ನಾನಿರೋದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ. ಪೇರೆಂಟ್ ಕಂಪೆನಿಯಿಂದ ಕ್ಲೈಂಟ್ ಆಫೀಸ್‌ಗೆ ಕೆಲಸ ಮಾಡುತ್ತಿರುವುದು. ಮನೆಯಿಂದ ಆಫೀಸ್ ದೂರ, ಹೀಗಾಗಿ ಆಫೀಸ್ ಬಸ್ ಒದಗಿಸಿಕೊಟ್ಟಿರುವುದರಿಂದ ಆರಾಮವಾಗಿ ಹೋಗಿ ಬರುತ್ತೇನೆ. ಹುಟ್ಟಿ ಬೆಳೆದ ಊರಿಗೂ ಬೆಂಗಳೂರಿಗೂ ಅಜಗಜಾಂತರ ವ್ಯತ್ಯಾಸ. ಇಲ್ಲಿಯ ಚಾಲಕರು ಮಾತಾಡೋದು ಕೂಡ ಬೈತಿದ್ದಾರೆ ಅಂತಾನೆ ಅನಿಸುತ್ತಿತ್ತು. ಹಾಗಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುವುದರಿಂದ ಸ್ವಲ್ಪ ದೂರವೇ ಇದ್ದೆ.
ಆದರೆ ಅದೊಂದು ದಿನ ಬಸ್‌ನಲ್ಲಿ ಹೋಗಬೇಕಾಗಿ ಬಂತು. ಯಾವುದೋ ತರಬೇತಿ ಸಲುವಾಗಿ ಪೇರೆಂಟ್ ಕಂಪೆನಿಗೆ ಹೊರಟೆ. ಬೆಳಗ್ಗೆ ಸಲೀಸಾಗಿ ತಲುಪಿ, ಮಾಡಬೇಕಿದ್ದ ಕೆಲಸಗಳನ್ನೆಲ್ಲ ಚೆನ್ನಾಗಿ ಮುಗಿಸಿ ವಾಪಸ್ ಹೊರಟೆ. ಜನರಿಂದ ತುಂಬಿದ್ದ ಹಲವು ಬಸ್‌ಗಳನ್ನು ಬಿಟ್ಟು, ಜನರಿಲ್ಲದೇ ಭಣಗುಟ್ಟುತ್ತಿದ್ದ ಬಸ್ ಹತ್ತಿದೆ. ಆಗಾಗ ಮೊಬೈಲ್ ನೋಡಿ ಮೆಸೇಜುಗಳನ್ನು ಪರೀಕ್ಷಿಸಿ, ಬ್ಯಾಗ್ ಒಳಗೆ ಇಡುತ್ತಿದ್ದೆ. ಅವಳೊಬ್ಬಳು ನನ್ನನ್ನು ಗಮನಿಸುತ್ತಿದ್ದಳು, ನನಗದು ಅರಿವಾಗಲೇ ಇಲ್ಲ!
ಸರಿ. ಇನ್ನೇನು ನನ್ನ ಸ್ಟಾಪ್ ಬಂತು ಇಳಿಯಬೇಕೆಂದು ಮುಂದೆ ಬಂದು ನಿಂತೆ, ಅವಳು ನನ್ನ ಹಿಂದೆ ಸ್ವಲ್ಪ ದೂರಕ್ಕೆ ನಿಂತಳು. ಹಂಪ್ ಬಂತೆಂದು ಬಸ್ ಡ್ರೈವರ್ ಬ್ರೇಕ್ ಒತ್ತಲೂ, ತನ್ನ ಕೆಲಸ ಚಕಚಕಾಂತ ಮುಗಿಸಿಬಿಡೋಣವೆಂದು ಅವಳು. ನನ್ನ ಚೀಲಕ್ಕೆ ಏನೋ ಭಾರದ್ದು ಬಿತ್ತೆಂದು ಸುಮ್ಮನೆ ತಿರುಗಿ ನೋಡಿದೆ, ಅವಳು ನನ್ನೆಡೆಗೆ ಅಮಾಯಕಳಂತೆ ನೋಡಿದಳು. ಗಮ್ಯ ತಲುಪಿದಾಗ ಇಳಿದೆ, ಅವಳು ಇಳಿದು ಇನ್ನೊಂದೆಡೆ ಸಾಗಿದಳು. ಐಡಿ ಕಾರ್ಡ್ ತೆಗೆಯಬೇಕೆಂದು ಹೊರಟವಳಿಗೆ ಸಣ್ಣಕೆ ಹೃದಯಾಘಾತವಾಗುವಂತಹ ಕ್ಷಣ! ಲ್ಯಾಪ್ ಟಾಪ್ ಬ್ಯಾಗ್ ಝಿಪ್ ಸ್ವಲ್ಪ ತೆರೆದಿತ್ತು, ನೋಡಿದ್ರೆ ನನ್ನ ಮೊಬೈಲ್ ಅನ್ನು ಅವಳು ಕದ್ದುಬಿಟ್ಟಿದ್ದಳು!
ಅದಾದ ಅನಂತರ ಒಂದು ವಾರದ ಕಾಲ ಹಳೆಯ ಬೇಸಿಕ್ ಮೊಬೈಲೇ ನನ್ನ ಪಾಲಾಯಿತು. ಹೊಸತು ಕೊಂಡರೆ ಪುನಃ ಅದೆಲ್ಲಿ ಕಳೆದು ಹೋಗುವುದೋ ಎಂಬ ವಿಚಿತ್ರ ಭಯ ಆವರಿಸಿತ್ತು. ವಾಟ್ಸ್‌ಆ್ಯಪ್ ಇಲ್ಲ, ಫೇಸ್‌ಬುಕ್ ಇಲ್ಲ ಅಂತೂ ವನವಾಸ ತರವಿತ್ತು ಆ ಏಳು ದಿನಗಳು. ಕೆಲವು ವರ್ಷಗಳಿಂದ ಸ್ಮಾರ್ಟ್‌ಫೋನ್ ಅಭ್ಯಾಸವಾಗಿ ಈ ಬೇಸಿಕ್ ಫೋನ್ ಅಲ್ಲಿ ಏನೂ ಮಾಡೋಕಾಗದ ಸ್ಥಿತಿ! ಮೊಬೈಲ್ ಎಂಬ ಮಾಯೆಯಲ್ಲಿ ನಾನೆಷ್ಟು ಬಂಧಿಯೆಂದು ಮನವರಿಕೆಯಾಯಿತು.
ಸುಪ್ರೀತಾ ವೆಂಕಟ್ ಸಾಫ್ಟ್ವೇರ್ ಎಂಜಿನಿಯರ್, ಬೆಂಗಳೂರು