Advertisement

ಆ. 1ರಿಂದ ಆಧಾರ್‌-ಎಪಿಕ್‌ ಜೋಡಣೆ ಅಭಿಯಾನ

10:42 AM Jul 26, 2022 | Team Udayavani |

ಉಡುಪಿ: ಕೇಂದ್ರ ಚುನಾವಣೆ ಆಯೋಗದ ಸೂಚನೆಯಂತೆ ಎಪಿಕ್‌ ಕಾರ್ಡ್‌ಗೆ ಆಧಾರ್‌ ಜೋಡಿಸುವ ಪ್ರಕ್ರಿಯೆ ಆಗಸ್ಟ್‌ 1ರಿಂದ ಜಿಲ್ಲಾದ್ಯಂತ ಶುರುವಾಗಲಿದೆ. ಇದು ದೊಡ್ಡ ಅಭಿಯಾನವಾಗಿ ನಡೆಯಲಿದ್ದು, ಸ್ವಯಂ ಪ್ರೇರಿತವಾಗಿ ಆಧಾರ್‌ ನೋಂದಣಿಗೆ ಆನ್‌ ಲೈನ್‌ ಹಾಗೂ ಆಫ್ಲೈನ್‌ನಲ್ಲೂ ಅವಕಾಶ ಮಾಡಲಾಗುವುದು.

Advertisement

1950ರ ಜನತ ಪ್ರಾತಿನಿಧ್ಯ ಅಧಿನಿಯಮದ ತಿದ್ದುಪಡಿಯಂತೆ ಎಪಿಕ್‌ಗೆ ಆಧಾರ್‌ ಲಿಂಕ್‌ ಮಾಡಲಾಗುವುದು. ಇದು ಸ್ವಯಂ ಪ್ರೇರಿತವಾಗಿ ನಡೆಯಲಿದೆ. ಆಧಾರ್‌ ಲಿಂಕ್‌ ಮಾಡಿಕೊಳ್ಳಲು ಇಚ್ಛಿಸದವರಿಗೆ ಯಾವುದೇ ಒತ್ತಡ ಅಥವಾ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲಿಟ್‌ ಮಾಡುವ ಅಥವಾ ಬೇರೆ ಯಾವುದೇ ಸಮಸ್ಯೆ ನೀಡಬಾರದು ಎಂಬ ನಿರ್ದೇಶನವೂ ಇದೆ.

ಹೊಸದಾಗಿ ಅರ್ಜಿ ಸಲ್ಲಿಸುವವರು ಕೂಡ ಆಧಾರ್‌ ನೋಂದಣಿಯ ಜತೆಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಎಪಿಕ್‌ ಕಾರ್ಡ್‌ ಹೊಂದಿರುವವರು ಕೂಡ ಆನ್‌ಲೈನ್‌ ಅಥವಾ ಆಫ್ಲೈನ್‌ನಲ್ಲಿ ಆಧಾರ್‌ ಜೋಡಣೆ ಮಾಡಿಕೊಳ್ಳಬಹುದು.

ದೃಢೀಕರಣದ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಯಾದಲ್ಲಿ ತಿದ್ದುಪಡಿಗೂ ಅವಕಾಶವಿದೆ. ಆಧಾರ್‌ ಅಥವಾ ಎಪಿಕ್‌ ಕಾರ್ಡ್‌ ಎರಡರಲ್ಲೂ ಹೆಸರು ಅಥವಾ ಹುಟ್ಟಿದ ದಿನಾಂಕ ಇತ್ಯಾದಿ ಭಿನ್ನವಾಗಿದ್ದಲ್ಲಿ ಮೊದಲು ಅದರ ತಿದ್ದುಪಡಿ ಮಾಡಿ ಅನಂತರವೇ ಲಿಂಕ್‌ ಮಾಡಬೇಕಾಗುತ್ತದೆ.

ಬಹು ಅರ್ಹತೆ

Advertisement

ಪ್ರತೀ ಬಾರಿಯೂ ಹೊಸದಾಗಿ ವೋಟರ್‌ ಕಾರ್ಡ್‌ ನೋಂದಣಿಗೆ ಜ.1ಕ್ಕೆ 18 ವರ್ಷ ತುಂಬಿರಬೇಕು ಎಂಬ ಒಂದು ಆಯ್ಕೆ ಮಾತ್ರ ನೀಡಲಾಗುತ್ತಿತ್ತು. ಒಮ್ಮೆ ಅದು ಕಳೆದು ಹೋದರೆ ಒಂದು ವರ್ಷ ಕಾಯಬೇಕಿತ್ತು. ಈಗ ನಾಲ್ಕು ಆಯ್ಕೆ ನೀಡಲಾಗಿದೆ.

ಜ.1, ಎ.1, ಜು.1 ಹಾಗೂ ಅ. 1ಕ್ಕೆ ಅನ್ವಯವಾಗುವಂತೆ 18 ವರ್ಷ ತುಂಬಿದ ಕೂಡಲೇ ನೋಂದಣಿ ಮಾಡಿಕೊಳ್ಳಬಹುದು. ಅಲ್ಲದೆ 18 ವರ್ಷ ತುಂಬಲು ಮೂರು ಅಥವಾ ನಾಲ್ಕು ತಿಂಗಳು ಬಾಕಿಯಿದ್ದರೂ ಮುಂಚಿತವಾಗಿಯೇ ಬುಕ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಸಣ್ಣ ಬದಲಾವಣೆಗಳು

ಈ ಹಿಂದೆ ಅರ್ಜಿ ಸಲ್ಲಿಸುವಾಗ ಹೆಂಡತಿ ಎಂಬ ಪದ ಮಾತ್ರ ಇತ್ತು. ಈಗ ಅದನ್ನು ಸಂಗಾತಿ ಎಂದು ಮಾರ್ಪಡಿಸಲಾಗಿದೆ. ಅವನು ಅಥವಾ ಅವಳ ಸಂಗಾತಿ ಎಂದು ಲಿಂಗಕ್ಕೆ ಸಂಬಂಧಿಸಿದ ಕಾಲಂನಲ್ಲಿ ಬದಲಾವಣೆ ಮಾಡಲಾಗಿದೆ. ಹಾಗೆಯೇ ಚುನಾವಣೆ ನಡೆಯುವ ಸ್ಥಳದಲ್ಲಿ ಅಗತ್ಯ ತುರ್ತು ಬದಲಾವಣೆ ಮಾಡಿಕೊಳ್ಳಲು ಈ ಹಿಂದೆ ಅವಕಾಶ ಇರಲಿಲ್ಲ. ಈಗ ಜಿಲ್ಲಾಧಿಕಾರಿಗಳಿಗೆ ಆ ಅವಕಾಶ ನೀಡಲಾಗಿದೆ.

ಆಧಾರ್‌ ಜೋಡಣೆ ಯಾಗಿರುವ ಮೊಬೈಲ್‌ ಸಂಖ್ಯೆಗೆ ಒಟಿಪಿ ಪಡೆಯುವ ಮೂಲಕ ಸ್ವಯಂ ಆಗಿ ಎಪಿಕ್‌ ಕಾರ್ಡ್‌ ಜತೆಗೆ ದೃಢೀಕರಣ ಮಾಡಬಹುದು. ಈ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ, ದೃಢೀಕರಣವನ್ನು ಆಫ್ ಲೈನ್‌ನಲ್ಲಿ ಮಾಡಿಸಿ ಆಧಾರ್‌-ಎಪಿಕ್‌ ಜೋಡಣೆಗೂ ಅವಕಾಶವಿದೆ. ಇದಲ್ಲದೆ ಬೂತ್‌ ಮಟ್ಟದ ಅಧಿಕಾರಿಗಳು ಅಭಿಯಾನದ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡುವಾಗಲೂ ಆಧಾರ್‌ ಜೋಡಣೆ ಮಾಡಿಸಿಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಕೆಯಲ್ಲಿ ಸರಳೀಕರಣ: ಜಿಲ್ಲೆಯಲ್ಲಿ ಆಗಸ್ಟ್‌ 1ರಿಂದ ಎಪಿಕ್‌ ಜತೆಗೆ ಆಧಾರ್‌ ಜೋಡಿಸುವ ದೊಡ್ಡ ಅಭಿಯಾನ ಆರಂಭಿಸಲಿದ್ದೇವೆ. ಅರ್ಜಿಗಳಲ್ಲಿಯೂ ಸರಳೀಕರಣ ಮಾಡಲಾಗಿದೆ. ಈ ಹಿಂದೆ ಹೆಸರು ಬದಲಾವಣೆ, ವಿಧಾನಸಭೆ ಕ್ಷೇತ್ರ ಬದಲಾವಣೆ, ಸಣ್ಣಪುಟ್ಟ ತಿದ್ದುಪಡಿ ಹೀಗೆ ಎಲ್ಲದಕ್ಕೂ ಪ್ರತ್ಯೇಕ ಅರ್ಜಿ ನೀಡಬೇಕಾಗುತ್ತು. ಈಗ ಎಲ್ಲವನ್ನು ಒಂದೇ ಅರ್ಜಿಯಲ್ಲಿ ಮಾಡಿಕೊಳ್ಳಬಹುದಾದ ವ್ಯವಸ್ಥೆ ರೂಪಿಸಲಾಗಿದೆ. ಇದು ಆ.1ರಿಂದ ಜಾರಿಗೆ ಬರಲಿದೆ. ಇದಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಪ್‌ಡೇಟ್‌ ಮಾಡಿಕೊಳ್ಳಲಿದ್ದೇವೆ – ಕೂರ್ಮಾ ರಾವ್‌, ಜಿಲ್ಲಾಧಿಕಾರಿ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next