Advertisement

ಯೋಗದಲ್ಲಿ ವಿಶ್ವ ಮಟ್ಟದ ಸಾಧನೆಗೈದ ಬಹುಮುಖ ಬಾಲ ಪ್ರತಿಭೆ

09:59 PM Jan 05, 2020 | mahesh |

ಕುಂದಾಪುರ: ಎಳವೆಯಲ್ಲಿಯೇ ಯೋಗ, ನೃತ್ಯ, ಭರತನಾಟ್ಯ, ಏಕಪಾತ್ರಾಭಿನಯದಲ್ಲಿ ವಿಶ್ವ ಗುರುತಿಸುವಂತೆ ಮಾಡಿದ ಬಹುಮುಖ ಪ್ರತಿಭೆ ಮರವಂತೆಯ ಧನ್ವಿ ಪೂಜಾರಿ. ಕೇವಲ 11ನೇ ವರ್ಷಕ್ಕೆ ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಚಿನ್ನ ಗೆದ್ದು “ಇಂಡಿಯನ್‌ ಬಟರ್‌ ಫ್ಲೈ’ ಎನ್ನುವ ಬಿರುದಾಂಕಿತಳಾಗಿರುವುದು ಧನ್ವಿ ಹೆಗ್ಗಳಿಕೆ.

Advertisement

ಮರವಂತೆಯ ಚಂದ್ರಶೇಖರ ಪೂಜಾರಿ ಹಾಗೂ ಜ್ಯೋತಿ ದಂಪತಿಯ ಪುತ್ರಿಯಾಗಿರುವ ಧನ್ವಿ, ತ್ರಾಸಿಯ ಡಾನ್‌ ಬಾಸ್ಕೋ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಲು ಕಾರಣರಾದ ನಾವುಂದದ ಯೋಗ ಶಿಕ್ಷಕ ಸುಬ್ಬಯ್ಯ ದೇವಾಡಿಗ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದು, 30ಕ್ಕೂ ಯೋಗಾಸನಗಳಲ್ಲಿ ಪರಿಣತಿಯನ್ನು ಪಡೆದಿದ್ದಾರೆ.

ಹತ್ತಾರು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ, ಪ್ರಶಸ್ತಿ ಗಳಿಸಿರುವ ಧನ್ವಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ 5ನೇ ರಾಷ್ಟ್ರೀಯ ಆ್ಯತ್ಲೆಟಿಕ್ಸ್‌ ಯೋಗಾಸನ ಸ್ಪರ್ಧೆಯ 10-12 ವಯೋವಿಭಾಗದಲ್ಲಿ ಅರ್ಹತಾ ಪತ್ರ ಗಳಿಸಿದ್ದರು.

ಬಹುಮುಖ ಪ್ರತಿಭೆ
ಕೇವಲ ಯೋಗದಲ್ಲಿ ನೃತ್ಯದಲ್ಲೂ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಮೊದಲ ರನ್ನರ್‌ಅಪ್‌ ಪ್ರಶಸ್ತಿ ಪಡೆದು ಕೊಂಡಿದ್ದರು. ಇದಲ್ಲದೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಯಲ್ಲೂ ಪ್ರಥಮ ಸ್ಥಾನ ಗಳಿಸಿದ್ದಾರೆ.

ಕುಂದಾಪುರದ ಪ್ರವೀಣ್‌ ಬಾಳಿಕೆರೆ ಗರಡಿಯಲ್ಲಿ ಮಿರಕಲ್‌ ಡಾನ್ಸ್‌ ಗ್ರೂಪ್‌ನಲ್ಲಿ ನೃತ್ಯ ಅಭ್ಯಸಿಸುತ್ತಿದ್ದಾರೆ. ಮಾತ್ರವಲ್ಲದೆ ಭರತನಾಟ್ಯ, ಏಕಪಾತ್ರಾಭಿನಯದಲ್ಲಿಯೂ ಛಾಪು ಮೂಡಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಶಂಸೆ ಪತ್ರ ನೀಡಿ ಗೌರವಿಸಿದೆ.

Advertisement

30 ಕ್ಕೂ ಮಿಕ್ಕಿ ಆಸನ
ಮೂರುವರೆ ವರ್ಷದಿಂದ ಯೋಗ ಅಭ್ಯಸಿಸುತ್ತಿರುವ ಧನ್ವಿ ಈವರೆಗೆ 30ಕ್ಕೂ ಮಿಕ್ಕಿ ವಿವಿಧ ಆಸನಗಳನ್ನು ಮಾಡುವಲ್ಲಿ ಪಳಗಿದ್ದಾರೆ. ಅದರಲ್ಲೂ ವೀರಭದ್ರಾಸನದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ.

3 ಸಿನೆಮಾಗಳಲ್ಲಿ ನಟನೆ
ಧನ್ವಿ ಯೋಗ, ನೃತ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದು, ಮಾತ್ರವಲ್ಲದೆ ಈವರೆಗೆ 3 ಸಿನೆಮಾಗಳಲ್ಲಿಯೂ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ರವಿ ಬಸ್ರೂರು ನಿರ್ದೇಶನದ ಗಿರ್ಮಿಟ್‌, ಪಿ. ಶೇಷಾದ್ರಿ ನಿರ್ದೇಶನದ “ಮೂಕಜ್ಜಿಯ ಕನಸುಗಳು’ ಚಿತ್ರಗಳಲ್ಲಿ ಕಿರುಪಾತ್ರಗಳನ್ನು, ಶಶಿಧರ ಗುಜ್ಜಾಡಿ ನಿರ್ದೇಶನದ “ನಿಧಾನ ಇಲ್ಲವೆ ನಿಧನ’ ಕಿರುಚಿತ್ರದಲ್ಲಿ ಪ್ರಧಾನ ಪಾತ್ರಧಾರಿಯಾಗಿದ್ದರು. ಇನ್ನು ಈಗಷ್ಟೇ ಸೆಟ್ಟೇರಿದ ವೀರಕೇಸರಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದಲ್ಲದೆ ಆಲ್ಬಂ ಸಾಂಗ್‌ಗಳಲ್ಲಿಯೂ ಮಿಂಚಿದ್ದಾರೆ.

ಯೋಗ, ಕಲಿಕೆ
ನನಗೆ ಯೋಗ ಹಾಗೂ ನೃತ್ಯ ರಂಗದಲ್ಲಿ ಇನ್ನಷ್ಟು ಹೆಸರು ಮಾಡಬೇಕು ಎನ್ನುವ ಕನಸಿದೆ. ವೈದ್ಯಳಾಗಿ, ನಮ್ಮ ಹಳ್ಳಿ ಕಡೆಗಳ ಜನರ ಸೇವೆ ಮಾಡಬೇಕು ಎನ್ನುವ ಆಸೆಯಿದೆ. ಯೋಗ ಹಾಗೂ ಓದಬೇಕು.
-ಧನ್ವಿ ಪೂಜಾರಿ ಮರವಂತೆ, ಸಾಧಕಿ

ಗಿನ್ನೆಸ್‌ ದಾಖಲೆ
ಕಳೆದ ವರ್ಷದ ಸೆ. 24, 25 ರಂದು ಚೆನ್ನೈನಲ್ಲಿ ನಡೆದ ಜಾಗತಿಕ ಯೋಗೋತ್ಸವದಲ್ಲಿ ಒಂದೂವರೆ ನಿಮಿಷ ಕಾಲ ವೀರಭದ್ರಾಸನ ಪ್ರದರ್ಶಿಸಿ ಗಿನ್ನೆಸ್‌ ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆಯಿಂದಾಗಿ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next