ಸಿದ್ದಾಪುರ: ಆಧಾರ್ ಕಾರ್ಡ್ ಪಡೆಯಲು ಕನಿಷ್ಟ ಐದಾರು ದಿನ ಕೆಲಸ ಬಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಮತ್ತು ತಾಯಂದಿರು ಪ್ರತಿನಿತ್ಯ ಕಚೇರಿಯ ಮುಂದೆ ನಿಂತು, ನಿಂತು ಹೈರಾಣಾಗುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನಸಾಮಾನ್ಯರ ಸಮಸ್ಯೆ ಬಗ್ಗೆ ಚಿಂತಿಸುತ್ತಿಲ್ಲ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸಿದ್ದಾಪುರ ಸೇರಿದಂತೆ ಇತರೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನತೆ ನಿತ್ಯ ಸಿದ್ದಾಪುರ ನಾಡ ತಹಶೀಲ್ದಾರ್ ಕಚೇರಿ ಮುಂದೆ ನಿದ್ದೆಗೆಟ್ಟು ಕಾಯುವ ದುಸ್ಥಿತಿ ಎದುರಾಗಿದೆ. ಜೂನ್ ತಿಂಗಳು ಆಗಿರುವುದರಿಂದ ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರು, ರೈತರು ವಿವಿಧ ಸೌಲಭ್ಯಗಳನ್ನು ಪಡೆಯಲು ಆಧಾರ್ ಅವಶ್ಯಕತೆ ಇರುವುದರಿಂದ ಜನ ಸಂದಣಿ ಹೆಚ್ಚಿದೆ.
ಟೋಕನ್ ವ್ಯವಸ್ಥೆ: ಇಲ್ಲಿಯ ನಾಡ ತಹಶೀಲ್ದಾರ್ ಕಚೇರಿಯಲ್ಲಿ ಆಧಾರ್ ಕಾರ್ಡ್ ಪಡೆಯಲು ಒಂದೇ ಸಿಸ್ಟಮ್ ಇರುವುದರಿಂದ ನೂಕು ನುಗ್ಗಲು ಮತ್ತು ಗಲಾಟೆ ಆಗಬಾರದೆಂಬ ಉದ್ದೇಶದಿಂದ ಇಲ್ಲಿಯ ನಾಡ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಟೋಕನ್ ವ್ಯವಸ್ಥೆ ಮಾಡಿದ್ದು ಒಂದು ದಿನಕ್ಕೆ 40 ಟೋಕನ್ ಮಾತ್ರ ನೀಡುತ್ತಾರೆ.
ಸರದಿ: ಈ ಟೋಕನ್ ಪಡೆದುಕೊಳ್ಳಲು ನಿತ್ಯ ನೂರಕ್ಕಿಂತ ಹೆಚ್ಚಿನ ಜನ ಸರದಿಯಲ್ಲಿ ನಿಲ್ಲುತ್ತಾರೆ. ಸಿದ್ದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನತೆ ನಸುಕಿನಲ್ಲೇ ಬರುತ್ತಾರೆ. ಇನ್ನೂ ಕೆಲವರು ದೂರದಿಂದ ಮಕ್ಕಳನ್ನು ಹೊತ್ತುಕೊಂಡು ರಾತ್ರೋ ರಾತ್ರಿ 8-10 ಕಿ.ಮೀ. ನಡೆದುಕೊಂಡು ಬಂದು ಸರದಿಯಲ್ಲಿ ನಿಲ್ಲುವ ಅನಿವಾರ್ಯತೆ ಸೃಷ್ಟಿಯಾಗಿದೆ.
ನಿತ್ಯ ನೂರಕ್ಕೂ ಹೆಚ್ಚು ಜನ ಬರುತ್ತಾರೆ. ಆದರೆ 40 ಜನಕ್ಕೆ ಮಾತ್ರ ಟೋಕನ್ ನಿಡುವುದರಿಂದ ಉಳಿದವರು ಮತ್ತೆ ರಾತ್ರಿ ಸರದಿಯಲ್ಲಿ ನಿಲ್ಲಬೇಕು. ಕೆಲವು ಬಾರಿ ಸರ್ವರ್, ವಿದ್ಯುತ್ ತೊಂದರೆ, ತಾಂತ್ರಿಕ ತೊಂದರೆ ಎದುರಾದಾಗ ಟೋಕನ್ ಪಡೆದುಕೊಂಡರೂ ಆಧಾರ್ ಕಾರ್ಡ್ ಪಡೆದುಕೊಳ್ಳಲು ಆಗದೇ ವ್ಯವಸ್ಥೆ ಬಗ್ಗೆ ಹಿಡಿಶಾಪ ಹಾಕುತ್ತಾ ವಾಪಾಸ್ಸಾಗುತ್ತಾರೆ.
•ಸಿದ್ದನಗೌಡ ಹೊಸಮನಿ