ಬಳ್ಳಾರಿ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿ ವಿರೋಧಿಸಿ ಪ್ರತಿಭಟನೆ ಮತ್ತು ಮುಷ್ಕರದ ಪ್ರಯುಕ್ತ ಶಾಂತಿ ಸುವ್ಯವಸ್ಥೆ ಧಕ್ಕೆ ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ ಡಿ.
19ರಂದು ಬೆಳಗ್ಗೆ 9ರಿಂದ ಡಿ. 21ರಾತ್ರಿ 9ರವರೆಗೆ ನಿಷೇಧಾಜ್ಞೆ ವಿಧಿ ಸಿ ಜಿಲ್ಲಾದಂಡಾಧಿ ಕಾರಿ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಗುರುವಾರ ಆದೇಶ ಹೊರಡಿಸಿದ್ದಾರೆ. ಈ ಅವಧಿ ಯಲ್ಲಿ ಶಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿ, ಗದೆಗಳು, ಬಂದೂಕು, ಚಾಕು, ಕೋಲುಗಳು ಅಥವಾ ಲಾಟಿಗಳನ್ನು ಅಥವಾ ದೈಹಿಕ ಹಿಂಸೆಗಳನ್ನುಂಟು ಮಾಡುವ ಇತರೆ ಯಾವುದೇ ವಸ್ತುಗಳನ್ನು ಕೊಂಡೊಯ್ಯುವುದು, ಪಟಾಕಿ ಸಿಡಿಸುವುದು, ನ್ಪೋಟಕ ವಸ್ತುಗಳನ್ನು ತೆಗೆದುಕೊಂಡು ಹೊಗುವುದನ್ನು ನಿಷೇಧಿಸಲಾಗಿದೆ.
ಯಾವುದೇ ರೀತಿಯ ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ರಾಸ್ತಾರೋಕೋ, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿ ಸಲಾಗಿದೆ. ಕಲ್ಲುಗಳನ್ನು ಅಥವಾ ಇತರೇ ಕ್ಷಿಪಣಿಗಳನ್ನು ಎಸೆಯುವ ಅಥವಾ ವೇಗದಿಂದ ಒಗೆಯುವ ಸಾದನಗಳು ಅಥವಾ ಉಪಕರಣಗಳು ಹೊಯ್ಯುವಿಕೆಯನ್ನು ಶೇಖರಿಸುವುದನ್ನು ಮತ್ತು ತಯಾರಿಸುವುದನ್ನು ನಿಷೇಧಿಸಲಾಗಿದೆ. ವ್ಯಕ್ತಿಗಳ ಅಥವಾ ಅವರ ಶವಗಳ ಅಥವಾ ಆಕೃತಿಗಳ ಅಥವಾ ಪ್ರಕೃತಿಗಳ ಪ್ರದರ್ಶನ ಮಾಡುವುದು ನಿಷೇಧಿಸಲಾಗಿದೆ.
ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಬಾಧೆಯನ್ನುಂಟು ಮಾಡಬಹುದಾದ ಅಥವಾ ರಾಜ್ಯದ ಭದ್ರತೆಯನ್ನು ಕುಗ್ಗಿಸಬಹುದಾದ ಅಥವಾ ಅಪರಾಧವನ್ನು ಮಾಡಲು ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಮಾಡುವುದು, ಹಾಡುಗಳನ್ನಾಡುವುದು, ಸಂಗೀತವನ್ನು
ಸ್ತುತಿಸುವುದು, ಆವೇಶ ಭಾಷಣ ಮಾಡುವುದು, ಇಂಗಿತ ಸೂಚನೆಗಳ ಅಥವಾ ನಿರೂಪಣೆಗಳನ್ನು ಉಪಯೋಗ ಮಾಡುವುದು ಮತ್ತು ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿಚಿತ್ರಗಳನ್ನು ಅಥವಾ ಇನ್ನಿತರ ಯಾವುದೇ ವಸ್ತು, ಪದಾರ್ಥವನ್ನು ತಯಾರಿಸುವುದು, ಪ್ರದರ್ಶಿಸುವುದು, ಪ್ರಸಾರ ಮಾಡುವುದು ನಿಷೇಧಿಸಲಾಗಿದೆ ಎಂದವರು ತಿಳಿಸಿದ್ದಾರೆ.