Advertisement
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪರಿವಾರಕ್ಕೆ ಭಾರತ ಬಹುಕಾಲ ನೆನಪಿಟ್ಟುಕೊಳ್ಳುವಂಥ ಆತಿಥ್ಯವನ್ನು ನೀಡಿದೆ. ಬಹಳಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದ ಟ್ರಂಪ್ ಭೇಟಿ ಫಲಪ್ರದವಾಗಿ ಮುಕ್ತಾಯಗೊಂಡಿದೆ. ಎಲ್ಲ ನಿರೀಕ್ಷೆಗಳು ಈಡೇರದಿದ್ದರೂ ಈ ಒಂದು ಭೇಟಿಯಿಂದಾಗಿ ಜಗತ್ತಿನ ಎರಡು ಬೃಹತ್ ಪ್ರಜಾತಂತ್ರ ದೇಶಗಳ ನಡುವಿನ ಸಂಬಂಧ ಇನ್ನಷ್ಟು ನಿಕಟವಾಗಿರುವುದು ಸತ್ಯ. ರೋಡ್ ಶೋ ಇರಬಹುದು, ಸಬರಮತಿ ಭೇಟಿ ಇರಬಹುದು, ಮೋಟೆರಾದ ನಮಸ್ತೆ ಟ್ರಂಪ್ ಕಾರ್ಯಕ್ರಮ ಇರಬಹುದು ಅಥವಾ ತಾಜ್‌ಮಹಲ್ ಪ್ರವಾಸ ಇರಬಹುದು. ಈ ಎಲ್ಲ ಸನ್ನಿವೇಶಗಳಲ್ಲಿ ಟ್ರಂಪ್ ಭಾರತೀಯರು ಮತ್ತು ಭಾರತೀಯತೆಗೆ ನೀಡಿರುವ ಪ್ರಾಧಾನ್ಯ ಗಮನಾರ್ಹ ಅಂಶವಾಗಿತ್ತು.
Related Articles
Advertisement
ಅಪಾಚೆ ಮತ್ತು ಎಂಎಚ್-60 ರೋಮಿಯೊ ಸಮರ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಸುಮಾರು 21,000 ಕೋ. ರೂ.ಗಳ ಒಪ್ಪಂದಕ್ಕೆ ಅಂಕಿತ ಹಾಕಿರುವುದು ಈ ದ್ವಿದಿನ ಭೇಟಿಯ ಬಹುಮುಖ್ಯ ಅಂಶಗಳಲ್ಲಿ ಒಂದು. ಈ ಮೂಲಕ ಭಾರತದ ಸೇನೆಯನ್ನು ಆಧುನೀಕರಣಗೊಳಿಸಿ ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಭಾರತ ದಾಪುಗಾಲಿಟ್ಟಿದೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮತ್ತು ಎಕ್ಸನ್‌ಮೊಬಿಲ್ ನಡುವೆ ಆಗಿರುವ ತೈಲೋದ್ಯಮದ ಒಪ್ಪಂದ ಇನ್ನೊಂದು ಪ್ರಮುಖ ಅಂಶ. ಇದಲ್ಲದೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮೂರು ಒಪ್ಪಂದಗಳನ್ನೂ ಮಾಡಿಕೊಳ್ಳಲಾಗಿದೆ.
ಅಂತಾರಾಷ್ಟ್ರೀಯವಾಗಿ ಗಮನ ಸೆಳೆದಿರುವ ಇತ್ತೀಚೆಗಿನ ನಿರ್ಧಾರಗಳಾಗಿರುವ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದು ಮತ್ತು ಪೌರತ್ವ ಕಾಯಿದೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಂಪ್ ತಟಸ್ಥ ಧೋರಣೆಯನ್ನು ಪ್ರದರ್ಶಿಸಿದ್ದಾರೆ. ಪ್ರವಾಸದ ಸಂದರ್ಭದಲ್ಲಿಯೇ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದರೂ ಟ್ರಂಪ್ ಪೌರತ್ವ ಕಾಯಿದೆ ಭಾರತದ ಆಂತರಿಕ ವಿಚಾರ, ಆ ಬಗ್ಗೆ ಮಾತನಾಡುವುದಿಲ್ಲ ಎನ್ನುವ ಮೂಲಕ ನಮ್ಮ ಸಾರ್ವಭೌಮತೆಯನ್ನು ಗೌರವಿಸಿದರು. ಇದೇ ವೇಳೆ ಉಭಯ ದೇಶಗಳು ಬಯಸಿದರೆ ಕಾಶ್ಮೀರ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ತನ್ನ ಹಿಂದಿನ ಕೊಡುಗೆಯನ್ನು ಪುನರುಚ್ಚರಿಸಿದರೂ ಈ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ. ಈ ಮೂಲಕ ಪ್ರಬುದ್ಧವಾದ ರಾಜತಾಂತ್ರಿಕ ನಡೆಯೊಂದನ್ನು ಪ್ರದರ್ಶಿಸಿದರು.
ಭಾರತ ತನ್ನ ವಿದೇಶಾಂಗ ನೀತಿಯಂಗವಾಗಿ ಒಂದು ದೇಶದ ಮುಖ್ಯಸ್ಥನಿಗಾಗಿ ಇಷ್ಟೊಂದು ಅದ್ದೂರಿ ಕಾರ್ಯಕ್ರಮ ಏರ್ಪಡಿಸಿದ ನಿದರ್ಶನ ಇಲ್ಲ. ಈ ದೃಷ್ಟಿಯಿಂದಲೂ ಇದು ಒಂದು ಐತಿಹಾಸಿಕ ಭೇಟಿ ಆಗುತ್ತದೆ. ಮುಂಬರುವ ನವಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯವನ್ನು ಒಲಿಸಿಕೊಳ್ಳುವ ಪ್ರಯತ್ನ ಇದು ಆಗಿರಲೂಬಹುದು. ಅಂತೆಯೇ ಎರಡು ದಿನದ ಭೇಟಿಗೆ ಆಗಿರುವ ಖರ್ಚುವೆಚ್ಚಗಳು ಇತ್ಯಾದಿಗಳ ಬಗ್ಗೆ ಸಾಕಷ್ಟು ಟೀಕೆಗಳು ಇರಬಹುದು. ಆದರೆ ಈ ಒಂದು ಭೇಟಿಯಿಂದ ಜಾಗತಿಕ ರಾಷ್ಟ್ರಗಳ ಎದುರು ಭಾರತ ತನ್ನ ತಾಕತ್ತು ಮತ್ತು ಸ್ಥಾನಮಾನ ಏನು ಎನ್ನುವುದನ್ನು ತೋರಿಸಿಕೊಟ್ಟಿದೆ.