ಮಂಗಳೂರು: ಪ್ರೀತಿ, ಪ್ರೇಮಕ್ಕೆ ದೇಶ, ಗಡಿಯ ಬೇಲಿ ಇಲ್ಲ ಎಂಬುದಕ್ಕೆ ಮತ್ತೂಂದು ನಿದರ್ಶನ ಸಿಕ್ಕಿದೆ. ಮಂಗಳೂರಿನ ಯುವಕ ಹಾಗೂ ಬ್ರೆಝಿಲ್ ಮೂಲದ ಯುವತಿ ಪರಸ್ಪರ ಪ್ರೀತಿಸಿದ್ದು, ಭಾರತೀಯ ಸಂಪ್ರದಾಯದಂತೆ ವಿವಾಹವಾಗಿ ಕರಾವಳಿಯ ಸಂಸ್ಕೃತಿಯನ್ನು ಜಾಗತಿಕವಾಗಿ ಎತ್ತಿಹಿಡಿದಿದ್ದಾರೆ.
ಬ್ರೆಝಿಲ್ ದೇಶದ ತಾಟಿಯಾನೆ ಹಾಗೂ ತುಳುನಾಡಿನ ಆದಿತ್ಯ ಅವರ ವಿವಾಹ ಸಮಾರಂಭ ಜಿಎಸ್‌ಬಿ ಸಂಪ್ರದಾಯದಂತೆ ಮಂಗಳೂರಿನ ಡಾ| ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನೆರವೇರಿದೆ.
ಕರಂಗಲ್ಪಾಡಿ ನಿವಾಸಿ ಆದಿತ್ಯ 8 ವರ್ಷಗಳ ಹಿಂದೆ ಐಟಿ ಉದ್ಯೋಗ ಕ್ಕಾಗಿ ಬ್ರೆಝಿಲ್‌ಗೆ ತೆರಳಿದ್ದು, 2019ರಲ್ಲಿ ಅವರಿಗೆ ತಾಟಿಯಾನೆ ಪರಿಚಯ ವಾಗಿತ್ತು. ಬಳಿಕ ಸ್ನೇಹವು ಪ್ರೀತಿಗೆ ತಿರುಗಿತ್ತು. 2023ರಲ್ಲಿ ಮನೆಯವರಿಗೆ ತಮ್ಮ ಪ್ರೀತಿಯ ಸಂಗತಿಯನ್ನು ತಿಳಿಸಿ ಮದುವೆಗೆ ಒಪ್ಪಿಗೆ ಪಡೆದುಕೊಂಡರು. ಆದಿತ್ಯ ಹಾಗೂ ತಾಟಿಯಾನೆ ಅವರು ಹೆತ್ತವರು ಹಾಗೂ ಗುರು ಹಿರಿಯರ ಆಶೀರ್ವಾದದೊಂದಿಗೆ ಹಸೆಮಣೆ ಏರಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಬೆಳೆದು ಬಂದ ಯುವತಿ ಕೈಗೆ ಮೆಹಂದಿ ಹಚ್ಚಿ ಹಣೆಗೆ ಬಿಂದಿ ಧರಿಸಿ, ತಲೆಗೆ ಹೂ ಮುಡಿದು, ಭಾರತೀಯ ಸಂಪ್ರದಾ ಯದ ಆಭರಣ ಧರಿಸಿಕೊಂಡು ಅಗ್ನಿ ಸಾಕ್ಷಿಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ವಧುವಿನ ತಂದೆ ಅಟೀಲಿಯೊ, ತಾಯಿ ಲೂಸಿಯ, ಸಹೋದರಿಯರಾದ ಥಯಿಸ್, ಥಲಿತ ಹಾಗೂ ವರನ ಪೋಷಕರಾದ ರಮಾನಂದ್ ಹಾಗೂ ಪ್ರೀತಂ ಪೈ ಕುಟುಂಬಸ್ಥರು ಭಾಗವಹಿಸಿ ಶುಭ ಹಾರೈಸಿದ್ದಾರೆ.
ನಮ್ಮಿಬ್ಬರ ಭಾಷೆ, ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ ಬೇರೆಯಾಗಿದೆ. ಆದರೆ ತನ್ನ ಪ್ರೀತಿಗೋಸ್ಕರ ಆರು ತಿಂಗಳಿನಿಂದ ಭಾರತೀಯ ಸಂಸ್ಕೃತಿಯನ್ನು ಕಲಿಯುತ್ತಿದ್ದೇನೆ. ಭಾರತದ ಸಂಸ್ಕೃತಿ ಆಚಾರ ವಿಚಾರಗಳು ವಿಶಿಷ್ಟವಾಗಿವೆ. ಅವುಗಳನ್ನು ಕಲಿತು ಆದಿತ್ಯ ಜತೆಗೆ ಸುಂದರ ಸಂಸಾರ ನಡೆಸಲು ಮುಂದಾಗಿದ್ದೇನೆ ಎಂದು ತಾಟಿಯಾನೆ ತಿಳಿಸಿದ್ದಾರೆ.