ನಗರ : ಆಧಾರ್ ಗುರುತು ಚೀಟಿ ಜಾರಿಗೊಳಿಸಿ ವರ್ಷ ಹಲವು ಕಳೆದರೂ ಸಂಬಂಧಿತ ಸಮಸ್ಯೆಗಳು ಮಾತ್ರ ಬಿಗಡಾಯಿಸುತ್ತಲೇ ಇದೆ. ತಿದ್ದುಪಡಿ, ನೋಂದಣಿಗೆ ಸಂಬಂಧಿಸಿದ ಕೆಲಸಗಳನ್ನು ಸೀಮಿತ ಸಂಖ್ಯೆಯ ಕೇಂದ್ರಗಳಲ್ಲಿ ಮಾಡುತ್ತಿರುವುದರಿಂದ ಆಧಾರ್ ಕೇಂದ್ರಗಳಲ್ಲಿ ಮುಂಜಾನೆಯಿಂದಲೇ ಜನಸಂದಣಿ ಕಾಣಿಸುತ್ತಿದೆ.
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ಸಾವಿರಕ್ಕೂ ಮಿಕ್ಕಿ ಜನಸಂದಣಿ ಕಂಡುಬಂತು. ಬೆಳ್ಳಂಬೆಳಗ್ಗೆ ಇಲ್ಲಿನ ಸಂದಣಿ ಕಂಡು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿತ್ತು. ಆಧಾರ್ ನೋಂದಣಿ, ತಿದ್ದುಪಡಿ ಮಾಡುವವರಿಗೆ ಟೋಕನ್ ನೀಡಲಾಗುತ್ತದೆ ಎನ್ನುವ ವಿಚಾರಕ್ಕೆ ಇಷ್ಟು ಜನ ಸೇರಿದ್ದರು. ಹೆಚ್ಚಿನವರು ಮುಂಜಾನೆ 4 ಗಂಟೆಯಿಂದ ಕ್ಯೂ ನಿಂತಿದ್ದರು.
ಬಿಗಡಾಯಿಸಿದ ಸಮಸ್ಯೆ
ದಿನವೊಂದಕ್ಕೆ 20ರಿಂದ 25 ಮಂದಿಗೆ ಮಾತ್ರ ಆಧಾರ್ ಕುರಿತ ಸೇವೆ ನೀಡಲು ಸಾಧ್ಯವಿರುವ ಕಾರಣ ಟೋಕನ್ ಮೂಲಕ ನಿರ್ವಹಿಸಲಾಗುತ್ತದೆ. ಆರಂಭದಲ್ಲಿ ಆಯಾ ದಿನವೇ ಟೋಕನ್ ನೀಡಲಾಗುತ್ತಿತ್ತು. ಇದರಿಂದ ಭಾರೀ ಸಂಖ್ಯೆಯ ಜನ ಬಂದು ಕ್ಯೂ ನಿಂತು ಕೆಲವೇ ಮಂದಿ ಟೋಕನ್ ಪಡೆಯಲು ಶಕ್ತರಾಗಿ ಇತರರು ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಮತ್ತೆ ಮರುದಿನ ಬರಬೇಕಾಗುತ್ತಿತ್ತು.
ಈ ಸಮಸ್ಯೆಯ ಕುರಿತು ಆಕ್ರೋಶ ವ್ಯಕ್ತವಾದ ಬಳಿಕ ಮಾರ್ಚ್ ಎರಡನೇ ವಾರದ ಪೂರ್ತಿ ತಿಂಗಳಿಗೆ ಬೇಕಾಗುವಷ್ಟು ಟೋಕನ್ ಒಂದೇ ದಿನ ವಿತರಿಸಲಾಗಿತ್ತು. ಎ. 1ರಂದು ಮುಂದಿನ ಟೋಕನ್ ವಿತರಿಸಲಾಗುವುದು ಎಂದು ಬೋರ್ಡ್ ಅಳವಡಿಸಲಾಗಿದ್ದ ಹಿನ್ನೆಲೆಯಲ್ಲಿ ಸೋಮವಾರ ಭಾರೀ ಸಂಖ್ಯೆಯ ಗ್ರಾಹಕರು ಮುಗಿಬಿದ್ದರು. ಪುತ್ತೂರಿನ ದರ್ಬೆ ಅಂಚೆ ಕಚೇರಿಯಲ್ಲೂ ಆಧಾರ್ ತಿದ್ದುಪಡಿ, ನೋಂದಣಿ ಮಾಡಿಸಲಾಗುತ್ತಿದೆ. ಪುತ್ತೂರು ವಿಭಾಗದ ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ ಮತ್ತು ಕಾರ್ಕಳ ಅಂಚೆ ಕಚೇರಿಗಳಲ್ಲೂ ಸೇವೆ ಲಭ್ಯವಿದೆ. ಇದಕ್ಕಾಗಿಯೇ ಸಿಬಂದಿಯನ್ನು ತರಬೇತಿಗೊಳಿಸಿದ್ದೇವೆ. ಸಿಬಂದಿ ಕೊರತೆ ಸಮಸ್ಯೆಯ ನಡುವೆಯೂ ಉತ್ತಮ ಸೇವೆ ನೀಡಲು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ಅಂಚೆ ಕಚೇರಿ ಅಧಿಕಾರಿಗಳು.
ಅಂಚೆ ಕಚೇರಿ ತೆರೆದುಕೊಂಡ ಅನಂತರ ಸಿಬಂದಿ ಟೋಕನ್ ನೀಡುತ್ತಾರೆ. ಸೀರಿಯಲ್ ನಂಬರ್‌ನಂತೆ ನೋಂದಣಿ, ತಿದ್ದುಪಡಿ ಕೆಲಸ ನಡೆಯುತ್ತದೆ. ಜನ ಅಧಿಕವಾಗಿರುವುದರಿಂದ ತಡವಾದರೆ ಟೋಕನ್ ಸಿಗದು ಎಂದು ಮುಂಜಾನೆಯೇ ಬಂದಿದ್ದೇನೆ. ತಿಂಡಿ ತಿನ್ನಲು ಹೋದರೆ ಅವಕಾಶ ತಪ್ಪುವ ಭಯ ಇದೆ ಎಂದು ಮಹಿಳೆಯೊಬ್ಬರು ಅಲವತ್ತುಕೊಂಡರು.
ಬ್ಯಾಂಕ್‌ನಲ್ಲೂ ರಶ್
ನಗರದ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲೂ ಸೋಮವಾರ ಆಧಾರ್ ಗ್ರಾಹಕರ ಸರತಿ ಸಾಲು ಕಂಡುಬಂತು. ಮಾರ್ಚ್ ತಿಂಗಳಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್ ಕಾರಣದಿಂದ ಕೆಲ ದಿನಗಳ ಕಾಲ ಇಲ್ಲಿ ಆಧಾರ್ ತಿದ್ದುಪಡಿಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಸಮಸ್ಯೆ ನಿವಾರಣೆಯಾಗಿ ಟೋಕನ್ ಮೂಲಕ ತಿದ್ದುಪಡಿ ಕೆಲಸ ಮಾಡಿಕೊಡಲಾಗುತ್ತಿದೆ ಎಂದು ಬ್ಯಾಂಕಿನ ಮ್ಯಾನೇಜರ್ ತಿಳಿಸಿದ್ದಾರೆ. ಎ. 1ರಂದು 80 ಟೋಕನ್ ವಿತರಿಸಲಾಗುವುದು ಎಂದು ಬ್ಯಾಂಕ್ ಎದುರು ಫಲಕ ಅಳವಡಿಸಿದ್ದರೂ 250ಕ್ಕೂ ಹೆಚ್ಚು ಮಂದಿ ಬ್ಯಾಂಕ್‌ನ ಎದುರು ಸರತಿ ಸಾಲಿನಲ್ಲಿ ನಿಂತಿದ್ದರು.
ಆತಂಕ ಬೇಡ
ಬಂದವರೆಲ್ಲರಿಗೂ ಟೋಕನ್ ನೀಡಿದ್ದೇವೆ. ಆಧಾರ್ ನೋಂದಣಿಗೆ ಬರಬೇಕಾದ ದಿನಾಂಕ ಮತ್ತು ಸಮಯ ಸಹಿತ ನಿಗದಿ ಮಾಡಿ ತಿಳಿಸಿದ್ದೇವೆ. ಹೀಗಾಗಿ ಜನರು ಆತಂಕ ಪಡಬೇಕಾಗಿಲ್ಲ. ಟೋಕನ್ ಸಿಗುವುದಿಲ್ಲ ಎನ್ನುವ ಆತಂಕದಿಂದ ಜನ ಮುಂಜಾನೆಯೇ ಬಂದು ನಿಂತಿರಬಹುದು. ಮುಂದಕ್ಕೆ ಟೋಕನ್ ನೀಡುವ ದಿನಾಂಕ ಪ್ರಕಟಿಸಲಾಗುವುದು.
-ಜಗದೀಶ್ ಪೈ, ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು