Advertisement

ಅಂಗಾಂಗ ದಾನ ಮಾಡಿ ನಾಲ್ವರ ಜೀವ ಉಳಿಸಿದ ಹಳ್ಳಿ ಯುವಕ

06:24 PM Jul 23, 2022 | Team Udayavani |

ಬೆಳಗಾವಿ: ಖಾನಾಪೂರ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯವಾಗಿ ಮೆದುಳು ನಿಷ್ಕ್ರಿಯಗೊಂಡು ಕೆಎಲ್‌ಇ ಸಂಸ್ಥೆಯ ಡಾ| ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 26 ವರ್ಷದ ಯುವಕ ತನ್ನ ಅಂಗಾಂಗಗಳನ್ನು ದಾನ ಮಾಡಿ ನಾಲ್ಕು ಜನರ ಜೀವ ಉಳಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

Advertisement

ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ| ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಕಸಿ ಮಾಡಲು ಅಣಿಯಾದರೆ, ಲೀವರ (ಜಠರ) ಅನ್ನು ಬೆಂಗಳೂರಿನ ಬಿಜಿಎಸ್‌ ಗ್ಲೋಬ್‌ ಹಾಗೂ ಎರಡೂ ಕಿಡ್ನಿಗಳನ್ನು ಧಾರವಾಡದ ಎಸ್‌ ಡಿಎಂ ಆಸ್ಪತ್ರೆಗೆ ಜೀರೋ ಟ್ರಾಫಿಕ್‌ ಮೂಲಕ  ಕಳಿಸಿಕೊಡಲಾಯಿತು. ಪೊಲೀಸರು ಸಂಪೂರ್ಣವಾಗಿ ಜೀರೋ ಟ್ರಾಫಿಕ್‌ ಅಥವಾ ಗ್ರೀನ ಕಾರಿಡಾರ್‌ (ಹಸಿರು ಪಥ) ಮೂಲಕ ಅಂಗಾಂಗಗಳನ್ನು ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು.

ಖಾನಾಪೂರ ತಾಲೂಕಿನ ಜಾಂಬೋಟಿ ಸಮೀಪದ ಅಮಟೆ ಗ್ರಾಮದ ನಿವಾಸಿ ಸಹದೇವ ಅರ್ಜುನ ಗಾಂವಕರ(26) ಅವರು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಮೆದುಳಿಗೆ ತೀವ್ರತರವಾದ ಗಾಯವಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ನಿಷ್ಕ್ರಿಯಗೊಂಡಿತ್ತು. ಆದರೆ ಉಳಿದ ಅಂಗಾಂಗಗಳು ಕಾರ್ಯನಿರ್ವಹಿಸುತ್ತಿದ್ದವು.

ಮೆದುಳು ನಿಷ್ಕ್ರಿಯಗೊಂಡ ಯುವಕನ ತಂದೆ-ತಾಯಿ ಹಾಗೂ ಕುಟುಂಬ ಸದಸ್ಯರ ಜೊತೆ ಆಪ್ತಸಮಾಲೋಚನೆ ಮಾಡಿ, ನಿಮ್ಮ ಮಗ ನೀಡುವ ಅಂಗಾಂಗಗಳಿಂದ ಇನ್ನೊಬ್ಬರ ಜೀವ ಉಳಿಯುತ್ತದೆ ಎಂದು ಹೇಳಿದಾಗ ಕುಟುಂಬದ ಸದಸ್ಯರು ಸ್ವಇಚ್ಛೆಯಿಂದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದರು.

ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ| ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಗೆ ಕಸಿ ಮಾಡುವಲ್ಲಿ ವೈದ್ಯರು ನಿರತರಾದರೆ, ಲೀವರ್‌ ಅನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದವರಗೆ ರಸ್ತೆ ಮೂಲಕ ಸಾಗಿಸಿ ಅಲ್ಲಿಂದ ಬೆಂಗಳೂರಿಗೆ ಮತ್ತು ಎರಡೂ ಕಿಡ್ನಿಗಳನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ರವಾನಿಸಲಾಯಿತು. ಯುವಕ ಮೃತಪಟ್ಟರೂ ಸಹ ನಾಲ್ಕು ಜನರ ಜೀವ ಉಳಿಸಿ ಸಾರ್ಥಕತೆ ಮೆರೆದರು.

Advertisement

ಅಂಗಾಂಗಗಳನ್ನು ಸಾಗಿಸುವ ಕಾರ್ಯದಲ್ಲಿ ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಇಲಾಖೆಯ ಸಿಬ್ಬಂದಿಗಳು ನೀಡಿದ ಸಹಕಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅತ್ಯಂತ ಜನಸಂದಣಿ ಹಾಗೂ ಸಂಚಾರ ದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಗ್ರೀನ್‌ ಕಾರಿಡಾರ್‌ ನಿರ್ಮಿಸಿ ಅಂಗಾಂಗಗಳನ್ನು ಶೀಘ್ರ ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು.

ಇದಕ್ಕೂ ಮೊದಲು ನಗರದ ವಿಜಯಾ ಆಸ್ಪತ್ರೆಯಲ್ಲಿ ಯುವಕನನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿಯೇ ಮೆದುಳು ಗಂಭೀರ ಸ್ಥಿತಿಗೆ ತಲುಪಿದಾಗ ವಿಜಯಾ ಆಸ್ಪತ್ರೆಯ ಡಾ| ರವಿ ಪಾಟೀಲ ಅವರ ತಂಡ, ಅಮಟೆ ಗ್ರಾಮದ ಹಿರಿಯ ಅರ್ಜುನ ಕಸಲೇಕರ, ಅಭಿಮನ್ಯು ಡಾಗಾ, ಸಮಾಜ ಸೇವಕ ವಿಜಯ ಮೋರೆ ಮೊದಲಾದವರು ಈ ಕಾರ್ಯದಲ್ಲಿ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಡಾ| ಬಸವರಾಜ ಬಿಜ್ಜರಗಿ ಉಪಸ್ಥಿತರಿದ್ದರು. ಅಂಗಾಂಗಗಳನ್ನು ದಾನ ಮಾಡಿದ ವ್ಯಕ್ತಿ ಹಾಗೂ ಆತನ ಕುಟುಂಬ ಸದಸ್ಯರ ಕಾರ್ಯವನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ| ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಎಂ ವಿ ಜಾಲಿ ಅಭಿನಂದಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next