ಬೆಂಗಳೂರು: ಇ- ಕಾಮರ್ಸ್‌ನಲ್ಲಿ ವಾಹನ- ಬಟ್ಟೆ ಖರೀದಿಯಲ್ಲಿ ಮೋಸ ಹೋದವರನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಯುವಕ ಯುವಕ ಫೇಸ್‌ಬುಕ್‌ನಲ್ಲಿ ನಾಯಿ ಖರೀದಿಸಲು ಹೋಗಿ 28 ಸಾವಿರ ರೂ. ಕಳೆದುಕೊಂಡಿದ್ದಾನೆ.
ತ್ಯಾಗರಾಜನಗರದ ನಿವಾಸಿ ಅನೀಶ್ (17) ವಂಚನೆಗೊಳಗಾದವನು.
ಇತ್ತೀಚೆಗೆ ಅನೀಶ್ ಎಫ್ಬಿಯಲ್ಲಿ ಎಂದಿನಂತೆ ಸ್ನೇಹಿತರ ಜತೆಗೆ ಚಾಟ್ ಮಾಡುತ್ತಿದ್ದ. ಆ ವೇಳೆ ಕಡಿಮೆ ಬೆಲೆಗೆ ನಾಯಿ ಮರಿ ಮಾರಾಟ ಮಾಡುವುದಾಗಿ ನಾಯಿಯ ಭಾವಚಿತ್ರ ಸಹಿತ ಹಾಕಿರುವ ಜಾಹಿರಾತನ್ನು ಗಮನಿಸಿದ್ದ. ಕೂಡಲೇ ಜಾಹಿರಾತಿನಲ್ಲಿ ನಮೂದಿಸಲಾದ ನಂಬರ್‌ಗೆ ಕರೆ ಮಾಡಿ ನಿಮ್ಮ ನಾಯಿಯನ್ನು ಖರೀದಿಸುವುದಾಗಿ ಹೇಳಿದ್ದ. ಮೊದಲು ನನ್ನ ಬ್ಯಾಂಕ್ ಖಾತೆಗೆ ಹಣ ಕಳುಹಿಸಿದರೆ ಮಾತ್ರ ನಾಯಿ ಮಾರುವುದಾಗಿ ಮಾಲೀಕ ಷರತ್ತು ವಿಧಿಸಿದ್ದ. ಅದರಂತೆ ಆತ ಹೇಳಿದ ಬ್ಯಾಂಕ್ ಖಾತೆಗೆ ಅನೀಶ್ ಹಂತ-ಹಂತವಾಗಿ 28 ಸಾವಿರ ರೂ. ಜಮೆ ಮಾಡಿದ್ದ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ಕೊಪ್ಪ ಪಟ್ಟಣ ಬಂದ್
ನಾಯಿ ಮಾಲೀಕ ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಾಗ ಅನೀಶ್‌ಗೆ ಅನುಮಾನ ಬಂದು ತಾನು ಕಳುಹಿಸಿರುವ ಹಣ ಹಿಂತಿರುಗಿಸುವಂತೆ ಹೇಳಿದ್ದ. ನಂತರ ನಾಯಿಯನ್ನೂ ಕೊಡದೇ, ಹಣವನ್ನೂ ಹಿಂತಿರುಗಿಸದೇ ನಾಯಿ ಮಾಲೀಕ ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಂಡಿದ್ದಾನೆ. ಮೋಸ ಹೋಗಿರುವುದು ಗಮನಕ್ಕೆ ಬಂದ ಬಳಿಕ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾನೆ.