ಕೆ.ಆರ್.ಪೇಟೆ: ಹೆಣ್ಣು ಸಂಸಾರದ ಕಣ್ಣು ಎಂಬ ಮಾತು ಅಕ್ಷರ ಸತ್ಯ, ಮಹಿಳೆಯರಿಂದಲೆ ಬಹುತೇಕ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ತಾಲೂಕು ಯೋಜನಾಧಿಕಾರಿ ಸುಧೀರ್‌ಜೈನ್ ತಿಳಿಸಿದರು.
ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಒಕ್ಕೂಟಗಳ ಪದಾಧಿಕಾರಿಗಳ ತ್ತೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕುಟುಂಬ ನಿರ್ವಹಣೆ ಪುರುಷರಿಗಿಂತ ಮಹಿಳೆಯರೇ ಅತ್ಯಂತ ಜವಾಬ್ದಾರಿಯಿಂದ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ.
ಇಂದಿನ ದಿನಗಳಲ್ಲಿ ಬಹುತೇಕ ಮಹಿಳೆಯರು ಸಾಲ ಸೌಲಭ್ಯಗಳಿಂದ ಆರ್ಥಿಕ ಸುಧಾರಣೆಗೆ ವಿವಿಧ ಕೌಶಲ್ಯಗಳನ್ನು ಬಳಸಿಕೊಂಡಿದ್ದಾರೆ. ಮಹಿಳೆ ಕುಟುಂಬವನ್ನು ನಿರ್ವಹಿಸಿದಷ್ಟೇ ಚಾತುರ್ಯದಿಂದ ಸಮಾಜವನ್ನು ಮುನ್ನಡೆಸಬಲ್ಲಲು. ಅದನ್ನು ಅರ್ಥ ಮಾಡಿಕೊಂಡು ಕುಟುಂಬದ ಸದಸ್ಯರು ಮಹಿಳೆಯರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ದುಂದು ವೆಚ್ಚಕ್ಕೆ ಕಡಿವಾಣ: ಅಕ್ಕಪಕ್ಕದ ಮನೆಯವರು, ನೆಂಟರಿಸ್ಟರು ಅದ್ಧೂರಿ ಮದುವೆ, ಉತ್ಸವ ಇತ್ಯಾದಿ ದುಂದು ವೆಚ್ಚ ಮಾಡಿದರೆಂದು ನಾವೂ ಅವರಂತೆ ಮಾಡಬೇಕೆಂದು ಸಾಲ ಮಾಡಿ ದುಂದುವೆಚ್ಚ ಮಾಡಬಾರದು. ನಮ್ಮ ಶಕ್ತಿಗೆ ಅನುಗುಣವಾಗಿ ಹಣ ವ್ಯಯಿಸಬೇಕು. ಅನಗತ್ಯ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಬೇಕು. ಆಗ ಸಾಲವಿಲ್ಲದೆ ನೆಮ್ಮದಿಯ ಜೀವನ ನಡೆಸಬಹುದು.
ದುಂದುವೆಚ್ಚಕ್ಕೆ ಬಳಸುವ ಹಣವನ್ನು ಮತ್ತಾವುದಾದರೂ ಒಂದು ಉಪಯೋಗಕ್ಕೆ ಬಳಸಿದರೆ ಕುಟುಂಬದಲ್ಲಿ ಆರ್ಥಿಕ ಸಮತೋಲನ ಕಾಯ್ದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಸಾಲ ಮಾಡಿ ಐಷಾರಾಮಿ ಜೀವನ ನಡೆಸುವ ಹಗಲು ಕನಸು ಕಾಣಬಾರದು. ಇರುವ ಆದಾಯದಲ್ಲಿ ಹಿತಮಿತವಾಗಿ ಬಳಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು. ಅಗತ್ಯ ಬಿದ್ದರೆ ಮಾತ್ರ ಸಾಲ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಬಡ್ಡಿ ದರ ಇಳಿಕೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ರಾಜ್ಯದಲ್ಲಿ ಮಹಿಳೆಯರು, ಪುರುಷರು ಸ್ವಯಂ ಉದ್ಯೋಗ ಕೈಗೊಳ್ಳಲು, ರೈತರು ವ್ಯವಸಾಯಕ್ಕೆ ವಾರ್ಷಿಕ ಶೇ.16.75 ರೂ. ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿತ್ತು. ಇದೀಗ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸೂಚನೆಯಂತೆ 1.75 ಬಡ್ಡಿದರ ಕಡಿಮೆ ಮಾಡಲಾಗಿದೆ. ಇನ್ನು ಮುಂದೆ ವಾರ್ಷಿಕ ಶೇ.15ರಷ್ಟು ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗಿರೀಶ್, ಹಸೀನಾ, ರೂಪಾ, ವನಜಾಕ್ಷಿ, ರಾಣಿ, ಮಣಿ, ಮತ್ತಿತರರು ಹಾಜರಿದ್ದರು.