Advertisement

ಕಾಡುವ ಆ ಕರಾಳ ರಾತ್ರಿಯ ‌ನೆನಪುಗಳು

05:12 PM Jul 04, 2021 | Team Udayavani |

ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಿನಿಪ್ರಿಯರಾಗಿರುತ್ತಾರೆ. ಕೆಲವೊಂದು ಸಿನೆಮಾಗಳು ಖುಷಿ ನೀಡುವುದಾದರೆ ಇನ್ನೂ ಕೆಲವು ಮೌಲ್ಯಗಳನ್ನು ತಿಳಿಸುತ್ತವೆ. ಅಂತಹ ಸಿನೆಮಾಗಳ ಪಟ್ಟಿಗಳನ್ನು ಹೇಳುತ್ತಾ ಹೋದರೆ ಹತ್ತುಹಲವು. ಇತ್ತೀಚಿನ ಲಾಕ್‌ಡೌನ್‌ ಸಂದರ್ಭದಲ್ಲಿ ಸಮಯ ಕಳೆಯುವುದೇ ಕೆಲವರಿಗೆ ಸಮಸ್ಯೆಯಾಗಿತ್ತು. ಅದೆಷ್ಟೋ ಹಳೆಯ ಸಿನೆಮಾಗಳನ್ನು ಹಲವರು ನೋಡಿ ಆನಂದಿಸಿದ್ದಾರೆ. ನೋಡಿದ ಸಿನೆಮಾಗಳನ್ನು ಮತ್ತೆ ಮತ್ತೆ ನೋಡುವವರ ಸಂಖ್ಯೆ ಹೆಚ್ಚಾಗಿತ್ತು ಕೆಲವೊಬ್ಬರು ಸಿನೆಮಾದ ವಸ್ತು, ವಿಷಯಗಳ ಬಗ್ಗೆ ಗಾಢವಾಗಿ ಆಲೋಚಿಸಿದ್ದು ಉಂಟು. ಈ ರೀತಿ ನನ್ನನ್ನು ಆಲೋಚನೆಗೆ ಒಳಪಡಿಸಿದ ಸಿನಿಮಾ ಆ ಕರಾಳ ರಾತ್ರಿ.

Advertisement

ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡ ಈ ಸಿನಿಮಾ ನೋಡಿದ ಮೇಲೆಯೂ ಮತ್ತೆ ಮತ್ತೆ ಕಾಡಲಾರಂಭಿಸುತ್ತದೆ. ಆ ಕರಾಳ ರಾತ್ರಿ ಸಿನಿಮಾ ಮೋಹನ್‌ ಅವರ ಕನ್ನಡ ನಾಟಕವನ್ನು ಆಧ‌ರಿಸಿದೆ. ನಿರ್ದೇಶಕ ಪದ್ಮನಾಭನ್‌ ಈ ಕಥಾ ಭಾಗವನ್ನಿಟ್ಟು ಕೊಂಡು ಚಲನಚಿತ್ರ ತಯಾರಿಕೆಯಲ್ಲಿ ಮತ್ತೂಂದು ಸುಂದರ ಪ್ರಯೋಗವನ್ನು ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ಸಿನೆಮಾದಲ್ಲಿ ನಾಯಕನಟರಾಗಿ ಕಾರ್ತಿಕ್‌ ಜಯರಾಂ ಹಾಗೂ ನಾಯಕಿಯ ಪಾತ್ರದಲ್ಲಿ ಅನುಪಮಾ  ಗೌಡ ಅವರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಹಳ್ಳಿಯ ಸೊಬಗು, ಜೀವನಶೈಲಿ, ಬಡತನ ಮನಮುಟ್ಟುವಂತಹ ಪಾತ್ರಗಳು ಕಥೆಯ ಮತ್ತೂಂದು ವಿಶೇಷತೆ. ಅಲ್ಲಲ್ಲಿ ಕಂಡುಬರುವ ಡಿವಿಜಿಯವರ ಕಗ್ಗದ ಕೆಲವು ಸಾಲುಗಳು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುತ್ತವೆ.

ಸಿನೆಮಾದಲ್ಲಿ ಮಲ್ಲಿಕಾ  ಎಂಬ ಭಿನ್ನ ಹುಡುಗಿಯ ಪಾತ್ರ ನಮ್ಮನ್ನು ಕಥೆಯ ಉದ್ದಕ್ಕೂ ಸೆಳೆಯುತ್ತದೆ. ಅವಳ ಹಾವಭಾವ, ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವ ರೀತಿ ಮೊದಲಾದವುಗಳನ್ನು ನೋಡಿದಾಗ  ಅವಳು ಔಟ್‌ ಆಫ್ದ ಬಾಕ್ಸ್‌ನಲ್ಲಿ ಯೋಚಿಸುವ ಹುಡುಗಿ ಅಥವಾ ಅಬ್‌ನಾರ್ಮಲ್‌ ಹುಡುಗಿ ಎಂಬುದು ವೀಕ್ಷಕರಿಗೆ ಮನದಟ್ಟಾಗುತ್ತಾ ಹೋಗುತ್ತದೆ.  ಬಡತನ ಕಿತ್ತು ತಿನ್ನುವ ಮನೆ, ಸಾಲದ ಹೊರೆಯೂ ಅಧಿಕವಾಗಿರುವ ಆ ಒಂಟಿ ಮನೆ. ನೀರು ಕುಡಿಯಲೆಂದು ಬಂದು ಅದೇ ಮನೆಯಲ್ಲಿ ನೆಲೆಯೂರಲು ಕಾರಣ ಹುಡುಕುವ ಆ ಯುವಕ, ಅವನ ಕೈಯಲ್ಲಿರುವ ಬ್ಯಾಗ್‌ ಅದರಲ್ಲಿರುವ ಹಣ. ಹೀಗೆ ಕಥೆ ಹಂತ ಹಂತವಾಗಿ ಕುತೂಹಲ ಹುಟ್ಟಿಸುತ್ತಾ ಸಾಗುತ್ತದೆ. ಆ ಹಣ ಅವರ ಬಡತನಕ್ಕೆ ಸಹಾಯವಾಗಬಹುದಾ? ಅಥವಾ ಆ ಅಪರಿಚಿತನ ಉದ್ದೇಶವಾದರೂ ಏನು ಎಂಬುದರ ಜತೆಗೆ ಆ ರಾತ್ರಿ ಆ ಒಂಟಿ ಮನೆಯಲ್ಲಿ ನಡೆಯುವ ಘಟನೆ ಕಥಾ ವಸ್ತು.

ಕರಾಳ ರಾತ್ರಿ ಎಂಬ ಶೀರ್ಷಿಕೆಯೇ ಹೇಳುವಂತೆ ಆ ರಾತ್ರಿ ಏನಾಗಿರಬಹುದೆಂದು ಕುತೂಹಲವು ಸಿನಿಮಾ ನೋಡುವಂತೆ ಹೆಚ್ಚಾಗುತ್ತದೆ. ಈ ರೋಚಕ ಕಥೆಯಲ್ಲಿ ಅನಗತ್ಯ ದೃಶ್ಯ, ಸಂಭಾಷಣೆ ಇಲ್ಲ. ಆಸೆಯೇ ದುಃಖಕ್ಕೆ ಮೂಲ ಕಾರಣ ಎಂಬ ಗಾದೆ ಮಾತಿನಂತೆ ಮನುಷ್ಯನ ಅತಿಯಾದ ಆಸೆ ಯಿಂದಾಗುವ ಅನಾಹುತಗಳು ಯಾವುದೆಂದು ಸ್ಪಷ್ಟವಾಗಿ  ಈ ಚಿತ್ರದಲ್ಲಿ ಬಿಂಬಿತವಾಗಿದೆ.

Advertisement

 

ಅಕ್ಷತಾ ರೈ

ಲೀಲಾವತಿ ಶೆಟ್ಟಿ ಬಿಎಡ್‌

ಕಾಲೇಜು,  ಕಾವೂರು

Advertisement

Udayavani is now on Telegram. Click here to join our channel and stay updated with the latest news.

Next