೆ. “ಕ್ಷೀರಸಿರಿ ಯೋಜನೆ’ಯಲ್ಲೂ 8,464 ಮಂದಿ ಹಾಲು ಉತ್ಪಾದಕರಿಗೆ 56.08 ಲಕ್ಷ ರೂ. ಪಾವತಿಯಾಗಿಲ್ಲ ಎಂದು ಸಿಎಜಿ ಕಳೆದ ವಾರ ಎಚ್ಚರಿಸಿದೆ. ಡಿಬಿಟಿ ಮೂಲಕ ನಡೆಸಿದ ವಹಿವಾಟುಗಳಲ್ಲಿ ಶೇ. 83ರಷ್ಟು ಯಶಸ್ವಿಯಾಗಿ, ಶೇ. 14ರಷ್ಟು ತಿರಸ್ಕೃತವಾಗಿವೆ. ವಿಫಲವಾದ ವಹಿವಾಟು ಸರಿಪಡಿಸಿ ಪುನಾರಂಭಿಸುವಲ್ಲಿ ಸಂಬಂಧಿ ಸಿದ ಇಲಾಖೆಗಳು ಹಿಂದುಳಿದು 91,283 ವಹಿವಾಟುಗಳು ಪುನಾರಂಭಕ್ಕೆ ಕಾಯುತ್ತಿವೆ.

ಹಳೆ ಬಾಕಿ
2018-19 ಹಾಗೂ 2019-20ರ ಅವಧಿ ಯಲ್ಲಿ 6.67 ಲಕ್ಷ ಫಲಾನುಭವಿಗಳು 153.30 ಕೋಟಿ ರೂ.ಗಳಷ್ಟು ಡಿಬಿಟಿ ಮೂಲಕ ಹಣ ಬಾರದೇ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಆ ವರ್ಷ ಡಿಬಿಟಿ ಸಾಧ್ಯವಾಗದೇ 22 ಇಲಾಖೆಗಳ 168 ಯೋಜನೆಗಳ 12,829.02 ಕೋ.ರೂ. ನಗದಿನಲ್ಲಿ ಪಾವತಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ ಮತ್ತು ರೈತ ಸಿರಿ ಯೋಜನೆಗಳನ್ನು ಡಿಬಿಟಿ ಪೋರ್ಟಲ್‌ಗೆ ಅಳವಡಿಸಿದ್ದರೂ 145.94 ಕೋ.ರೂ. ಡಿಬಿಟಿ ಪಾವತಿಗಳನ್ನು ಮಾಡಲು ಸಾಧ್ಯವಾಗಿಲ್ಲ.

ಯಾಕಾಗಿ ಬಾಕಿ
ನಿಮ್ಮ ಗ್ರಾಹಕರನ್ನು ಅರಿಯಿರಿ (ಕೆವೈಸಿ) ಪ್ರಕ್ರಿಯೆಯಲ್ಲಿ ಆಧಾರ್‌, ಪಾನ್‌ ಇತ್ಯಾದಿ ಪಡೆದು ದಾಖಲಿಸಿದ್ದರೂ ಆಧಾರ್‌ ಸೀಡಿಂಗ್‌ ಮಾಡದ ಹೊರತು ಯಾರದ್ದೇ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಸಾಧ್ಯವಿಲ್ಲ.

Advertisement

ಏನಿದು ಸೀಡಿಂಗ್‌
ಕೆವೈಸಿಯ ಹೊರತಾಗಿ ವ್ಯಕ್ತಿಯೊಬ್ಬರ ಒಂದು ಬ್ಯಾಂಕ್‌ ಖಾತೆಗೆ ಆಧಾರ್‌ ಸೀಡಿಂಗ್‌ ಮಾಡಬೇಕಾಗುತ್ತದೆ. ಇದನ್ನು ಬ್ಯಾಂಕ್‌ಗಳೇ ಮಾಡಬೇಕು. ಒಬ್ಬರೇ ವ್ಯಕ್ತಿ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದರೆ ಯಾವುದಾದರೂ ಒಂದು ಖಾತೆಗೆ ಮಾತ್ರ ಸೀಡಿಂಗ್‌ ಸಾಧ್ಯವಾಗುತ್ತದೆ. ಕೆವೈಸಿ ಎಲ್ಲ ಖಾತೆಗೂ ಬೇಕಾಗುತ್ತದೆ.

ಗೊಂದಲ
ಬೇರೆ ಬೇರೆ ಖಾತೆಗಳನ್ನು ಹೊಂದಿ ಯಾವುದಾದರೂ ಒಂದು ಖಾತೆ ಸೀಡಿಂಗ್‌ ಆಗಿದ್ದರೆ ಆ ಖಾತೆಗೆ ಡಿಬಿಟಿ ಹಣ ಪಾವತಿಯಾಗುತ್ತದೆ. ನಿತ್ಯ ಬಳಸುವ ಖಾತೆಗೆ ಹಣ ಜಮೆಯಾಗಿಲ್ಲ ಎಂದು ಗಾಬರಿಯಾಗುವ ಬದಲು ಯಾವ ಖಾತೆಗೆ ಹಣ ಬಂದಿದೆ ಎಂದು ಪರಿಶೀಲಿಸದಿದ್ದರೆ ಗೊಂದಲ ಸಹಜ. ಬ್ಯಾಂಕ್‌ಗಳು ಈ ವಿಚಾರದಲ್ಲಿ ಗ್ರಾಹಕರ ಜತೆ ನಿರಾಸಕ್ತಿ ತೋರಿಸುತ್ತಿವೆ.

ನಾವೇ ನೋಡಬಹುದು
ಆಧಾರ್‌ ಪೋರ್ಟಲ್‌ಗೆ ಹೋಗಿ (https://www.uidai.gov.in/) ಭಾಷೆಯನ್ನು ಆಯ್ಕೆ ಮಾಡಿ, ಮೈ ಆಧಾರ್‌ (ನನ್ನ ಆಧಾರ್‌) ಕ್ಲಿಕ್‌ ಮಾಡಬೇಕು. ಆಧಾರ್‌ ಸರ್ವಿಸಸ್‌ (ಆಧಾರ್‌ ಸೇವೆಗಳು) ಆಯ್ಕೆ ಮಾಡಿ. ಆಧಾರ್‌ ಲಿಂಕಿಂಗ್‌ ಸ್ಟೇಟಸ್‌ (ಆಧಾರ್‌ ಸಂಪರ್ಕ ಸ್ಥಿತಿಯಲ್ಲಿ ಬ್ಯಾಂಕ್‌ ಲಿಂಕ್‌ ಸ್ಥಿತಿ ಪರಿಶೀಲಿಸಿ) ಆಯ್ಕೆ ಮಾಡಿ ಆಧಾರ್‌ ನಂಬರ್‌ ದಾಖಲಿಸಿ ಒಟಿಪಿ ಕೊಟ್ಟರೆ ಯಾವ ಖಾತೆಗೆ ಆಧಾರ್‌ ಸೀಡಿಂಗ್‌ ಆಗಿದೆ ಎಂಬ ಮಾಹಿತಿ ದೊರೆಯುತ್ತದೆ.

ಆಧಾರ್‌ ಸೀಡಿಂಗ್‌ ಡಿಬಿಟಿ ಗೊಂದಲ ಗಮನಕ್ಕೆ ಬಂದಿದೆ. ಆಯಾ ಇಲಾಖೆಗಳೇ ತಮ್ಮ ಫ‌ಲಾನುಭವಿಗಳಿಗೆ ಸ್ಪಷ್ಟ ಮಾಹಿತಿ, ಜಾಗೃತಿ ಮೂಡಿಸಬೇಕೆಂದು ಸೂಚಿಸಲಾಗಿದೆ. ಬ್ಯಾಂಕ್‌ಗಳಲ್ಲಿ ಆಧಾರ್‌ ಸೀಡಿಂಗ್‌ಗೆ ನಿರ್ಲಕ್ಷ್ಯ ಮಾಡದಂತೆ ಸೂಚಿಸಲಾಗುವುದು.
– ಕೂರ್ಮಾ ರಾವ್‌ ಎಂ.,
ಜಿಲ್ಲಾಧಿಕಾರಿ, ಉಡುಪಿ

– ಲಕ್ಷ್ಮೀ ಮಚ್ಚಿನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next