Advertisement

ಸಾಲ ತೀರಿಸಲು ರಕ್ತ ಚಂದನ ದಂಧೆಗಿಳಿದ ಯುವಕ

12:42 PM Dec 15, 2022 | Team Udayavani |

ಬೆಂಗಳೂರು: ರಕ್ತ ಚಂದನ ಮಾರಾಟ ದಂಧೆ ಕಥಾಹಂದರವುಳ್ಳ ಪುಷ್ಪಾ ಸಿನಿಮಾ ರೀತಿ ರಕ್ತ ಚಂದನ ಮಾರಾಟಕ್ಕೆ ಇಳಿದಿದ್ದ ಯುವಕನೊಬ್ಬ ಬಾಣಸವಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ರಾಮನಗರ ಚನ್ನಪಟ್ಟಣದ ನಿವಾಸಿ ಕೂಟಕಲ್ಲೇಗೌಡ ಅಲಿಯಾಸ್‌ ಅಭಿ (27) ಬಂಧಿತ. ಆತನಿಂದ 12 ಲಕ್ಷ ರೂ. ಮೌಲ್ಯದ 1 ಕ್ವಿಂಟಲ್‌ ತೂಕದ ರಕ್ತ ಚಂದನ ಹಾಗೂ ಟೊಯೋಟಾ ಇಟಿಯೋಸ್‌ ಕಾರನ್ನು ಜಪ್ತಿ ಮಾಡಲಾಗಿದೆ.

Advertisement

ಆರೋಪಿ ಅಭಿ ಚನ್ನಪಟ್ಟಣದಲ್ಲಿ ಜಿಮ್‌ ತೆರೆದಿದ್ದ. ಇದಕ್ಕೆ 25 ಲಕ್ಷ ರೂ. ಸಾಲ ಮಾಡಿದ್ದ. ಆದರೆ, ಜಿಮ್‌ನಲ್ಲಿ ಆತ ನಿರೀಕ್ಷಿಸಿದಷ್ಟು ವ್ಯವಹಾರ ನಡೆಯದ ಕಾರಣ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಸಾಲ ಕೊಟ್ಟವರು ಸಾಲ ಹಿಂತಿರುಗಿಸುವಂತೆ ಒತ್ತಡ ಹಾಕುತ್ತಿದ್ದರು. ಈ ವಿಚಾರವನ್ನು ರಾಮನಗರದಲ್ಲಿರುವ ತನ್ನ ಸ್ನೇಹಿತನೊಬ್ಬನ ಬಳಿ ಹೇಳಿಕೊಂಡಿದ್ದ.

ಆರೋಪಿ ಅಭಿಯ ಸ್ಥಿತಿ ಕಂಡು ಅನುಕಂಪದಿಂದ ಆತನ ಸ್ನೇಹಿತ ತನ್ನ ಬಳಿಯಿದ್ದ ರಕ್ತ ಚಂದದ ತುಂಡುಗಳನ್ನು ಕೊಟ್ಟಿದ್ದ. ಇದಕ್ಕೆ ಬೆಂಗಳೂರಿನಲ್ಲಿ ಹೆಚ್ಚಿನ ಬೇಡಿಕೆ ಇದೆ. ಯಾರಿಗೂ ತಿಳಿಯದಂತೆ ರಾಮನಗರದಿಂದ ಕಾರಿನಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವಂತೆ ಸಲಹೆ ನೀಡಿದ್ದ. ಇದಾದ ಕೆಲ ದಿನಗಳಲ್ಲಿ ಆತನ ಸ್ನೇಹಿತ ಅನಾರೋಗ್ಯದಿಂದ ಮೃತಪಟ್ಟಿದ್ದ. ಇತ್ತ ಸ್ನೇಹಿತನ ಸಲಹೆಯಂತೆ ಆರೋಪಿಯು ರಕ್ತ ಚಂದನ ಮಾರಾಟಕ್ಕೆ ಮುಂದಾಗಿದ್ದ.

ಗಿರಾಕಿಗಳನ್ನು ಹುಡುಕುತ್ತಿದ್ದಾಗ ಸಿಕ್ಕಿಬಿದ್ದ:
ಡಿ.12ರಂದು ಸಂಜೆ 4 ಗಂಟೆಗೆ ಬಾಣಸವಾಡಿ ಮುಖ್ಯ ರಸ್ತೆಯನ್ನು ಅಗ್ನಿಶಾಮಕ ದಳ ಠಾಣೆಯ ಸಮೀಪದ ಪೂಜಾ ದೋಸೆ ಕ್ಯಾಂಪ್‌ ರಸ್ತೆಯಲ್ಲಿ ಟಾಟಾ ಇಟಿಯೋಸ್‌ ಕಾರಿನಲ್ಲಿ ರಕ್ತ ಚಂದನ ಮರದ ತುಂಡುಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಗಿರಾಕಿಗಳನ್ನು ಹುಡುಕುತ್ತಿದ್ದ. ವ್ಯಕ್ತಿ ಯೊಬ್ಬ ಅನುಮಾನಾಸ್ಪದ ವಸ್ತುಗಳನ್ನು ಕಾರಿನಲ್ಲಿಟ್ಟು ತಿರುಗಾಡುತ್ತಿರುವ ಬಗ್ಗೆ ಬಾಣಸವಾಡಿ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ಸುಳಿವಿನ ಆಧಾರದ ಮೇಲೆ ಬಾಣಸವಾಡಿ ಮುಖ್ಯರಸ್ತೆಯ ಕೆಲ ಭಾಗಗಳಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದ್ದರು. ಆರೋಪಿಯ ಕಾರಿನ ಡಿಕ್ಕಿ ಪರಿಶೀಲಿಸಿದಾಗ ರಕ್ತ ಚಂದನ ಪತ್ತೆಯಾಗಿದೆ.

ರಕ್ತ ಚಂದನದ ಮೂಲ ಪತ್ತೆ ಹಚ್ಚುವುದೇ ಸವಾಲು
ತನ್ನ ಸ್ನೇಹಿತನಿಗೆ ರಕ್ತ ಚಂದನದ ತುಂಡು ಎಲ್ಲಿಂದ ಸಿಕ್ಕಿದೆ ಎಂಬುದು ನನಗೂ ತಿಳಿದಿಲ್ಲ ಎಂದು ವಿಚಾರಣೆ ವೇಳೆ ಆರೋಪಿಯು ಪೊಲೀಸರಿಗೆ ತಿಳಿಸಿದ್ದಾನೆ. ಇದೀಗ ಆತನ ಸ್ನೇಹಿತ ಮೃತಪಟ್ಟಿರುವ ಕಾರಣ ರಕ್ತ ಚಂದನದ ಮೂಲ ಪತ್ತೆ ಹಚ್ಚುವುದೇ ಪೊಲೀಸರಿಗೆ ಸವಾಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next