Advertisement

ಹೆತ್ತಮ್ಮನಿಲ್ಲದ ತವರಲ್ಲೊಂದು ಮದುವೆ

03:54 PM Jun 19, 2017 | Team Udayavani |

ಕಲಬುರಗಿ: ಅದು ಮೇಲ್ನೋಟಕ್ಕೆ ತಾಯಿ ಇಲ್ಲದ ತವರಿನಂತೆ. ತಂದೆಯ ಅಕ್ಕರೆ ಇಲ್ಲದ ಅಂಗಳದಂತೆ. ಆದರೂ ಅಲ್ಲೂ ಮಮತೆಯಿಂದ ತಲೆ ಸವರಿ ಎಣ್ಣೆ ಹಚ್ಚಿ ಬಾಚುತ್ತಾರೆ, ಗಲ್ಲಕ್ಕೆ ಅರಿಸಿಣ ಹಚ್ಚಿ ಗಿಲ್ಲುತ್ತಾರೆ. ಖುಷಿ ಖುಷಿಯಾಗಿ ಹೂವಿಟ್ಟು ಕಂಕಣ ಕಟ್ಟುತ್ತಾರೆ.

Advertisement

ಅಕ್ಷತೆ ಹಾಕಿ ಗಂಡನ ಜೊತೆ ಹೋಗಿ ಚೆಂದ ಬಾಳು ಬಾಳಮ್ಮ ಅಂತ ಹರಸ್ತಾರೆ. ಇದಿಷ್ಟು ಇಲ್ಲಿನ ಆಳಂದ ರಸ್ತೆಯಲ್ಲಿರುವ ನಿರ್ಮಿತಿ ಕೇಂದ್ರದ ಮುಂದಿರುವ ರಾಜ್ಯ ಮಹಿಳಾ ನಿಲಯದಲ್ಲಿ ಜೂ. 19ರಂದು ಕಂಡು ಬರುವ ದೃಶ್ಯ. ಹೌದು ಜೂ. 19ರಂದು ನಿಲಯದ ನಿವಾಸಿಯಾಗಿರುವ ಉರ್ಮಿಳಾಳ ಮದುವೆ ಶಿವಲಿಂಗಯ್ಯ ಅವರೊಂದಿಗೆ ನಡೆಯಲಿದೆ.

ಈ ನಿಮಿತ್ತ ರಾಜ್ಯ ಮಹಿಳಾ ನಿಲಯ ತನ್ನ ಮಕ್ಕಳನ್ನು ಹರಸಿ ಕಳಿಸಿಕೊಟ್ಟ ಕಥೆ ಇದು. ಅಲ್ಲದೆ, ರವಿವಾರ ಸಂಜೆ ಉರ್ಮಿಳಾಗೆ ಇಡೀ ಮಹಿಳಾ ನಿಲಯದ ಮಹಿಳಾ ಸಿಬ್ಬಂದಿ ಸಂಭ್ರಮದಿಂದ ಹೆತ್ತ ಮಗಳಿಗೆ, ಅಕ್ಕರೆ ತಂಗಿಗೆ, ಪ್ರೀತಿಯ ಅಕ್ಕನಿಗೆ ಅರಿಸಿಣ ಹಚ್ಚಿ ಶಾಸ್ತೊಕ್ತವಾಗಿ ಮದುಮಗಳನ್ನಾಗಿ ಮಾಡಿ ಖುಷಿ ಪಟ್ಟಿದ್ದಾರೆ. 

ಅಧಿಕಾರಿಗಳೇ ಹೆತ್ತವರು: ಇಷ್ಟೆಲ್ಲಾ ಮದುವೆಗಳಿಗೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಪೊಲೀಸ್‌ ವರಿಷ್ಠಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರೇ ಹೆತ್ತವರು. ರಾಜ್ಯ ಮಹಿಳಾ ನಿಲಯದ ಅಧೀಕ್ಷಕರು ತಾಯಿ ಸ್ಥಾನದಲ್ಲಿ ನಿಂತು ಈ ಮದುವೆಗಳನ್ನು ಮಾಡಿದ್ದಾರೆ. ಇಡೀ ನಿಲಯದ ಸಿಬ್ಬಂದಿಯೇ ಬಿಗರಾಗುತ್ತಾರೆ.

ಮಹಿಳಾ ನಿಲಯದಲ್ಲಿರುವ ಇತರೆ ಯುವತಿಯರೇ ಮದುಮಗಳ ಅಕ್ಕ- ತಂಗಿಯರು. ಈ ಚೆಂದದ ಸರಕಾರಿ ಕುಟುಂಬದ ಮದುವೆಗೆ ಕಲಬುರಗಿ ನಾಗರಿಕರೆ ಬಂಧುಗಳು. ಮದುಮಗನ ಕಡೆಯಿಂದ ಬರುವ ಬೀಗರಿಗೆ ಮದುವೆ ಅಡುಗೆ ಊಟಕ್ಕಿರುತ್ತದೆ. ಇತರೆ ಎಲ್ಲ ಮದುವೆಗಳಂತೆ ಇಲ್ಲೂ ಸರಬರ, ಸಡಗರವಿರುತ್ತದೆ. ಇಂತದೊಂದು ಸಂತೋಷದ ಮಧ್ಯೆ ಉನ್ನತ ಅಧಿಕಾರಿಗಳು ಖುಲ್ಲಂ ಖುಲ್ಲಾ.. ಬೆರೆತರಂತೂ ಮದುವೆ ಭರ್ಜರಿಯಾಗಲಿದೆ. 

Advertisement

15ನೇ ಮದುವೆ: ಜೂ. 19ರಂದು ನಡೆಯುವ ಉರ್ಮಿಳಾ ಅವರ ಮದುವೆ 15ನೇಯದ್ದು. ಇದಕ್ಕೂ ಮುನ್ನ ಕಲಬುರಗಿ ರಾಜ್ಯ ಮಹಿಳಾ ನಿಲಯದ ಮಕ್ಕಳಾಗಿದ್ದ 14 ಜನರಿಗೆ ಕಂಕಣಭಾಗ್ಯ ಕಲ್ಪಿಸಿದೆ. 2008ರಲ್ಲಿ 18 ವರ್ಷದ ಲಲಿತಾ ಕಲಬುರಗಿಯ ಪ್ರಸನ್ನ ಅವರನ್ನು,

ಪ್ರೇಮಾ ಅವರು ಹುಮನಾಬಾದಿನ ಪುಟ್ಟರಾಜ ಶೀಲಮೂರ್ತಿ ಅವರನ್ನು, 2010ರಲ್ಲಿ 18 ವರ್ಷದ ಆಶಾ ಹಾಗೂ ವಿಜಯಪುರದ ವಿನಯ ಜೋಶಿ, 2011ರಲ್ಲಿ 19 ವರ್ಷದ ಗೀತಾ ವಿಜಯಪುರದ ಶ್ರೀಧರ ಜೋಶಿ, 21 ವರ್ಷದ ಕವಿತಾ ನಾರಾಯಣಪುರದ ಸುಭಾಸ ಕುಲಕರ್ಣಿ ಅವರನ್ನು,

2012ರಲ್ಲಿ 19 ವರ್ಷದ ಪ್ರತಿಮಾ ಬಾಗಲಕೋಟೆಯ ಪ್ರಸನ್ನ ಕಾತರಕಿ ಅವರನ್ನು, 2012ರಲ್ಲಿ 19 ವರ್ಷದ ಶಾರದಾ ಬಾಗಲಕೋಟೆಯ ವಾದಿರಾಜ ಗಿಂಡಿ ಅವರನ್ನು, 2013ರಲ್ಲಿ 23 ವರ್ಷದ ಸಾವಿತ್ರಿ ಸುರಪುರದ ಪ್ರಸನ್ನ ಕುಲಕರ್ಣಿ ಅವರನ್ನು, 2015ರಲ್ಲಿ 18 ವರ್ಷದ ವಿಜಯಲಕ್ಷ್ಮಿ ಜೇವರ್ಗಿಯ ದತ್ತುರಾವ ಕುಲಕರ್ಣಿ ಅವರನ್ನು,

2014ರಲ್ಲಿ ರಾಣಿ ಅವರನ್ನು ಬೆಂಗಳೂರಿನ ಶಂಕರ ಕುಲಕರ್ಣಿ, ಧಾನಮ್ಮ ಆಲಮೇಲದ ಗುರುರಾಜ ಅವರನ್ನು, 2015ರಲ್ಲಿ 25 ವರ್ಷದ ಜ್ಯೋತಿ ಕಲಬುರಗಿಯ ಗಿರೀಶಕುಮಾರ ಅವರನ್ನು 2016ರಲ್ಲಿ ಸಿದ್ದಮ್ಮಾ ಯಾದಗಿರಿಯ ಭೀಮಾಶಂಕರ ಅವರನ್ನು ಹಾಗೂ ಯಲ್ಲಮ್ಮಾ ಅವರು ವಿಜಯಪುರದ ದತ್ತಾತ್ರೇಯ ಅವರನ್ನು ವಿವಾಹ ಆಗಿದ್ದಾರೆ. 

* ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next