Advertisement

ಆಧಾರ್‌ ಕೇಂದ್ರ ಸ್ಥಗಿತ: ಸಾರ್ವಜನಿಕರು ಪರದಾಟ

09:44 PM May 14, 2019 | Lakshmi GovindaRaj |

ಯಳಂದೂರು: ಪಟ್ಟಣದ ತಹಶೀಲ್ದಾರ್‌ ಕಚೇರಿಯ ಪಡಸಾಲೆಯಲ್ಲಿ ಆಧಾರ್‌ ನೋಂದಣಿ ಕೇಂದ್ರ ಸ್ಥಗಿತಗೊಂಡು ನೋಂದಣಿಗೆ ಬರುವ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ 3 ವರ್ಷಗಳ ಹಿಂದೆ ರಾಜ್ಯ ಸರ್ಕಾರವು ಎಲ್ಲಾ ತಾಲೂಕು ಕಚೇರಿಯಲ್ಲಿ ಪಡಸಾಲೆ ಹೆಸರಿನಲ್ಲಿ ಒಂದೇ ಸೂರಿನಡಿ ಎಲ್ಲಾ ಸೇವೆ ಒದಗಿಸಲು ಯೋಜನೆ ರೂಪಿಸಿತು.

Advertisement

ಇಲ್ಲಿ ಆಧಾರ್‌, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಪಹಣಿ ಸೇರಿದಂತೆ 100ಕ್ಕೂ ಹೆಚ್ಚು ಸೇವೆ ಒದಗಿಸಲು ಮಹತ್ವದ ಹೆಜ್ಜೆ ಇಟ್ಟು ಈ ಯೋಜನೆ ಅನುಷ್ಠಾನ ಮಾಡಲಾಗಿತ್ತು. ಆದರೆ ಈ ಪಡಸಾಲೆಯಲ್ಲಿ ಆಧಾರ್‌ ಕಾರ್ಡ್‌ ನೋಂದಣಿ, ಪಡಿತರದಾರರ ರೇಷನ್‌ ಕಾರ್ಡ್‌ ನೋಂದಣಿ ನಡೆಯುತ್ತಿಲ್ಲ. ಜೊತೆಗೆ ಕುಡಿಯುವ ನೀರು, ಶೌಚಗೃಹ ಇಲ್ಲದೇ ಹಲವು ತಿಂಗಳಿಂದಲೂ ಸಾರ್ವಜನಿಕರು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.

ಆಧಾರ್‌ ಕಾರ್ಡ್‌ ನೋಂದಣಿ ಸ್ಥಗಿತ: ತಾಲೂಕಿನ ಪಡೆಸಾಲೆಯಲ್ಲಿ ಹಲವು ತಿಂಗಳಿಂದಲ್ಲೂ ಆಧಾರ್‌ ಕಾರ್ಡ್‌ ನೋಂದಣಿ ಸ್ಥಗಿತಗೊಂಡಿದೆ. ಇದರಿಂದ ತಾಲೂಕಿನ ಸಾರ್ವಜನಿಕರು, ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಶಾಲೆಗಳಿಗೆ ಸೇರಲು ಹಾಗೂ ಇತರೆ ಸೌಲಭ್ಯ ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯವಾಗಿ ಕೇಳುತ್ತಾರೆ.

ಆದರೆ ಬಹುತೇಕ ಆಧಾರ್‌ ಕಾರ್ಡ್‌ನಲ್ಲಿ ಹೆಸರು, ಊರು, ಫೋನ್‌ ಸಂಖ್ಯೆ ತಿದ್ದುಪಡಿ ಹೆಚ್ಚಾಗಿರುತ್ತದೆ. ಆದರೆ ಈ ಸೌಲಭ್ಯ ಸರ್ಕಾರಿ ಕಚೇರಿಯಲ್ಲಿ ಲಭ್ಯವಿಲ್ಲದ ಕಾರಣ ಖಾಸಗಿ ಕಂಪ್ಯೂಟರ್‌ ಕೇಂದ್ರಗಳಿಗೆ ಹೋಗಿ ಹೆಚ್ಚು ಹಣ ನೀಡಿ ಸರಿಪಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡಲೇ ಆಧಾರ್‌ ನೋಂದಣಿ ಕೇಂದ್ರವನ್ನು ಪ್ರಾರಂಭ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

ಕುಡಿಯುವ ನೀರಿನ ಸಮಸ್ಯೆ: ಪಡಸಾಲೆಗೆ ಬರುವ ಜನರಿಗೆ ಕುಡಿಯುವ ನೀರಿನ ಸೌಲಭ್ಯ ನೀಡಲು ಕಂದಾಯ ಇಲಾಖೆ ಶುದ್ಧ ಕುಡಿಯುವ ನೀರಿನ ಆರ್‌.ಒ ಯಂತ್ರವನ್ನು ಅಳವಡಿಸಿದೆ. ದಿನನಿತ್ಯ ಬರುವ ನೂರಾರು ಜನರು, ಅರ್ಜಿ ಸಲ್ಲಿಸಲು ಬರುವ ಸಾರ್ವಜನಿಕರು ಕೆಲ ಕಾಲ ಕುಳಿತುಕೊಳ್ಳಲು ಕಬ್ಬಿಣದ ಕುರ್ಚಿ, ಟಿವಿ ವ್ಯವಸ್ಥೆ ಮಾಡಿದೆ. ಆದರೆ ಟೀವಿ ನಿರುಪಯುಕ್ತವಾಗಿದ್ದು, ಕೆಲವು ಕುರ್ಚಿಗಳು ಮುರಿದು ಮೂಲೆ ಸೇರಿವೆ ಇವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

Advertisement

ಇದ್ದೂ ಇಲ್ಲದಂತಿರುವ ಶೌಚಗೃಹ: ಇಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಾಮೂಹಿಕ ಶೌಚಗೃಹ ನಿರ್ಮಿಸಲಾಗಿದೆ. ಆ ಮೂಲಕ ದಿನನಿತ್ಯ ಇಲ್ಲಿಗೆ ಬರುವ ಜನರಿಗೆ ಅನುಕೂಲ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಆದರೆ ಶೌಚಗೃಹ ನಿರ್ಮಿಸಿ ಹಲವು ವರ್ಷಗಳೇ ಕಳೆದಿವೆ. ಇದು ಉಪಯೋಗಕ್ಕೆ ಬರುತ್ತಿಲ್ಲ. ಇಲ್ಲಿಗೆ ನೀರಿನ ವ್ಯವಸ್ಥೆ ಇಲ್ಲ.

ಹಲವು ಬಾರಿ ಇದರ ದುರಸ್ತಿಯನ್ನು ಮಾಡಿಸಿದ್ದರೂ ಸರಿಯಾಗಿ ಬಳಕೆಯಾಗುತ್ತಿಲ್ಲ. ದಿನನಿತ್ಯ ಅಧಿಕಾರಿಗಳು ಈ ಮೂಲಕವೇ ಓಡಾಡುತ್ತಾರೆ. ಆದರೂ ಇದರ ದುರಸ್ತಿಗೆ ಕ್ರಮ ವಹಿಸಿಲ್ಲ. ಕಚೇರಿಗಳಿಗೆ ತಮ್ಮ ಕೆಲಸಕ್ಕೆ ಬರುವ ಸಾರ್ವಜನಿಕರು ಶೌಚಕ್ಕೆ ಹೋಗಬೇಕಾದರೆ ಪರದಾಡುವಂತಾಗಿದೆ. ಇದರಿಂದ ಅನಿವಾರ್ಯವಾಗಿ ಬಯಲನ್ನೇ ಅವಲಂಬಿಸುವಂತಾಗಿದೆ. ಈಗಲಾದರೂ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಬೇಕಿದೆ.

ಸಾರ್ವಜನಿಕರ ಆಗ್ರಹ: ತಾಲೂಕು ತಹಶೀಲ್ದಾರ್‌ ಕಚೇರಿ ಬಳಿ ಇರುವ ಪಡಸಾಲೆಯಲ್ಲಿ ಹಲವು ತಿಂಗಳಿಂದಲೂ ಕುಡಿಯುವ ನೀರು, ಕುರ್ಚಿ ಸೇರಿದಂತೆ ಸೌಲಭ್ಯಗಳಿಲ್ಲ. ಆಧಾರ್‌ ಕಾರ್ಡ್‌ ನೋಂದಣಿ ಸ್ಥಗಿತವಾಗಿದೆ, ಇದರಿಂದ ಚಿಕ್ಕ ಮಕ್ಕಳು ಹೊಸದಾಗಿ ಆಧಾರ್‌ ಮಾಡಿಸಲು ಹಾಗೂ ತಿದ್ದುಪಡಿ ಮಾಡಿಸಲು ಕಷ್ಟವಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಖಾಸಗಿ ಕಂಪ್ಯೂಟರ್‌ ಸೆಂಟರ್‌ಗಳಲ್ಲಿ ಈ ಸೇವೆ ಇದೆ ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಗಮನಹರಿಸಿ ಈ ಬಗ್ಗೆ ಕ್ರಮ ವಹಿಸಲಿ ಎಂದು ಗ್ರಾಮಸ್ಥರಾದ ಪ್ರಕಾಶ್‌ ಆಗ್ರಹಿಸಿದರು.

ಕಚೇರಿಯ ಪಡೆಸಾಲೆಯಲ್ಲಿ ಶೌಚಗೃಹ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಿಬ್ಬಂದಿಗೆ ಸೂಚಿಸುತ್ತೇನೆ, ಜೊತೆಗೆ ಆಧಾರ್‌ ಕಾರ್ಡ್‌ ನೋಂದಣಿ ಕೇಂದ್ರದಲ್ಲಿ ಕಂಪ್ಯೂಟರ್‌ ಆಪರೇಟರ್‌ ಇಲ್ಲದ ಕಾರಣ ಇದು ಸ್ಥಗಿತಗೊಂಡಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಆಪರೇಟರ್‌ನ್ನು ನೇಮಿಸುವಂತೆ ಪತ್ರ ಬರೆದು ಕ್ರಮವಹಿಸುತ್ತೇನೆ.
-ವರ್ಷಾ, ತಹಶೀಲ್ದಾರ್‌

* ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next