Advertisement

ಆಧಾರ್‌ ನೋಂದಣಿ ಪುನಾರಂಭ

08:30 AM May 22, 2019 | Team Udayavani |

ಸಂತೆಮರಹಳ್ಳಿ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿರುವ ಪಡಸಾಲೆಯಲ್ಲಿ ಆಧಾರ್‌ ನೋಂದಣಿಯನ್ನು ಪುನಾರಂಭ ಮಾಡಲಾಗಿದೆ. ಈ ಬಗ್ಗೆ ಉದಯವಾಣಿ ಮೇ. 15 ರಂದು ಆಧಾರ್‌ ಕೇಂದ್ರ ಸ್ಥಗಿತ, ಸಾರ್ವಜನಿಕರ ಪರದಾಟ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಆಧಾರ್‌ ನೋಂದಣಿ ಕಾರ್ಯಕ್ಕೆ ಮರುಚಾಲನೆ ನೀಡಿದ್ದಾರೆ.

Advertisement

ತಾಲೂಕು ಕಚೇರಿಯ ಪಡೆಸಾಲೆಯಲ್ಲಿ ಹಲವು ತಿಂಗಳಿಂದಲ್ಲೂ ಆಧಾರ್‌ ಕಾರ್ಡ್‌ ನೋಂದಣಿ ಸ್ಥಗಿತಗೊಂಡಿತ್ತು. ಇದರಿಂದ ತಾಲೂಕಿನ ಸಾರ್ವಜನಿಕರು, ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಶಾಲೆ ಗಳಿಗೆ ಸೇರಲು ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು, ಆಧಾರ್‌ ಕಾರ್ಡ್‌ನಲ್ಲಿ ಹೆಸರು, ಊರು, ಫೋನ್‌ ಸಂಖ್ಯೆ ತಿದ್ದುಪಡಿ ಮಾಡಿಸಿಕೊಳ್ಳಲು ಸಾರ್ವಜನಿಕರು ಪರದಾಡುತ್ತಿದ್ದರು.

ಈ ಸೌಲಭ್ಯ ಸರ್ಕಾರಿ ಕಚೇರಿಯಲ್ಲಿ ಲಭ್ಯವಿಲ್ಲದ ಕಾರಣ ಖಾಸಗಿ ಕಂಪ್ಯೂಟರ್‌ ಕೇಂದ್ರಗಳಿಗೆ ಸಾರ್ವಜನಿಕರು ಎಡತಾಕುವ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡಲೇ ಆಧಾರ್‌ ನೋಂದಣಿ ಕೇಂದ್ರವನ್ನು ಪ್ರಾರಂಭ ಮಾಡಬೇಕೆಂಬುದು ಸಾರ್ವಜನಿಕರ ಬೇಡಿಕೆಯಾಗಿತ್ತು.

ಶೌಚಾಗೃಹ, ಕುಡಿಯುವ ನೀರಿನ ಸಮಸ್ಯೆ ಇನ್ನೂ ನೀಗಿಲ್ಲ: ಪಡಸಾಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿನ ಶುದ್ಧ ಕುಡಿಯುವ ನೀರಿನ ಆರ್‌ಒ ಘಟಕ ಕೆಟ್ಟು ನಿಂತಿದೆ. ಜೊತೆಗೆ ಶೌಚಗೃಹದಲ್ಲೂ ನೀರಿಲ್ಲದೆ ಇದರ ಬಳಕೆಯಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

● ಫೈರೋಜ್‌ಖಾನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next