ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಿಂದ ಪಾರು ಮಾಡಲು ತಾನು ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರಿಗೆ 76 ಲಕ್ಷ ರೂ ನೀಡಿರುವುದಾಗಿ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಲೋಕಾಯುಕ್ತರಿಗೆ ದೂರು ನೀಡಿದ್ದಾನೆ. ಇದರೊಂದಿಗೆ ಪ್ರಕರಣಕ್ಕೆ ಹೊಸ ತಿರುವು ದೊರೆತಂತಾಗಿದೆ.
ದೂರಿನೊಂದಿಗೆ 8.4 ನಿಮಿಷ ಅವಧಿಯ ಆಡಿಯೋದ ಪೆನ್ ಡ್ರೈವ್ ದಾಖಲೆಯಾಗಿ ನೀಡಿದ್ದಾರೆ. ಈ ಸಂಬಂದ ‘ಆರ್.ಡಿ. ಪಾಟೀಲ ಯುವ ಬ್ರಿಗೇಡ್’ ಹೆಸರಿನ ಫೇಸ್‌ಬುಕ್ ಪೇಜ್ ಮೂಲಕ ಪಾಟೀಲ್ ತಾನು ಮಾತನಾಡಿರುವ ಆಡಿಯೋ ಸೋಮವಾರ ಅಪ್ಲೋಡ್ ಮಾಡಲಾಗಿದೆ.
“ಶಂಕರಗೌಡ ಪಾಟೀಲ ಅವರು ಪ್ರಕರಣ ಮುಂದುವರೆಸದಿರಲು, ಅದರಿಂದ ಪಾರು ಮಾಡಲು ನನಗೆ 3 ಕೋಟಿ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ನನ್ನಿಂದ ಅಷ್ಟು ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ. ಬೇಕಿದ್ದರೆ 76 ಲಕ್ಷ ರೂ. ಹಣವನ್ನು ಕೊಡುತ್ತೇನೆ ಎಂದು ಹೇಳಿ ಬ್ಯಾಂಕ್ ಆಫ್ ಬರೋಡ ಶಾಖೆಯಿಂದ ಹಣ ಡ್ರಾ ಮಾಡಿಸಿಕೊಂಡು ನನ್ನ ಅಳಿಯ ಶ್ರೀಕಾಂತನ ಮೂಲಕ ಅವರಿಗೆ ತಲುಪಿಸಿದ್ದೇನೆ. ನಾನು ಜಾಮೀನು ಪಡೆದು ಹೊರ ಬಂದ ಬಳಿಕವೂ ಶಂಕರಗೌಡ ಹಾಗೂ ಅವರ ಅಧೀನ ಸಿಬ್ಬಂದಿಯು ಮನೆಗೆ ಬಂದು ಉಳಿದ ಹಣ ನೀಡಿವಂತೆ ಕಿರುಕುಳ ನೀಡಿದ್ದಾರೆ’ ಎಂದು ಫೇಸ್ ಬುಕ್ ವಿಡಿಯೋ ಮೂಲಕ ಆರೋಪ ಮಾಡಿರುವುದು ಈಗ ಇಡೀ ಪ್ರಕರಣದ ಕುರಿತು ಅನುಮಾನ ಮತ್ತು ಸಿಐಡಿ ತನಿಖೆ ಕುರಿತು ಶಂಕೆ ಉಂಟು ಮಾಡಿದೆ.
ಆರೋಪ ನಿರಾಕರಣೆ: ಈ ಎಲ್ಲ ಆರೋಪಗಳನ್ನು ಸಿಐಡಿ ಡಿವೈ ಎಸ್ಪಿ ಶಂಕರಗೌಡ ಪಾಟೀಲ ಅವರು ಅಲ್ಲಗಳೆದು ನಿರಾಕರಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಶಂಕರಗೌಡ, ‘ಆರ್.ಡಿ. ಪಾಟೀಲನೊಂದಿಗೆ ನಾನು ಮಾತನಾಡಿರುವುದು ಎನ್ನಲಾದ ಘಟನೆ ನಡೆದಿದ್ದು ಕಳೆದ ಜುಲೈನಲ್ಲಿ. ಈ ಆರೋಪದ ಬಗ್ಗೆ ಎಸಿಬಿಯವರೂ ತನಿಖೆ ನಡೆಸಿ ಇದರಲ್ಲಿ ಏನೂ ಹುರುಳಿಲ್ಲ ಎಂದು ಕೈಬಿಟ್ಟಿದ್ದಾರೆ. ತನಿಖಾಧಿಕಾರಿಗಳ ನೈತಿಕತೆಯನ್ನು ಕುಗ್ಗಿಸಲು ಆರ್.ಡಿ. ಪಾಟೀಲ ಹೂಡಿರುವ ತಂತ್ರ ಇದು. ನನಗೆ ಹಲವು ಬಾರಿ ತಮ್ಮ ಹಿಂಬಾಲಕರನ್ನು ಛೂಬಿಟ್ಟು ಹಲ್ಲೆ ಮಾಡಲೂ ಯತ್ನಿಸಿದ್ದ. ಇದೆಲ್ಲವನ್ನೂ ಎದುರಿಸಿ ಪ್ರಕರಣವನ್ನು ಒಂದು ಹಂತಕ್ಕೆ ತಂದಿರುವ ತೃಪ್ತಿ ನಮಗಿದೆ’ ಎಂದಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಕಾಂಗ್ರೆಸ್ ಗೆ ಕಾರ್ಯಕರ್ತರ ಕೊರತೆ ಇದೆ: ನಳಿನ್ ಕುಮಾರ್ ಕಟೀಲ್
ಆಡಿಯೊದಲ್ಲಿ ಏನಿದೆ? ಎಂಟು ನಿಮಿಷ ನಾಲ್ಕು ಸೆಕೆಂಡ್ ಅವಧಿಯ ವಿಡಿಯೊದಲ್ಲಿ ಆರ್. ಡಿ. ಪಾಟೀಲ ಮಾತು ಮಾತ್ರ ಸ್ಪಷ್ಟವಾಗಿ ಕೇಳಿಸುತ್ತದೆ. ಎದುರಿಗೆ ಮಾತನಾಡಿರುವ ವ್ಯಕ್ತಿಯ ಧ್ವನಿ ಅಸ್ಪಷ್ಟವಾಗಿದೆ. ಏನಾದರೂ ಮಾಡಿ, ನನಗೆ ಹೊರಗೆ ಹೋಗುವಂತೆ ಮಾಡಿ. ನನಗೆ ಪ್ರತಿ ದಿನವೂ ಮಹತ್ವದ ದಿನವಾಗಿದೆ. ನನಗೆ ಲಂಡನ್ ನಲ್ಲಿ ‘ಭಕ್ತ’ರೊಬ್ಬರು ಇದ್ದಾರೆ. ಅವರಿಂದ ಹಣದ ವ್ಯವಸ್ಥೆ ಮಾಡುತ್ತೇನೆ ಎಂದಿದ್ದಾನೆ.
ದೂರು ಬಂದಿಲ್ಲ: ದೂರಿನ ಕುರಿತು ಪ್ರತಿಕ್ರಿಯೆ ನೀಡಿದ ಕಲಬುರಗಿ ಲೋಕಾಯುಕ್ತ ಎಸ್.ಪಿ. ಎ.ಆರ್. ಕರ್ನೂಲ್, ‘ಆರ್.ಡಿ. ಪಾಟೀಲ ದೂರನ್ನು ಲೋಕಾಯುಕ್ತರಿಗೆ ಕಳುಹಿಸಿರುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.