ಹೊಸದಿಲ್ಲಿ : ಆಧಾರ್ ಅಂಕಿ ಅಂಶಗಳನ್ನು ಹಂಚಿ ಕೊಳ್ಳುವ ಮೂಲಕ ನಾಗರಿಕರ ಪೌರ ಹಕ್ಕುಗಳ ಅವಸಾನವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿಂದು ಆಧಾರ್ ಕುರಿತ ವಿಚಾರಣೆಯಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿದ ಸುಪ್ರೀಂ ಕೋರ್ಟ್ ವಕೀಲ ಶ್ಯಾಮ್ ದಿವಾನ್ ವಾದಿಸಿದರು.
ಆಧಾರ್ ನಂಬರನ್ನು ಸರಕಾರದ ವಿವಿಧ ಜನ ಕಲ್ಯಾಣ ಯೋಜನೆಗಳಿಗೆ ಲಿಂಕ್ ಮಾಡುವಲ್ಲಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲಾದ ಅರ್ಜಿಗಳ ವಿಚಾರಣೆಯನ್ನು ಇಂದು ಬುಧವಾರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.
“ಆಧಾರ್ ನಾಗರಿಕರ ಪೌರ ಹಕ್ಕುಗಳನ್ನು ಸಾಯಿಸುತ್ತದೆ; ಜನರ ಸಂವಿಧಾನವನ್ನು ಇದು ಸರಕಾರದ ಸಂವಿಧಾನವನ್ನಾಗಿ ಮಾರ್ಪಡಿಸುತ್ತದೆ’ ಎಂದು ಶ್ಯಾಮ್ ದಿವಾನ್ ಹೇಳಿದರು.
ಆಧಾರ್ ಸಾಂವಿಧಾನಿಕ ಸಿಂಧುತ್ವ ಕುರಿತ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠವು ನಡೆಸುತ್ತಿದೆ. ಈ ಪೀಠದಲ್ಲಿ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಎ ಎಂ ಖಾನ್‌ವಿಲ್ಕರ್, ನ್ಯಾ. ಆದರ್ಶ್ ಕುಮಾರ್ ಸಿಕ್ರಿ, ನ್ಯಾ. ಡಿ ವೈ ಚಂದ್ರಚೂಡ್ ಮತ್ತು ನ್ಯಾ. ಅಶೋಕ್ ಭೂಷಣ್ ಇದ್ದಾರೆ.
ಜನರ ಖಾಸಗಿತನವನ್ನು ಉಲ್ಲಂಘನೆ ಮಾಡುವ ರೀತಿಯಲ್ಲಿ ಆಧಾರ್ ಅಂಕಿ ಅಂಶ ಸೋರಿಕೆಯಾಗಿರುವ ಬಗ್ಗೆ ಹಲವಾರು ಸಂದೇಹಗಳಿವೆ. ಆಧಾರ್ ನಂಬರನ್ನು ಮೊಬೈಲ್ ಫೋನ್‌ಗಳಿಗೆ, ಬ್ಯಾಂಕ್ ಖಾತೆಗಳಿಗೆ ಮತ್ತು ಇತರ ಸರಕಾರಿ ಸೇವಾ ಸೌಲಭ್ಯಗಳ ಯೋಜನೆಗೆ ಜೋಡಿಸುವುದಕ್ಕೆ ಈ ಹಿಂದೆ ನಿಗದಿಯಾಗಿದ್ದ ಅಂತಿಮ ದಿನವನ್ನು 2018ರ ಮಾರ್ಚ್ 31ಕ್ಕೆ ವಿಸ್ತರಿಸಲಾಗಿದೆ.