ಹುಬ್ಬಳ್ಳಿ: ಬಂಡವಾಳಶಾಹಿ ಶೋಷಕರ ವ್ಯವಸ್ಥೆಯನ್ನು ಪ್ರಜಾಪ್ರಭುತ್ವದ ಮುಖವಾಡದೊಳಗೆ ಹುದುಗಿರಿಸಲಾಗಿದೆ. ದುಡಿಯುವ ಜನರನ್ನು ಚುನಾವಣೆಗಳೆಂಬ ಭ್ರಮಾಲೋಕದಲ್ಲಿ ಮುಳುಗಿಸಲಾಗಿದ್ದು, ಇದರ ಬದಲಾವಣೆಗೆ ಐಕ್ಯ ಹೋರಾಟದ ಅಗತ್ಯವಿದೆ ಎಂದು ಹಿರಿಯ ಕಾರ್ಮಿಕ ಮುಖಂಡ ಡಾ| ಕೆ.ಎಸ್. ಶರ್ಮಾ ಹೇಳಿದರು.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್ (ಎಐಡಿವೈಒ) ಜಿಲ್ಲಾ ಸಮಿತಿಯಿಂದ ಡಾ| ಕೆ.ಎಸ್. ಶರ್ಮಾ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಆರ್ಥಿಕ ಕುಸಿತ-2019, ಉದ್ಯೋಗ ನಷ್ಟ-ದುಡಿಯುವ ಕೈಗೆ ಕೆಲಸ ಕೊಡಿ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷ ಕಳೆದರೂ ಅಪೌಷ್ಟಿಕತೆಯಿಂದ ಮೃತಪಡುವ 5 ವರ್ಷದೊಳಗಿನ ಮಕ್ಕಳ ಸಂಖ್ಯೆಯಲ್ಲಿ ವಿಶ್ವದಲ್ಲೇ ಭಾರತ ಮೊದಲ ಸ್ಥಾನದಲ್ಲಿದೆ. ಧರ್ಮನಿರಪೇಕ್ಷ ರಾಷ್ಟ್ರದಲ್ಲಿ ಧರ್ಮದ ಹೆಸರಿನಲ್ಲಿ ಗುಂಪು ಹತ್ಯೆಗಳಾಗುತ್ತಿವೆ. ಇದನ್ನು ಪ್ರಶ್ನಿಸಿದವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ ಎಂದರು.
ಎಐಡಿವೈಒ ಅಖೀಲ ಭಾರತ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ದೇಶದಲ್ಲಿನ ಇಂದಿನ ಆರ್ಥಿಕ ಹಿಂಜರಿತಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದ ನೋಟು ಅಮಾನ್ಯಿಕರಣ ಮತ್ತು ಜಿಎಸ್‌ಟಿ ಪ್ರಮುಖ ಕಾರಣಗಳು. ಆದರೆ ದೇಶದಲ್ಲಿ ಆರ್ಥಿಕ ಹಿಂಜರಿತವಿಲ್ಲ ಎಂದು ಕೇಂದ್ರದ ಮಂತ್ರಿಗಳು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.
ತೆರಿಗೆ ಹಣವನ್ನು ಜನ ಕಲ್ಯಾಣಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕು. ಜನರ ಬದುಕು ಕಟ್ಟಿಕೊಳ್ಳಲು, ಉದ್ಯೋಗ ಸೃಷ್ಟಿಗೆ ತೆರಿಗೆ ಹಣ ಬಳಕೆಯಾಗಬೇಕು. ಆರ್ಥಿಕ ಹಿಂಜರಿತದಿಂದ ಉದ್ಯೋಗ ಕಳೆದುಕೊಂಡು ದಿಕ್ಕೆಟ್ಟಿರುವ ಯುವಜನರನ್ನು ಸಂಕಷ್ಟದಿಂದ ಪಾರು ಮಾಡಬೇಕಾಗಿದೆಯೇ ಹೊರತು ದೊಡ್ಡ ಕಂಪನಿಗಳನ್ನಲ್ಲ ಎಂದರು.
ರಾಜ್ಯ ಅಧ್ಯಕ್ಷೆ ಎಂ.ಉಮಾದೇವಿ ಮಾತನಾಡಿ, ಸಣ್ಣ ಕೈಗಾರಿಕೆಗಳ ಪುನಶ್ಚೇತನದ ಮೂಲಕ ಉದ್ಯೋಗ ಭದ್ರತೆಗೆ ಸರ್ಕಾರ ಮುಂದಾಗಬೇಕು. ಇದಕ್ಕಾಗಿ ಎಐಡಿವೈಒ ರಾಜ್ಯವ್ಯಾಪಿ ನಿರುದ್ಯೋಗಿ ಯುವಕರನ್ನುಒಗ್ಗೂಡಿಸಿ ಹೋರಾಟವನ್ನು ಕಟ್ಟಿ ಬೆಳೆಸುತ್ತಿದೆ ಎಂದು ಹೇಳಿದರು.
ಭವಾನಿಶಂಕರ್ ಅಧ್ಯಕ್ಷತೆ ವಹಿಸಿದ್ದರು. ರಮೇಶ ಹೊಸಮನಿ, ಹನುಮೇಶ ಹುಡೇದ ವೇದಿಕೆಯಲ್ಲಿದ್ದರು.