Advertisement

ಎ.ವೈ. 4.2 ಆತಂಕ ಬೇಡ; ಹೊಸ ರೂಪಾಂತರಿ ಅಪಾಯಕಾರಿಯಲ್ಲ , ಮುನ್ನೆಚ್ಚರಿಕೆ ಇರಲಿ

02:55 AM Oct 27, 2021 | Team Udayavani |

ಬೆಂಗಳೂರು: ಕೋವಿಡ್‌ ವೈರಾಣುವಿನ ಎ.ವೈ. 4.2 ರೂಪಾಂತರಿ ರಾಜ್ಯಕ್ಕೆ ಕಾಲಿರಿಸಿ ಮೂರು ತಿಂಗಳುಗಳ ಮೇಲಾಗಿದೆ. ಆದರೆ ಸೋಂಕು ಪ್ರಕರಣ ಹೆಚ್ಚಳವಾಗಿಲ್ಲ. ಹೀಗಾಗಿ ಆತಂಕ ಅನಗತ್ಯ ಎಂದು ರಾಜ್ಯ ಆರೋಗ್ಯ ತಜ್ಞರು ಅಭಯ ನೀಡಿದ್ದಾರೆ.

Advertisement

ಬ್ರಿಟನ್‌ನಲ್ಲಿ ಉದ್ಭವಿಸಿದ ಈ ರೂಪಾಂತರಿ ರಾಜ್ಯ ದಲ್ಲೂ ಪತ್ತೆಯಾಗಿರುವ ಬಗ್ಗೆ ವರದಿ ಬಹಿರಂಗವಾದ ಬೆನ್ನಲ್ಲೇ ಈ ಸಮಾಧಾನಕರ ಹೇಳಿಕೆ ಹೊರಬಿದ್ದಿದೆ.

ಕೋವಿಡ್‌ ವೈರಾಣು ಪ್ರದೇಶವಾರು ಅಧಿಕ ಜನರ ದೇಹ ಸೇರಿದ ಬಳಿಕ ರೂಪಾಂತರವಾಗುತ್ತದೆ. ಈವರೆಗೆ ಬೀಟಾ, ಅಲ್ಫಾ, ಡೆಲ್ಟಾ, ಡೆಲ್ಟಾ ಪ್ಲಸ್‌ ಸಹಿತ 8ಕ್ಕೂ ಅಧಿಕ ರೂಪಾಂತರಗಳು ದೃಢಪಟ್ಟಿವೆ. ಇವುಗಳ ಪತ್ತೆಗೆ ಮಾದರಿಗಳನ್ನು ವಂಶವಾಹಿ ಪರೀಕ್ಷೆ (ಜಿನೋಮ್‌ ಸೀಕ್ವೆನ್ಸಿಂಗ್‌)ಗೆ ಒಳಪಡಿಸಲಾಗುತ್ತದೆ. ಜುಲೈಯಲ್ಲಿ ಸೋಂಕು ದೃಢಪಟ್ಟಿದ್ದವರ ವಂಶವಾಹಿಯನ್ನು ಪರೀಕ್ಷೆಗೊಳಪಡಿಸಿದ್ದು, ವರದಿ ಸೋಮವಾರ ಲಭಿಸಿದೆ. ಎ.ವೈ. 4.2 ಹೆಚ್ಚು ಹಾನಿ ಮಾಡುವಂತಿದ್ದರೆ ಈಗಾಗಲೇ ರಾಜ್ಯದಲ್ಲಿ ಸೋಂಕು ಹೆಚ್ಚಳವಾಗಬೇಕಿತ್ತು. ಆದರೆ 3 ತಿಂಗಳುಗಳಿಂದ ಸೋಂಕು ಇಳಿ ಹಾದಿ ಯಲ್ಲಿದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಇಂದು ರಾಜ್ಯ ಆರೋಗ್ಯ
ಸಚಿವರ ಜತೆ ಕೇಂದ್ರ ಸಭೆ
ದೇಶವು 100 ಕೋಟಿ ಡೋಸ್‌ಗಳ ಮೈಲಿಗಲ್ಲು ಸಾಧಿ ಸಿದ್ದರೂ ಎರಡನೇ ಡೋಸ್‌ ಲಸಿಕೆ ಸ್ವೀಕಾರಕ್ಕೆ ಸಂಬಂಧಿಸಿ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ಅವರು ಬುಧವಾರ ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಸಭೆ ಕರೆದಿ ದ್ದಾರೆ. ಹೊಸದಿಲ್ಲಿಯ ವಿಜ್ಞಾನ ಭವನ ದಲ್ಲಿ ಈ ಸಭೆ ನಡೆಯಲಿದೆ. 2ನೇ ಡೋಸ್‌ ಪಡೆಯದವರಿಗೆ ಬೇಗನೆ ಲಸಿಕೆ ನೀಡುವಂತೆ ಮತ್ತು ಇನ್ನೂ ಮೊದಲ ಡೋಸ್‌ ಪಡೆಯದವರನ್ನು ಲಸಿಕೆಗೆ ಪ್ರೇರೇ ಪಿಸು ವಂತೆ ಸಭೆಯಲ್ಲಿ ಸಲಹೆ ನೀಡುವ ಸಾಧ್ಯತೆ ಯಿದೆ. 2ನೇ ಡೋಸ್‌ಗೆ ಅರ್ಹರಾಗಿದ್ದರೂ ಸುಮಾರು 11 ಕೋಟಿ ಜನರು ಇನ್ನೂ ಲಸಿಕೆ ಪಡೆದಿಲ್ಲ.

ಆತಂಕ ಬೇಡ ಏಕೆ?
01. ರಾಜ್ಯದಲ್ಲಿ ಲಸಿಕೆಗೆ ಅರ್ಹರ ಪೈಕಿ 10ರಲ್ಲಿ 9 ಮಂದಿಗೆ ಮೊದಲ ಡೋಸ್‌ ವಿತರಣೆ ಯಾಗಿದೆ. ಅರ್ಧದಷ್ಟು ಮಂದಿಯ ಎರಡೂ ಡೋಸ್‌ ಪೂರ್ಣಗೊಂಡಿವೆ.
02. ಸಾಲು ಸಾಲು ಹಬ್ಬಗಳು ಕಳೆದರೂ ಸೋಂಕು ಹೆಚ್ಚಳವಾಗಿಲ್ಲ.
03. ನೆರೆಯ ಕೇರಳದಲ್ಲಿ ನಿತ್ಯ 10 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾದರೂ ರಾಜ್ಯದಲ್ಲಿ 2 ತಿಂಗಳಲ್ಲಿ ಹೊಸ ಪ್ರಕರಣಗಳು 500ರ ಆಸುಪಾಸಿನಲ್ಲಿಯೇ ಇವೆ. ಸದ್ಯ 200ರ ಆಸುಪಾಸಿಗೆ ತಗ್ಗಿವೆ. ಪಾಸಿಟಿವಿಟಿ ದರ ಶೇ.0.5ಕ್ಕಿಂತ ಕಡಿಮೆ ಇದೆ.
04. ಹೊಸ ತಳಿಯಲ್ಲಿ ಡೆಲ್ಟಾ ಲಕ್ಷಣಗಳೇ ಹೆಚ್ಚಿದ್ದು, ಇದನ್ನು ತಡೆಯುವಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ.

Advertisement

ಇದನ್ನೂ ಓದಿ:ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

ಡೆಲ್ಟಾ ಪ್ಲಸ್‌ ಹೆಚ್ಚಾಗಲಿಲ್ಲ
ಡೆಲ್ಟಾ ರೂಪಾಂತರ ಎರಡನೇ ಅಲೆಗೆ ಕಾರಣವಾಗಿತ್ತು. ಮತ್ತೂಂದು ರೂಪಾಂತರಿ ಡೆಲ್ಟಾ ಪ್ಲಸ್‌ ಮೂರನೇ ಅಲೆಗೆ ಕಾರಣವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಈವರೆಗೆ 3ನೇ ಅಲೆಯ ಯಾವುದೇ ಲಕ್ಷಣ ಕಾಣಿಸಿಕೊಂಡಿಲ್ಲ. ಅಲ್ಲದೆ ಪತ್ತೆಯಾದ ಇತರ ರೂಪಾಂತರಿಗಳು ಹೆಚ್ಚಿನ ಹಾನಿ ಮಾಡಿಲ್ಲ ಎನ್ನುವುದು ತಜ್ಞರ ವಾದ.

ಡೆಲ್ಟಾ ತಳಿಯ ಮೊಮ್ಮಗ!
ಡೆಲ್ಟಾ ತಳಿಯು ಎವೈ 1 -12ರ ವರೆಗೆ 12 ರೂಪಾಂತರಗಳನ್ನು ಹೊಂದಿದೆ. ಈ ಪೈಕಿ ಎವೈ 1 ಮೊದಲ ರೂಪಾಂತರವೇ ಡೆಲ್ಟಾ ಪ್ಲಸ್‌. ಸದ್ಯ ಎವೈ 4 ರೂಪಾಂತರದಿಂದ ಮತ್ತೆರಡು ರೂಪಾಂತರಗಳು ಹುಟ್ಟಿಕೊಂಡಿವೆ. ಅದರಲ್ಲಿ ಒಂದು ಎವೈ.4.2. ಹೀಗಾಗಿ ಇದನ್ನು ಡೆಲ್ಟಾ ತಳಿಯ ಮೊಮ್ಮಗ ಎನ್ನಬಹುದು. ಬ್ರಿಟನ್‌ನಲ್ಲಿ ನಡೆದ ಸಂಶೋಧನೆಗಳ ಪ್ರಕಾರ ಸದ್ಯ ಇದರ ಸೋಂಕು-ಹಾನಿ ಸಾಮರ್ಥ್ಯ ಶೇ. 10 ಮಾತ್ರ ಇದೆ. ಮುಂದಿನ ದಿನಗಳಲ್ಲಿ ರೂಪಾಂತರಗಳು ಹೆಚ್ಚಳವಾಗಲಿದ್ದು, ವರ್ಷಾಂತ್ಯದವರೆಗೆ ಎಚ್ಚರಿಕೆಯಿಂದ ಇರಬೇಕು ಎಂದು ವಂಶವಾಹಿ ತಜ್ಞ ಡಾ| ವಿಶಾಲ್‌ ರಾವ್‌ ಹೇಳಿದ್ದಾರೆ.

ವಿದೇಶಿ ಅಧ್ಯಯನಗಳ ಪ್ರಕಾರ ಕೊರೊನಾದ ಆಲ್ಫಾ ಮತ್ತು ಡೆಲ್ಟಾ ರೂಪಾಂತರಿಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ಶೇ. 60ರಷ್ಟಿತ್ತು. ಅವುಗಳಿಗೆ ಹೋಲಿಸಿದರೆ ಎವೈ.4.2 ತಳಿಯ ಸೋಂಕಿನ ಹರಡುವಿಕೆ ಪ್ರಮಾಣ ಶೇ. 10 ಮಾತ್ರ ಇದೆ. ಹೀಗಾಗಿ ಹೆದರುವ ಅಗತ್ಯವಿಲ್ಲ. ಮುಂದಿನ 3 ತಿಂಗಳು ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ನಿಯಮ ಪಾಲಿಸಬೇಕು
– ಡಾ| ಸತ್ಯನಾರಾಯಣ, ಶ್ವಾಸಕೋಶ ತಜ್ಞರು, ಮಣಿಪಾಲ್‌ ಆಸ್ಪತ್ರೆ

ಹೊಸ ರೂಪಾಂತರ ಕಾಣಿಸಿಕೊಂಡು 3 ತಿಂಗಳಾಗಿದೆ. ಈವರೆಗೆ ಸೋಂಕು ಹೆಚ್ಚಳವಾಗಿಲ್ಲ. ಸದ್ಯ ರಾಜ್ಯದಲ್ಲಿ ಹೊಸ ಪ್ರಕರಣಗಳು ಹತೋಟಿಯಲ್ಲಿದ್ದು, ಜನರು ಗಾಬರಿಯಾಗುವುದು ಬೇಡ. ಲಸಿಕೆ ಪ್ರಕ್ರಿಯೆ ಪೂರ್ಣಗೊಳಿಸುವತ್ತ ಗಮನ ಹರಿಸಬೇಕು.
– ಡಾ| ಸುದರ್ಶನ್‌ ಬಲ್ಲಾಳ್‌, ಮುಖ್ಯಸ್ಥರು, ಮಣಿಪಾಲ್‌ ಆಸ್ಪತ್ರೆ

ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಕೊರೊನಾದ ಎವೈ.4.2 ರೂಪಾಂತರಿ ಬಗ್ಗೆ ತಜ್ಞರ ಸಮಿತಿ ಅಧ್ಯಯನ ನಡೆಸುತ್ತಿದೆ. ಐಸಿಎಂಆರ್‌ ಮತ್ತು ಎನ್‌ಸಿಡಿಸಿ ತಂಡಗಳು ಈ ಬಗ್ಗೆ ಅಧ್ಯಯನ ನಡೆಸಿ, ವರದಿ ನೀಡಲಿವೆ.
– ಮನಸುಖ ಮಾಂಡವಿಯ, ಕೇಂದ್ರ ಆರೋಗ್ಯ ಸಚಿವ

ಎರಡೂ ಡೋಸ್‌ ಲಸಿಕೆ ತೆಗೆದುಕೊಂಡಾಗ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಕೊರೊನಾದ ಯಾವುದೇ ಹೊಸ ತಳಿ ಪ್ರತಿಕೂಲ ಪರಿಣಾಮ ಬೀರುವುದಿಲ್ಲ.
– ಡಾ| ಕೆ. ಸುಧಾಕರ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next