Advertisement

ಮಲೇಷ್ಯಾ ಪ್ರಜೆಗೆ ಆಧಾರ್‌: ಜಿಲ್ಲಾಡಳಿತದಿಂದ ತನಿಖೆ

12:22 PM Jan 31, 2018 | |

ಮಂಗಳೂರು: ಮಂಗಳೂರಿನಲ್ಲಿ ಮಲೇಷ್ಯಾದ ವಿದ್ಯಾರ್ಥಿಯೊಬ್ಬರಿಗೆ ಆಧಾರ್‌ ಕಾರ್ಡ್‌ ನೀಡಿರುವ ಬಗ್ಗೆ ತನಿಖೆ ನಡೆಸುವುದಾಗಿ ಜಿಲ್ಲಾಡಳಿತ ತಿಳಿಸಿದೆ.

Advertisement

ಮಲೇಷ್ಯಾದ ವಿದ್ಯಾರ್ಥಿ ಹೋಹ್‌ ಜಿಯಾನ್‌ ಮೆಂಗ್‌ಗೆ ಮಂಗಳೂರಿನಲ್ಲಿ ಆಧಾರ್‌ ಕಾರ್ಡ್‌ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳವಾರ ಪ್ರಕಟಗೊಂಡಿದ್ದ ವರದಿಗೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿರುವ ಅಪರ ಜಿಲ್ಲಾಧಿಕಾರಿ ಕುಮಾರ್‌, “ಆಧಾರ್‌ ಕಾರ್ಡ್‌ ನೀಡುವ ಯುಡಿಎಐ ಪ್ರಾಧಿ ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಆಧಾರ್‌ಗೆ ನೋಂದಣಿ ಮಾಡುವಾಗ ಮಲೇಷ್ಯಾ ಪ್ರಜೆ ಯಾವ ದಾಖಲೆಗಳನ್ನು ನೀಡಿ ದ್ದಾರೆ ಎಂಬ ಬಗ್ಗೆ ಮಾಹಿತಿ ಕೇಳಲಾಗಿದೆ. ಬೆಂಗ ಳೂರಿನಲ್ಲಿರುವ ಯುಡಿಎಐ ಅಧಿಕಾರಿಗಳ ಜತೆ ಮಂಗಳವಾರ ಬೆಳಗ್ಗೆ ಮಾತನಾಡಿದ್ದೇನೆ. ಯುಡಿಎಐ ಪ್ರಾಧಿಕಾರದ ಡಿಡಿಜಿ ಅವರಿಗೆ ಪತ್ರ ಬರೆದು ಮಾಹಿತಿ ಕೇಳಲಾಗಿದೆ. ಆಧಾರ್‌ ಕಾರ್ಡ್‌ ನೋಂದಣಿ ಮಾಡುವ ವೇಳೆ ಇದಕ್ಕೆ ಪೂರಕವಾಗಿ ಸೂಕ್ತ ದಾಖಲೆಗಳನ್ನು ನೀಡಬೇಕಾಗುತ್ತದೆ. ಆತ ಯುಡಿಎಐಗೆ ನೀಡಿರುವ ದಾಖಲೆಗಳನ್ನು ಕಳುಹಿಸಿ ಕೊಡುವಂತೆ ಕೋರಲಾಗಿದೆ. ದಾಖಲೆ ಗಳು ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳ ಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

ಆಧಾರ್‌ ದುರ್ಬಳಕೆ ಸರಿಯಲ್ಲ
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ನಳಿನ್‌ ಕುಮಾರ್‌, ರಾಜಕೀಯ ಒತ್ತಡಗಳಿಗೆ ಮಣಿದು ಈ ರೀತಿಯಲ್ಲಿ ಆಧಾರ್‌ ಕಾರ್ಡ್‌ ದುರ್ಬಳಕೆ ಮಾಡು ವುದು ಸರಿಯಲ್ಲ. ಮಲೇಷ್ಯಾ ಪ್ರಜೆಗೆ ಅಧಿಕಾರಿಗಳು ಆಧಾರ್‌ ಕಾರ್ಡ್‌ ನೀಡಿರುವ ಕುರಿತು ಪರಿಶೀಲನೆ ನಡೆಸಬೇಕು. ಬಾಂಗ್ಲದೇಶಿಗರಿಗೂ ಆಧಾರ್‌ ಕಾರ್ಡ್‌ ನೀಡಿರುವ ಕುರಿತು ಗೊಂದಲ ಗಳಿವೆ. ಇಂತಹ ಪ್ರಕರಣಗಳನ್ನು ತನಿಖೆ ನಡೆಸಿ, ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಚುನಾವಣಾ ಆಯೋಗಕ್ಕೆ ದೂರು
ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, “ಈಗ ಭಯೋತ್ಪಾದಕರಿಂದ ಹಿಡಿದು ಯಾರು ಬೇಕಾದರೂ ಆಧಾರ್‌ ಕಾರ್ಡ್‌ ಪಡೆದುಕೊಳ್ಳುವು ದಕ್ಕೆ ಅವಕಾಶವಿದೆ. ರಾಜ್ಯದಲ್ಲಿ ಈಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಕ್ರಮವಾಗಿ ಆಧಾರ್‌ಗೆ ನೋಂದಣಿ ಮಾಡಿಸಿ ಕೊಳ್ಳುವುದು ದೊಡ್ಡ ದಂಧೆಯಾಗಿ ನಡೆಯು ತ್ತಿದೆ. ಆಧಾರ್‌ ಕಾರ್ಡ್‌ ಬಂದ ಮೇಲೆ ಅಂಥವರ ಹೆಸರನ್ನು ನಿಧಾನವಾಗಿ ಮತದಾರರ ಪಟ್ಟಿಗೆ ಸೇರಿಸುವ ಕೆಲಸ ಆಗುತ್ತಿದೆ. ಮಲೇಷ್ಯಾ ವಿದ್ಯಾರ್ಥಿಗೆ ಆಧಾರ್‌ ನೀಡಿರುವ ಬಗ್ಗೆ ಸಮಗ್ರ ತನಿಖೆಯಾಗಬೇಕು. ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು’ ಎಂದು ತಿಳಿಸಿದ್ದಾರೆ.

ಸಮಗ್ರ ತನಿಖೆಗೆ ಒತ್ತಾಯ
ಕಾಶ್ಮೀರ, ಪಶ್ಚಿಮ ಬಂಗಾಲ, ಬೆಂಗಳೂರು ಮುಂತಾದೆಡೆ ವಿದೇಶಿಗರು ಆಧಾರ್‌ ಕಾರ್ಡ್‌ ಪಡೆದುಕೊಂಡು ದುರುಪಯೋಗ ಮಾಡಿರು ವುದೇ ಹೆಚ್ಚು. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಮಲೇಷ್ಯಾ ಪ್ರಜೆಗೆ ಆಧಾರ್‌ ನೀಡಿರುವ ಉದ್ದೇಶ ಏನು ಎಂಬುದನ್ನು ಜಿಲ್ಲಾಡಳಿತ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸುವ ಜತೆಗೆ ಆ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್‌ ಆಗ್ರಹಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಿಗರಿಗೆ ಆಧಾರ್‌ ಕಾರ್ಡ್‌ ಮಾಡಿಕೊಡುವ ಮುನ್ನ ಯಾವ ಉದ್ದೇಶಕ್ಕೆ ಮಾಡಲಾಗಿದೆ, ಏನೆಲ್ಲ ದಾಖಲೆ ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗಿರಬೇಕು. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.ದೇಶದ ಸುರಕ್ಷತೆ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆಗಳು ಈ ವಿಚಾರವನ್ನು ಅತ್ಯಂತ ಗಂಭೀರ ವಾಗಿ ಪರಿಗಣಿಸಬೇಕಾಗಿದೆ ಎಂದು ಬಿಜೆಪಿ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೃಜೇಶ್‌ ಚೌಟ ಅವರು ಮನವಿ ಮಾಡಿದ್ದಾರೆ.

ಪಾನ್‌ ಕೊಟ್ಟು  ಆಧಾರ್‌
ಆಧಾರ್‌ ನೋಂದಣಿ ಉಸ್ತುವಾರಿ ಅಧಿಕಾರಿಗಳ ಪ್ರಕಾರ, ಮಲೇಷ್ಯಾದ ಹೋಹ್‌ ಜಿಯಾನ್‌ ಮೆಂಗ್‌ ತನ್ನ ಕಾಲೇಜು ಗುರುತಿನ ಪತ್ರ ಹಾಗೂ ಪಾನ್‌ ಕಾರ್ಡನ್ನು ದಾಖಲೆಯಾಗಿ ಸಲ್ಲಿಸಿ ಆಧಾರ್‌ ಪಡೆದುಕೊಂಡಿದ್ದಾನೆ. ಹೀಗಾಗಿ ಯುಐಡಿಎಐ ನಿಯಮಾನುಸಾರ ಯಾವ ವಿದೇಶಿ ಪ್ರಜೆಯೂ ಸುಲಭದಲ್ಲಿ ಆಧಾರ್‌ ಕಾರ್ಡ್‌ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಭದ್ರತೆ ದೃಷ್ಟಿಯಿಂದ ಇದು ಆತಂಕಕಾರಿ ವಿಚಾರ. ಆದರೆ ನೋಂದಣಿ ಕೇಂದ್ರದ ಅಧಿಕಾರಿಗಳು ಈ ವಿಚಾರದಲ್ಲಿ ಅಸಹಾಯಕರಾಗಿದ್ದು, ಸಂಬಂಧಿತರು ಇನ್ನಾದರೂ ಎಚ್ಚೆತ್ತುಕೊಂಡು ವಿದೇಶಿ ಪ್ರಜೆಗಳಿಗೆ ಆಧಾರ್‌ನಂಥ ಮಹತ್ವದ ಗುರುತಿನ ಚೀಟಿ ಮಾಡಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸದಂತೆ ನಿಯಮ ರೂಪಿಸುವ ಅಗತ್ಯವಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಟ್ಟಿಗೆ ಹೆಸರು ಸೇರ್ಪಡೆಯಷ್ಟೇ ಬಾಕಿ !
ಮಲೇಷ್ಯಾ ವಿದ್ಯಾರ್ಥಿ ಹೋಹ್‌ ಜಿಯಾನ್‌ ಮೆಂಗ್‌ಗೆ ಈಗ ಭಾರತೀಯ ಪ್ರಜೆಗೆ ನೀಡಲಾಗುವ ಅತ್ಯಂತ ಮಹತ್ವದ ಎರಡು ಗುರುತಿನ ಚೀಟಿಗಳಾದ ಪಾನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಇದೆ. ಈ ಎರಡು ಗುರುತಿನ ಚೀಟಿಗಳನ್ನು ಕೂಡ ನಿಯಮಾನುಸಾರ ನೀಡಲಾಗಿದೆ ಎನ್ನುವ ಸಮರ್ಥನೆ ಈಗ ಕೇಳಿ ಬರುತ್ತದೆ. ಹೀಗಿರುವಾಗ ಈತ ಮತದಾರರ ಪಟ್ಟಿಗೆ ತನ್ನ ಹೆಸರು ಸೇರ್ಪಡೆಗೊಳಿಸುವಂತೆ ಅರ್ಜಿ ಸಲ್ಲಿಸಲೂ ಬಹುದು. ಇಂಥಹ ಸನ್ನಿವೇಶದಲ್ಲಿ ಅಧಿಕಾರಿಗಳ ಕಣ್ಣು ತಪ್ಪಿನಿಂದ ಅಥವಾ ರಾಜಕೀಯ ಒತ್ತಡಕ್ಕೆ ಮಣಿದು ಉದ್ದೇಶಪೂರ್ವಕವಾಗಿ ಈತನ ಹೆಸರನ್ನು ಕೂಡ ಅಂತಿಮ ಕ್ಷಣದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಸಾಧ್ಯತೆಯೂ ಇದೆ. ಏಕೆಂದರೆ ಈತನ ಕೈಯಲ್ಲಿ ಈಗಾಗಲೇ ಗುರುತಿನ ಚೀಟಿಯಾಗಿ ಆಧಾರ್‌ ಮತ್ತು ಪಾನ್‌ ಕಾರ್ಡ್‌ ಇದೆ. 

ಆಧಾರ್‌ ಎನ್ನುವುದೇ ಬೋಗಸ್‌
“ಯಾವುದೇ ಒಬ್ಬ ವಿದೇಶಿ ವ್ಯಕ್ತಿ ಭಾರತದಲ್ಲಿ ಕೇವಲ 182 ದಿನ ವಾಸವಾಗಿದ್ದರೆ ಆತ ಆಧಾರ್‌ ಗುರುತಿನ ಚೀಟಿ ಪಡೆಯುವುದಕ್ಕೆ ಅರ್ಹ ಎಂದು ಯುಐಡಿಎಐ ನಿಯಮ ಹೇಳುತ್ತದೆ. ಯಾವುದೇ ವಿದೇಶಿ ವ್ಯಕ್ತಿ ಪಾಕಿಸ್ಥಾನಿ ಇರಬಹುದು ಅಥವಾ ಮಲೇಷ್ಯಾದವರು ಇರಬಹುದು; ಕೇವಲ 182 ದಿನ ನೆಲೆ ನಿಂತು ದಾಖಲೆ ಕೊಟ್ಟರೆ ಆತನಿಗೆ ಆಧಾರ್‌ನಂಥ ಮಹತ್ವದ ಗುರುತಿನ ಚೀಟಿ ದೊರೆಯುತ್ತದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಇಬ್ಬರು ಬಾಂಗ್ಲಾ ಮೂಲದವರಿಗೆ ಆಧಾರ್‌ ಕೊಟ್ಟಿರುವುದಕ್ಕೆ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಕೊನೆಗೆ 182 ದಿನದ ವಾಸ್ತವ್ಯ ನಿಯಮ ಆಧರಿಸಿ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಿರುವಾಗ ಈ ಆಧಾರ್‌ ಗುರುತಿನ ಚೀಟಿಯೇ ದೊಡ್ಡ ಬೋಗಸ್‌ ಆಗಿದ್ದು, ನಮ್ಮ ಖಾಸಗಿ ಮಾಹಿತಿ ಸೋರಿಕೆಗೆ ಈ ಆಧಾರ್‌ ಒಂದೇ ಸಾಕು. ಆಧಾರ್‌ ಅನ್ನು ಈಗ ಬ್ಯಾಂಕ್‌ನಿಂದ ಹಿಡಿದು ಎಲ್ಲದಕ್ಕೂ ಲಿಂಕ್‌ ಮಾಡಲಾಗುತ್ತಿದೆ. ಅಂಥ ಆಧಾರ್‌ ಈಗ ಗುರುತಿನ ಚೀಟಿಯಾಗಿ ವಿದೇಶಿ ವ್ಯಕ್ತಿಗೂ ನೀಡಿ ಅವರಿಗೂ ಭವಿಷ್ಯದಲ್ಲಿ ಮತದಾನಕ್ಕೂ ಅವಕಾಶ ಕಲ್ಪಿಸುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಮಂಗಳೂರಿನಲ್ಲಿ ಮಲೇಷ್ಯಾ ವಿದ್ಯಾರ್ಥಿಗೆ ಆಧಾರ್‌ ನೀಡಿರುವುದನ್ನು ದೇಶದ ಭದ್ರತೆ ದೃಷ್ಟಿಯಿಂದ ತೀವ್ರವಾಗಿ ವಿರೋಧಿಸುವುದಾಗಿ’ ಆಧಾರ್‌ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುತ್ತಿರುವ ಮ್ಯಾಥು ಥಾಮಸ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಆಧಾರ್‌ ಇದ್ದರೆ ಮತದಾರರ ಪಟ್ಟಿಗೆ ಹೆಸರು
“ಈಗ ಆಧಾರ್‌ ಕಾರ್ಡ್‌ ಅನ್ನು ದಾಖಲೆಯಾಗಿ ನೀಡುವ ಮೂಲಕ ಯಾರು ಬೇಕಾದರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವುದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಏಕೆಂದರೆ ಆಧಾರ್‌ ಕಾರ್ಡ್‌ನಲ್ಲಿ ವ್ಯಕ್ತಿಯ ಜನ್ಮ ದಿನಾಂಕದಿಂದ ಹಿಡಿದು ಎಲ್ಲ ರೀತಿಯ ಮಾಹಿತಿ ಒಳಗೊಂಡಿರುತ್ತದೆ. ಈ ಕಾರಣಕ್ಕೆ ಆಧಾರ್‌ ಸಂಖ್ಯೆಯಿದ್ದರೆ ಅದನ್ನು ಪರಿಶೀಲಿಸುವ ಮೂಲಕ ಆಯಾ ವಿಧಾನಸಭೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲಾಗುತ್ತದೆ. ಹೀಗಾಗಿ ಪಡಿತರ ಚೀಟಿ ಸೇರಿದಂತೆ ಚುನಾವಣಾ ಆಯೋಗ ನಿಗದಿಪಡಿಸಿರುವ ಇತರೆ ಯಾವುದೇ ದಾಖಲೆಗಳು ಇಲ್ಲದಿದ್ದರೂ ಆಧಾರ್‌ ಕಾರ್ಡ್‌ ಕೊಟ್ಟು ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೊಳಿಸುವುದಕ್ಕೆ ಅವಕಾಶವಿದೆ’ ಎಂದು ಮಂಗಳೂರು ತಹಶೀಲ್ದಾರ್‌ ಗುರುಪ್ರಸಾದ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next