Advertisement

Troubleshooter DK: ಕಾಂಗ್ರೆಸ್‌ ಪಾಲಿಗೆ ಟ್ರಬಲ್‌ ಶೂಟರ್‌

10:29 AM May 19, 2023 | Team Udayavani |

ಕಾಂಗ್ರೆಸ್‌ ಪಕ್ಷ ನಿಷ್ಠೆ, ಯಾವುದೇ ಬಿಕ್ಕಟ್ಟು ಎದುರಾದಾಗೆಲ್ಲ ಪಾರುಮಾಡುವ ತಂತ್ರಗಾರಿಕೆ, ತನ್ನನ್ನು ನಂಬಿ ಬಂದವರ ರಕ್ಷಣೆ, ಆಕ್ರಮಣಕಾರಿ ನಡೆ… ಹೀಗಾಗಿಯೇ  ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ಪಾಲಿಗೆ ಟ್ರಬಲ್‌ ಶೂಟರ್‌ ಎಂದೇ ಹೆಸರುವಾಸಿಯಾಗಿದ್ದಾರೆ.

  1. ಮಹಾರಾಷ್ಟ್ರ ಸರಕಾರ ಬಚಾವ್‌
Advertisement

2002ರಲ್ಲಿ ಮಹಾರಾಷ್ಟ್ರದಲ್ಲಿ ವಿಲಾಸ್‌ರಾವ್‌ ದೇಶ್‌ಮುಖ್‌ ಸಮ್ಮಿಶ್ರ ಸರಕಾರ ಎಸ್‌ಪಿಯೊಂದಿಗೆ ಸೆಣಸಾಟಕ್ಕಿಳಿದಾಗ ಸರಕಾರ ಅಲ್ಪಮತದ ಅಪಾಯಕ್ಕೆ ಸಿಕ್ಕಿಕೊಂಡಿತ್ತು. ಆಗ ಎನ್‌ಸಿಪಿ ಮತ್ತು ವಿಪಕ್ಷಗಳು ಕಾಂಗ್ರೆಸ್‌ ಶಾಸಕರನ್ನು ಖರೀದಿಸುವ ಕುದುರೆ ವ್ಯಾಪಾರಕ್ಕೆ ಇಳಿದಿದ್ದವು. ತತ್‌ಕ್ಷಣ ಕಾಂಗ್ರೆಸ್‌ ಹೈಕಮಾಂಡಿನ ಆದೇಶದಂತೆ ಕಾರ್ಯಪ್ರವೃತ್ತರಾದ ಡಿ.ಕೆ. ಶಿವಕುಮಾರ್‌ ಅವರು ಮಹಾರಾಷ್ಟ್ರ ಕಾಂಗ್ರೆಸ್‌ ಶಾಸಕರನ್ನು ಮುಂಬಯಿಯಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಸುಮಾರು 10-12 ದಿನಗಳ ಕಾಲ ಬೆಂಗಳೂರಿನ ವೈಭವೋಪೇತ ರೆಸಾರ್ಟ್‌ ಒಂದರಲ್ಲಿ ಇರಿಸಿಕೊಂಡು ರಕ್ಷಣೆ ನೀಡಿದರು.  ಎಲ್ಲವೂ ತಿಳಿಯಾದ ಮೇಲೆ ಶಾಸಕರನ್ನು ವಾಪಸ್‌ ಕಳುಹಿಸಲಾಯಿತು.

  1. ಅಹ್ಮದ್‌ ಪಟೇಲ್‌ ರಾಜ್ಯಸಭಾ ಸ್ಥಾನ ಗಟ್ಟಿ

2017ರಲ್ಲಿ ಗುಜರಾತ್‌ನಲ್ಲಿಯೂ ರಾಜಕೀಯ ಸಂಘರ್ಷ ಎದುರಾಗಿತ್ತು. ಗಾಂಧೀ ಕುಟುಂಬದ ಅತ್ಯಂತ ಆಪ್ತ ಎಂದೇ ಹೆಸರುವಾಸಿಯಾಗಿದ್ದ ಅಹ್ಮದ್‌ ಪಟೇಲ್‌ ಅವರು ರಾಜ್ಯಸಭೆಗೆ ಪುನಾರಾಯ್ಕೆಯಾಗುವುದು ತೀರಾ ಕಷ್ಟವಾಗಿತ್ತು. ಆಗ ಬಿಜೆಪಿ ಕಾಂಗ್ರೆಸ್‌ ಶಾಸಕರನ್ನು ಆಪರೇಷನ್‌ ಮಾಡಲು ಮುಂದಾಗಿದ್ದು, ಕೆಲವರಿಗೆ ಗಾಳ ಹಾಕಿತ್ತು. ಈ ಸಂದರ್ಭದಲ್ಲಿ ಗುಜರಾತ್‌ನ ಕಾಂಗ್ರೆಸ್‌ ಶಾಸಕರೆಲ್ಲರೂ ಬೆಂಗಳೂರಿಗೆ ಬಂದಿದ್ದರು. ಆಗ ಡಿಕೆಶಿ ಇವರನ್ನು ರೆಸಾರ್ಟ್‌ವೊಂದರಲ್ಲಿ ಇಟ್ಟು ಕಾಪಾಡಿದ್ದರು.

ಆದರೆ ಆಗ ಆದಾಯ ತೆರಿಗೆ ಇಲಾಖೆ ಡಿ.ಕೆ.ಶಿವಕುಮಾರ್‌ ಅವರನ್ನು ಗುರಿಯಾಗಿಸಿಕೊಂಡು ಸತತ ಮೂರು ದಿನಗಳ ಕಾಲ ದಾಳಿ ನಡೆಸಿತ್ತು. ಅವರ ನಿವಾಸ, ಗುಜರಾತ್‌ ಶಾಸಕರಿದ್ದ ಈಗಲ್‌ಟನ್‌ ರೆಸಾರ್ಟ್‌ ಸೇರಿದಂತೆ ಅವರ ಕಚೇರಿ, ಸಂಬಂಧಿಕರ ನಿವಾಸಗಳ ಮೇಲೂ ದಾಳಿ ನಡೆದಿತ್ತು. ಆಗಲೂ ಡಿಕೆಶಿ ಹೆದರಲಿಲ್ಲ. ಪಕ್ಷದ ಪರ ಗಟ್ಟಿಯಾಗಿ ನಿಂತಿದ್ದರು.

  1. ಡಿಕೆಶಿ ವಿರುದ್ಧ ದೇವೇಗೌಡರಿಗೆ ಪ್ರಯಾಸದ ಜಯ

1985ರ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಅಂದಿನ ಪ್ರಭಾವಿ ಜನತಾದಳ ಮುಖಂಡರಾದ ಎಚ್‌.ಡಿ. ದೇವೇಗೌಡ ಅವರ ವಿರುದ್ಧ ಕಾಂಗ್ರೆಸ್‌ ಪಕ್ಷದಲ್ಲಿ ಉತ್ತಮ ಅಭ್ಯರ್ಥಿಯೇ ಸಿಕ್ಕಿರಲಿಲ್ಲ. ಆಗ ರಾಜಕಾರಣದ ಪರಿಚಯವೇ ಇಲ್ಲದಿದ್ದ ಡಿ.ಕೆ. ಶಿವಕುಮಾರ್‌ ಅವರನ್ನು ದೇವೇಗೌಡ ಅವರ ವಿರುದ್ದ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಯಿತು. ಈ ಚುನಾವಣೆಯಲ್ಲಿ ಶಿವಕುಮಾರ್‌ ಸಾಕಷ್ಟು ಪ್ರತಿರೋಧ ನೀಡಿದ್ದರಿಂದ, ದೇವೇಗೌಡರು ಪ್ರಯಾಸದಿಂದ ಗೆದ್ದರು.

  1. ಬಂಗಾರಪ್ಪ ಆಯ್ಕೆಯಲ್ಲಿ ಪ್ರಮುಖ ಪಾತ್ರ
Advertisement

1991ರಲ್ಲಿ ವೀರೇಂದ್ರ ಪಾಟೀಲ್‌ ಅವರು ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಬೇಕಾಗಿ ಬಂದಾಗ ಅವರ ಉತ್ತರಾಧಿಕಾರಿಯನ್ನಾಗಿ ಸಾರೆಕೊಪ್ಪ ಬಂಗಾರಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾಗುವಂತೆ ಮಾಡುವಲ್ಲಿ ಡಿ.ಕೆ. ಶಿವಕುಮಾರ್‌ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೆ ಪ್ರತಿಯಾಗಿ ಬಂಗಾರಪ್ಪ ಅವರು, ಡಿಕೆಶಿಗೆ ಬಂಧೀಖಾನೆ ಸಚಿವ ಸ್ಥಾನ ನೀಡಿದ್ದರು.

  1. ಗೌಡರನ್ನೇ ಸೋಲಿಸಿದ್ದ ಡಿಕೆಶಿ

ಕನಕಪುರ ಲೋಕಸಭೆ ಕ್ಷೇತ್ರದಲ್ಲಿ ದೇವೇಗೌಡರನ್ನು ಸೋಲಿಸುವುದು ಅಸಾಧ್ಯವಾಗಿತ್ತು. ಆದರೆ 2006ರಲ್ಲಿ ರಾಜಕೀಯವಾಗಿ ಪರಿಚಯವೇ ಇಲ್ಲದಿದ್ದ ತೇಜಸ್ವಿನಿ ಅವರನ್ನು ದೇವೇಗೌಡರ ವಿರುದ್ಧ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದರು.

  1. ಕೃಷ್ಣ ಅವರಿಗೆ ಬೆನ್ನೆಲುಬು

1999ರಲ್ಲಿ ಎಸ್‌.ಎಂ. ಕೃಷ್ಣ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಗೊಂಡಾಗ ಡಿ.ಕೆ. ಶಿವಕುಮಾರ್‌ ಅವರ ಹಿಂದೆ ಬೆನ್ನೆಲುಬಾಗಿ ನಿಂತಿದ್ದರು. ಎಸ್‌.ಎಂ. ಕೃಷ್ಣ ಚುನಾವಣ ಪೂರ್ವದಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಚುನಾವಣ ಸಮರ ಆರಂಭಿಸಿದಾಗ, ಈ ಐತಿಹಾಸಿಕ ಯಾತ್ರೆಯನ್ನು ಆಯೋಜಿಸಿದವರು ಡಿ.ಕೆ. ಶಿವಕುಮಾರ್‌, ಇದರಿಂದಲೇ ಕಾಂಗ್ರೆಸ್‌ ಪಕ್ಷ 132 ಸ್ಥಾನಗಳನ್ನು ಗಳಿಸಿ ಸ್ವಂತ ಬಲದ ಮೇಲೆ ಸರಕಾರವನ್ನು ರಚಿಸುವಂತಾಯಿತು. ಹಾಗೆಯೇ ಸಾತನೂರಿನಲ್ಲಿ ಸ್ವತಃ ಎಚ್‌.ಡಿ.ಕುಮಾರಸ್ವಾಮಿ ಅವರೇ ಜನತಾದಳದಿಂದ ನಿಂತಿದ್ದರು. ಆದರೆ ಡಿ.ಕೆ.ಶಿವಕುಮಾರ್‌ ಇವರನ್ನೂ ಸೋಲಿಸಿದ್ದರು. ಬಳಿಕ ಕೃಷ್ಣ ಸಂಪುಟದಲ್ಲಿ ಸಹಕಾರ ಮತ್ತು ನಗರಾಭಿವೃದ್ಧಿ ಖಾತೆ ನೀಡಲಾಗಿತ್ತು.

  1. ಮೈತ್ರಿ ಸರಕಾರದ ರಕ್ಷಕ

ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಸೇರಿ 2018ರಲ್ಲಿ ಕಾಂಗ್ರೆಸ್‌ ಸರಕಾರ ರಚಿಸಿತ್ತು. ಈ ಸರಕಾರವನ್ನು ಉರುಳಿಸುವ ಹಲವಾರು ಪ್ರಯತ್ನಗಳಿಗೆ ಡಿ.ಕೆ.ಶಿವಕುಮಾರ್‌ ರಕ್ಷಕರಾಗಿದ್ದರು. ಜತೆಗೆ ಬಳ್ಳಾರಿ ಲೋಕಸಭೆ ಕ್ಷೇತ್ರ ಕುಂದಗೋಳ ವಿಧಾನಸಭಾ ಕ್ಷೇತ್ರದ ಗೆಲುವಿನಲ್ಲಿ ಡಿ.ಕೆ. ಶಿವಕುಮಾರ್‌ ಅವರ ಕೊಡುಗೆ ಗಮನಾರ್ಹ. ಅಷ್ಟೇ ಅಲ್ಲದೇ ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ಮುಂಬಯಿ ಹೊಟೇಲ್‌ಗೆ ಹೋದಾಗ ಅಲ್ಲಿಗೆ ಹೋಗಿ ಅವರನ್ನು ವಾಪಸ್‌ ಕರೆತರಲು ಪ್ರಯತ್ನಿಸಿದ್ದರು. ಹೊಟೇಲ್‌ ಮುಂದೆ ಮಳೆಯಲ್ಲೇ ನಿಂತಿದ್ದು ದೇಶಾದ್ಯಂತ ಚರ್ಚೆಯಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next