Advertisement

ಇವರು “ಸಾಲುಮರದ’ಜೀತ್‌

12:18 AM May 14, 2019 | Sriram |

ಮಂಗಳೂರು: ನಗರದ ಪರಿಸರ ಪ್ರೇಮಿಯೊಬ್ಬರು 13 ವರ್ಷಗಳಿಂದ ತನ್ನ ಸ್ವಂತ ಖರ್ಚಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಇವರು ಜೀತ್‌ ಮಿಲನ್‌ ರೋಶ್‌, ಮಾರ್ಗನ್ಸ್‌ಗೆàಟ್‌ ನಿವಾಸಿ.

Advertisement

ಬಿರು ಬಿಸಿಲು, ಸಕಾಲದಲ್ಲಿ ಮಳೆ ಇಲ್ಲ, ಸೆಕೆ ಎಂದು ದೂರುವ ಹೆಚ್ಚಿನ ಮಂದಿಗೆ ಗಿಡ ನೆಟ್ಟು ಪರಿಸರ ರಕ್ಷಿಸಬೇಕು ಎಂಬ ಕಾಳಜಿ ಇರುವುದಿಲ್ಲ. ಅಂತಹವರ ನಡುವೆ ಜೀತ್‌ ಮಾದರಿಯಾಗಿದ್ದಾರೆ.

ಉದ್ಯಮಿಯಾಗಿರುವ ಇವರು ತನ್ನ ಹೆಚ್ಚಿನ ಸಮಯವನ್ನು ಕಳೆಯುವುದು ಮರಗಿಡಗಳೊಡನೆ. ನಗರದಲ್ಲೂ ಹಸುರಿರಬೇಕು ಎಂಬ ಆಶಯದೊಂದಿಗೆ 2004ರಿಂದ ಜಿಲ್ಲೆಯ ಅನೇಕ ಕಡೆ ಗಿಡಗಳನ್ನು ನೆಡುತ್ತಾ ಬಂದಿದ್ದಾರೆ. ತನ್ನ ಉದ್ಯೋಗದ ಒಂದು ಪಾಲು ಹಣವನ್ನು ಮರಗಿಡಗಳ ಸಂರಕ್ಷಣೆಗಾಗಿ ಮೀಸಲಿಟ್ಟಿದ್ದಾರೆ.

ಶ್ಮಶಾನ ವನ!
ಜೀತ್‌ ಮಿಲನ್‌ ರೋಶ್‌ ಗಿಡ ನೆಡಲು ಮೊದಲು ಆಯ್ಕೆ ಮಾಡುವುದು ಶ್ಮಶಾನಗಳನ್ನು. ಈಗಾಗಲೇ ನಗರದ ವಿವಿಧ ಶ್ಮಶಾನಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟಿದ್ದಾರೆ. ಅಲ್ಲಿ ಗಿಡ ನೆಟ್ಟರೆ ಕಳ್ಳರ ಕಾಟ ಇರುವುದಿಲ್ಲ. ಸರಕಾರ, ಸ್ಥಳೀಯಾಡಳಿತ ಅಭಿವೃದ್ಧಿ ಕಾರ್ಯಕ್ಕಾಗಿ ಮರ ಕಡಿಯುವುದಿಲ್ಲ ಎಂಬ ಉದ್ದೇಶ ಇದರ ಹಿಂದಿದೆ.

ನಗರದ ನಂದಿಗುಡ್ಡೆ ಹಿಂದೂ ರುದ್ರಭೂಮಿಯ 7 ಎಕರೆಯಲ್ಲಿ 60 ತಳಿಗಳ 2,500ಕ್ಕೂ ಹೆಚ್ಚಿನ ಗಿಡ ನೆಟ್ಟಿದ್ದು, ಮರಗಳಾಗಿವೆ. ಬಾಬುಗುಡ್ಡ ಬ್ರಹ್ಮಸಮಾಜ ಶ್ಮಶಾನದಲ್ಲಿ 650ಕ್ಕೂ ಹೆಚ್ಚಿನಗಿಡ ನೆಟ್ಟಿದ್ದಾರೆ. ರಸ್ತೆ ಬದಿ, ವಾಮಂಜೂರು ಡಂಪಿಂಗ್‌ ಯಾರ್ಡ್‌ ಮತ್ತಿತರ ಪ್ರದೇಶಗಳಲ್ಲಿ ಗಿಡಗಳನ್ನು ನೆಟ್ಟು ಸಲಹುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಅರಣ್ಯ ಇಲಾಖೆ, ಸ್ನೇಹಿತರು, ಪರಿಸರಾಸಕ್ತರು ಸಾಥ್‌ ಕೊಡುತ್ತಾರಂತೆ.ಗಿಡ ನೆಡುವುದಷ್ಟೇ ಅಲ್ಲ. ಸಂರಕ್ಷಣೆಯೂ ಇವರ ನಿತ್ಯದ ಕಾಯಕ. ನೀರಿಲ್ಲದಾಗ, ಬೇಸಗೆಯಲ್ಲಿ ಪ್ರತೀ ದಿನ ಟ್ಯಾಂಕರ್‌ ನೀರು ಹಾಯಿಸುತ್ತಾರೆ.

Advertisement

25ಕ್ಕೂ ಹೆಚ್ಚು ಮರ ಸ್ಥಳಾಂತರ
ಜೀತ್‌ ಅವರ ಗಿಡಮರ ಸಂರಕ್ಷಣೆಗೆ ಇನ್ನೂ ಒಂದು ಆಯಾಮವಿದೆ. ಅನೇಕ ಮರಗಳನ್ನು ಒಂದೆಡೆಯಿಂದ ಮತ್ತೂಂದು ಕಡೆಗೆ ಸ್ಥಳಾಂತರ ಮಾಡಿದ್ದಾರೆ ಅವರ ನೇತೃತ್ವದಲ್ಲಿ ನಗರದಲ್ಲಿ 25ಕ್ಕೂ ಹೆಚ್ಚಿನ ಮರ ಸ್ಥಳಾಂತರಿಸಲಾಗಿದೆ. ಈ ಕಾಯಕ ಉಡುಪಿ ವರೆಗೂ ವಿಸ್ತರಿಸಿದೆ. ಸ್ಥಳಾಂತರಿಸಿದ ಮರಗಳಲ್ಲಿ ಹೆಚ್ಚಿನವು ಬದುಕಿವೆ. ಜೀತ್‌ ಅವರ ಪರಿಸರ ರಕ್ಷಣೆಯ ಕಾಯಕದಲ್ಲಿ ಪತ್ನಿ ಸೆಲ್ಮಾ ಮರಿಯಾ ರೋಶ್‌ ಸಾಥ್‌ ನೀಡುತ್ತಾರೆ.

ನೆಟ್ಟ ಗಿಡ ಕಣ್ಣೆದುರೇ ಮಣ್ಣಾಯಿತು
ಅಭಿವೃದ್ಧಿಯ ದೃಷ್ಟಿಯಿಂದ ನಗರದಲ್ಲಿ ದಿನವೂ ಮರಗಳು ಬಲಿಯಾಗುತ್ತಿವೆ. ಈ ಹಿಂದೆ ನಗರದಲ್ಲಿ ನಾನು ನೆಟ್ಟ ಗಿಡ ಬೆಳೆಯುತ್ತಿರುವಾಗ ರಸ್ತೆ ಅಗಲಕ್ಕಾಗಿ ನನ್ನ ಕಣ್ಣೆದುರೇ ಮಣ್ಣಾಯಿತು. ಇದು ಅತ್ಯಂತ ದುಃಖದ ವಿಚಾರ. ನಗರ ಅಭಿವೃದ್ಧಿಗೆ ವಿರೋಧವಿಲ್ಲ. ಆದರೆ ಮರ ಗಿಡಗಳನ್ನು ಕಡಿದು ಅಭಿವೃದ್ಧಿ ಸರಿಯಲ್ಲ ಎನ್ನುತ್ತಾರೆ ಜೀತ್‌.

ಯುವಕರಲ್ಲಿ ಪರಿಸರಾಸಕ್ತಿ ಮೂಡಬೇಕು
ಸಕಾಲದಲ್ಲಿ ಮಳೆ ಬರುವುದಿಲ್ಲ, ತಾಪಮಾನ ಹೆಚ್ಚಾಗುತ್ತಿದೆ ಎಂದು ಹೇಳುತ್ತಾರೆ. ಆದರೆ ಗಿಡ ನೆಟ್ಟು ಪೋಷಿಸುವವರು ಮಾತ್ರ ಕೆಲವೇ ಮಂದಿ. ಯುವಜನತೆಯಲ್ಲಿ ಪರಿಸರಾಸಕ್ತಿ ಬೆಳೆಸಬೇಕು. ಇಲ್ಲವಾದರೆ ಮುಂದಿನ ತಲೆಮಾರು ಸ್ವತ್ಛಂದ ಪರಿಸರ ಕಾಣಲು ಕಷ್ಟವಾದೀತು.
– ಜೀತ್‌ ಮಿಲನ್‌ ರೋಶ್‌,
ಪರಿಸರ ಪ್ರೇಮಿ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next