Advertisement

ನಿಷ್ಪ್ರಯೋಜಕವಾದ ಕಿಂಡಿ ಅಣೆಕಟ್ಟು 

11:05 AM Dec 03, 2022 | Team Udayavani |

ಉಪ್ಪಿನಂಗಡಿ: ಕೋಟ್ಯಂತರ ರೂ. ವೆಚ್ಚದಲ್ಲಿ ಕೃಷಿ ಚಟುವಟಿಕೆ ಹಾಗೂ ಅಂತರ್ಜಲವನ್ನು ವೃದ್ಧಿಸುವ ಉದ್ದೇಶದಿಂದ ನಿರ್ಮಿಸಿರುವ ಕಿಂಡಿ ಅಣೆಕಟ್ಟುಗಳ ಪೈಕಿ ಹಲವು ನಿರ್ವಹಣೆಯಿಲ್ಲದೆ ಸೊರಗಿ ನಿಷ್ಪ್ರಯೋಜಕವಾಗುತ್ತಿವೆ.

Advertisement

ಆ ಮೂಲಕ ಉಪ್ಪಿನಂಗಡಿ ಭಾಗ ಒಂದರಲ್ಲೇ ಅನೇಕ ಕಿಂಡಿ ಅಣೆಕಟ್ಟುಗಳಿಂದು ಮೂಲ ಉದ್ದೇಶವನ್ನೇ ಮರೆತಂತಿದ್ದು, ನೀರಿಲ್ಲದೆ ಬರಡಾಗಿ ನಿಂತಿದೆ.

ಕೆಮ್ಮಾರ: ಇನ್ನೂ ಹಲಗೆ ಅಳವಡಿಸಿಲ್ಲ :

ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳೆಗೆ ಕೆಮ್ಮಾರದ ನೆಕ್ಕರಾಜೆ ಬಳಿ ಒಂದು ಕಿಂಡಿ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಕಿಂಡಿ ಅಣೆಕಟ್ಟು ಇದ್ದರೂ, ಅದಕ್ಕೆ ಹಲಗೆ ಅಳವಡಿಸುವ ಕಾರ್ಯ ಈವರೆಗೆ ನಡೆಯುತ್ತಿಲ್ಲ. ಇದು ಸಂಪರ್ಕ ಸೇತುವಾಗಿಯೂ ಬಳಕೆಯಾಗುತ್ತಿಲ್ಲ. ಅದೀಗ ಹೊಳೆ ನೀರಲ್ಲಿ ತೇಲಿ ಬಂದ ಮರಗಳು ಢಿಕ್ಕಿ ಹೊಡೆದು ಜಖಂಗೊಂಡಿದೆ. ಇದಕ್ಕೆ ಲಕ್ಷಾಂತರ ರೂ. ವ್ಯಯಿಸಿದ್ದು ಮಾತ್ರ ಕಾಣುತ್ತಿದೆ.

ಮಠ :

Advertisement

ಮಠದ ನೈಕುಳಿ ಎಂಬಲ್ಲಿ ತೋಡೊಂದಕ್ಕೆ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇಲ್ಲಿ ಕೂಡ ಹಲಗೆ ಇಡುವ ಕಾರ್ಯ ನಡೆಯುತ್ತಿಲ್ಲ. ಇದು ಸಾರ್ವಜನಿಕ ದುಡ್ಡು ಪೊಲಾಗಿರುವುದಕ್ಕೆ ಸಾಕ್ಷಿಯಾಗಿ ನಿಂತಿದೆ.

“ಹರಿಯುವ ನೀರನ್ನು ನಿಲ್ಲಿಸಿ. ನಿಂತ ನೀರನ್ನು ಇಂಗಿಸಿ’ ಎಂಬ ಧ್ಯೇಯದೊಂದಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಜಿಲ್ಲಾ ಪಂಚಾಯತ್‌ಗಳಿಂದ ಕೋಟಿ, ಲಕ್ಷಾಂತರ ರೂ. ಅನುದಾನ ನೀಡಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತದೆ. ಅಲ್ಲೆಲ್ಲ ಒಂದೆರಡು ವರ್ಷ ಅದರ ಉದ್ದೇಶ ಈಡೇರಿದೆಯೇ ಹೊರತು ಆಮೇಲೆ ಅದು ಉಪಯೋಗ ಶೂನ್ಯವಾಗಿದೆ.

ಇದರ ನಿರ್ವಹಣೆಯೆಂದರೆ ವರ್ಷಂಪ್ರತಿ ಹೊಳೆಯಲ್ಲಿ ಸ್ವಲ್ಪಮಟ್ಟಿನ ನೀರಿನ ಹರಿವು ಇರುವ ನವೆಂಬರ್‌- ಡಿಸೆಂಬರ್‌ ತಿಂಗಳಲ್ಲಿ ಇದಕ್ಕೆ ಹಲಗೆ ಜೋಡಿಸುವುದು, ಹಲಗೆಗಳ ಮಧ್ಯೆ ಮಣ್ಣು ಹಾಕುವುದು, ಮಳೆಗಾಲ ಆರಂಭಕ್ಕೆ ಮುನ್ನ ಹಲಗೆಗಳನ್ನು ತೆಗೆಯುವುದು. ಆದರೆ ಅನುದಾನ ನೀಡುವ ಇಲಾಖೆಗಳಿಗೆ ಇದರ ನಿರ್ವಹಣೆಯ ಹೊಣೆ ಇಲ್ಲ. ಸ್ಥಳೀಯರಲ್ಲಿ ಒಗ್ಗಟ್ಟಿನ ಕೊರತೆ ಹಾಗೂ ಖರ್ಚಾಗುವ ಮೊತ್ತವನ್ನು ಭರಿಸುವುದ್ಯಾರು ಎಂಬ ಪ್ರಶ್ನೆ. ಇದರ ನಿರ್ವಹಣೆಗೆ ಸ್ಥಳೀಯರ ಸಮಿತಿ ರಚಿಸಿ, ಇದಕ್ಕಾಗುವ ಖರ್ಚುವೆಚ್ಚಗಳನ್ನು ಭರಿಸಲು ಸ್ಥಳೀಯಾಡಳಿತ ಸಂಸ್ಥೆಗಳು ಮುಂದಾಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಯೋಜನೆಯ ಹೆಸರಿನಲ್ಲಿ ಕಿಂಡಿಅಣೆಕಟ್ಟಿಗಾಗಿ ಲಕ್ಷ, ಕೋಟಿ ರೂ. ಸಾರ್ವಜನಿಕರ ದುಡ್ಡು ಪೋಲಾಗಿರೋದು ಬಿಟ್ಟರೆ, ಇಲ್ಲಿ ನೀರು ನಿಲ್ಲೋದು ಇಲ್ಲ. ಇಂಗೋದು ಇಲ್ಲ.

ನಾಲಾಯದ ಗುಂಡಿ :

40 ಎಕ್ರೆ ಕೃಷಿ ಪ್ರದೇಶದಲ್ಲಿ ಅಂತರ್ಜಲ ಅಭಿವೃದ್ಧಿಯ ಉದ್ದೇಶದಿಂದ ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳೆಗೆ ನಾಲಾಯದ ಗುಂಡಿ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಒಂದು ಕೋಟಿ ರೂ.ಗೂ ಹೆಚ್ಚಿನ ಮೊತ್ತದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡು 2019ರ ಡಿಸೆಂಬರ್‌ನಲ್ಲಿ ಸಚಿವ ಮಾಧು ಸ್ವಾಮಿ ಅವರಿಂದ ಉದ್ಘಾಟನೆಗೊಂಡಿತ್ತು. ಈ ಸಂದರ್ಭದಲ್ಲಿ ಇದಕ್ಕೆ ಹಲಗೆ ಅಳವಡಿಸಿ ನೀರು ಶೇಖರಿಸಿದ್ದು ಬಿಟ್ಟರೆ, ಆ ಮೇಲೆ ನೀರು ಶೇಖರಣೆ ಮಾಡುವ ಕೆಲಸ ಇಲ್ಲಿ ನಡೆದಿಲ್ಲ. ಈ ಕಿಂಡಿ ಅಣೆಕಟ್ಟು ಜೀಪು, ರಿûಾಗಳಂತಹ ವಾಹನಗಳಿಗೆ ಹೋಗಲು ಸಂಪರ್ಕ ಸೇತುವಾಗಿ ಮಾತ್ರ ಬಳಕೆಯಾಗುತ್ತಿತ್ತು. ಈ ಕಿಂಡಿ ಅಣೆಕಟ್ಟಿನ ಸುಮಾರು 300 ಮೀಟರ್‌ ದೂರದಲ್ಲಿ ಹಲವು ವರ್ಷಗಳ ಹಿಂದೆ ಇನ್ನೊಂದು ಕಿಂಡಿ ಅಣೆಕಟ್ಟು ನಿರ್ಮಾಣವಾಗಿದ್ದು, ಒಂದೆರಡು ವರ್ಷ ಅಲ್ಲಿ ನೀರು ಶೇಖರಿಸಿದ್ದು, ಬಿಟ್ಟರೆ ಇದೀಗ ಅದು ಕೂಡ ಕೇವಲ ಸ್ಮಾರಕದಂತಿದೆ.

ಗ್ರಾ.ಪಂ.ಗೆ ವಹಿಸಿಕೊಡಲಾಗುತ್ತದೆ:

ಕಿಂಡಿ ಅಣೆಕಟ್ಟಿನ ನಿರ್ಮಾಣ ಕಾಮಗಾರಿ ಮುಗಿದ ಮೇಲೆ ಅದರ ನಿರ್ವಹಣೆಯನ್ನು ಆಯಾಯ ಗ್ರಾಮ ಪಂಚಾಯತ್‌ಗೆವಹಿಸಿಕೊಡಲಾಗುತ್ತದೆ. ಅವರು ನಿಭಾಯಿಸಬೇಕು. -ಭರತ್‌,  ಸಹಾಯಕ ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ, ಪುತ್ತೂರು  

-ಎಂ.ಎಸ್‌. ಭಟ್‌ ಉಪ್ಪಿನಂಗಡಿ

Advertisement

Udayavani is now on Telegram. Click here to join our channel and stay updated with the latest news.

Next