Advertisement

 ಎರಡು ವಾರ ವಿಧಾನಮಂಡಲ ಅಧಿವೇಶನ; ಆರ್‌.ಅಶೋಕ್‌

09:06 PM Dec 10, 2021 | Team Udayavani |

ಬೆಂಗಳೂರು: ಬೆಳಗಾವಿ ಸುವರ್ಣಸೌಧದಲ್ಲಿ ಎರಡು ವಾರ ವಿಧಾನಮಂಡಲ ಅಧಿವೇಶನ ನಡೆಸಲಾಗುವುದು. ಅರ್ಧಕ್ಕೆ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಅಧಿವೇಶನ ನಡೆಸಲಿದ್ದೇವೆ. ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾವು ಸಿದ್ಧ, ಪ್ರತಿಪಕ್ಷ ಕಾಂಗ್ರೆಸ್‌ ಪ್ರತಿಭಟನೆ, ಧರಣಿ ಬಿಟ್ಟು ಚರ್ಚೆ ಮಾಡಲಿ ಎಂದು ಹೇಳಿದರು.

ನೆರೆ ಹಾನಿ ಪರಿಹಾರ ವಿಳಂಬದ ಬಗ್ಗೆ ಅ ಧಿವೇಶನದಲ್ಲಿ ಕಾಂಗ್ರೆಸ್‌ ಪ್ರತಿಭಟನೆ ಮಾಡುವುದಾಗಿ ಹೇಳಿದೆ. ವಾಸ್ತವಾಂಶ ತಿಳಿದುಕೊಂಡು ಅವರು ಸದನಕ್ಕೆ ಬರಲಿ ಎಂದು ತಿಳಿಸಿದರು.

ಪ್ರತಿಪಕ್ಷ ಸ್ಥಾನದಲ್ಲಿ ಕಾಂಗ್ರೆಸ್‌ ಇರುವುದರಿಂದ ಪ್ರತಿಭಟನೆ ನಡೆಸುತ್ತಾರೆ. ರಾಜ್ಯದಲ್ಲಿ ಕಡಿಮೆ ಸಮಯದಲ್ಲಿ 10.62 ಲಕ್ಷ ರೈತರಿಗೆ 681 ಕೋಟಿ ರೂ. ಬೆಳೆ ಪರಿಹಾರ ವಿತರಿಸಿರುವುದು ದಾಖಲೆಯಾಗಿದೆ. ಕೇವಲ 21 ದಿನದಲ್ಲಿ 551 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.

12 ಸ್ಥಾನ ಗೆಲುವು
ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 12 ಸ್ಥಾನ ಗೆಲ್ಲಲಿದ್ದು, ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಕಾಂಗ್ರೆಸ್‌, ಜೆಡಿಎಸ್‌ ಏನೇ ಕಸರತ್ತು ಮಾಡಿದರೂ ಅಂತಿಮವಾಗಿ ಗೆಲುವು ನಮ್ಮದೇ.ಜೆಡಿಎಸ್‌ನ ಹೆಚ್ಚಿನ ಮತಗಳು ಬಿಜೆಪಿಗೆ ಬರಲಿವೆ ಎಂದು ಹೇಳಿದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಎಲ್ಲ ಪಕ್ಷದವರ ಮತ ಕೇಳುವುದಾಗಿ ಕಾಂಗ್ರೆಸ್‌ ಹೇಳಿದೆ. ಹಾಗಾದರೆ ಚುನಾವಣೆಗೆ ಸ್ಪರ್ಧಿಸಿರುವವರು ಸರ್ವಪಕ್ಷಗಳ ನಾಯಕರೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ ಈ ಹೇಳಿಕೆ ಮೂಲಕ ಸೋಲು ಒಪ್ಪಿಕೊಂಡಿದೆ ಎಂದು ಟೀಕಿಸಿದರು.

ಇದನ್ನೂ ಓದಿ:ವಿಧಾನ ಪರಿಷತ್‌ ಚುನಾವಣೆ: ಶೇ.99.78 ಮತದಾನ

ಪರಿಷತ್‌ನಲ್ಲಿ ಈವರೆಗೆ ಬಿಜೆಪಿಗೆ ಬಹುವಿತರಲಿಲ್ಲ. ಈ ಚುನಾವಣೆಯಲ್ಲಿ ನಮಗೆ ಬಹುಮತ ಸಿಗಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾಜಿ ಸಿಎಂ ದಿವಂಗತ ಎಸ್‌.ನಿಜಲಿಂಗಪ್ಪ ಅವರ ಜನ್ಮದಿನದ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿರುವ ಎಸ್‌.ನಿಜಲಿಂಗಪ್ಪ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಎಸ್‌. ನಿಜಲಿಂಗಪ್ಪ ಅವರು ನಾಡು ಕಂಡ ಧೀಮಂತ ನಾಯಕರು. ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಇಂದಿಗೂ ಅವರ ಅನುಯಾಯಿಗಳಿದ್ದಾರೆ ಎಂದು ಹೇಳಿದರು.

ಮತಾಂತರ ನಿಷೇಧ ಕಾಯ್ದೆ ಅಧಿವೇಶನದಲ್ಲಿ ಮಂಡನೆ ಬಗ್ಗೆ ಚರ್ಚೆಗಳು ನಡೆದಿವೆ. ಪ್ರತಿಪಕ್ಷ ಕಾಂಗ್ರೆಸ್‌ ಇದಕ್ಕೆ ವಿರೋಧ ವ್ಯಕ್ತಪಡಿಸುವುದರಲ್ಲಿ ನಮಗೇನೂ ಅನುಮಾನವಿಲ್ಲ. ಏಕೆಂದರೆ ಅವರಿಗೆ ದೇಶದ ಬಗ್ಗೆ ಯಾವತ್ತೂ ಗೌರವವೂ ಇಲ್ಲ, ಪ್ರೀತಿಯೂ ಇಲ್ಲ. ಕೆಲವು ಲಿಂಗಾಯಿತರು ಸಹ ಮತಾಂತರ ಆಗಿದ್ದಾರೆ, ಬೋವಿ ಸಮಾಜದ ಸ್ವಾಮೀಜಿ ಕೂಡ ಧ್ವನಿ ಎತ್ತಿದ್ದಾರೆ. ಹಣದ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪ ಇದೆ. ಸರ್ಕಾರ ಎಲ್ಲವನ್ನೂ ಪರಾಮರ್ಶೆ ಮಾಡಿ ತೀರ್ಮಾನಿಸಲಿದೆ.
ಆರ್‌.ಅಶೋಕ್‌

Advertisement

Udayavani is now on Telegram. Click here to join our channel and stay updated with the latest news.

Next