ಚಾಮರಾಜನಗರ: ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗಿರಿಜನ ಮಹಿಳೆಯೋರ್ವರು ತ್ರಿವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶದ ಕೆ.ಗುಡಿ ಸಮೀಪದ ಕನ್ನೇರಿ ಕಾಲೋನಿಯ ಬೂತಾಣಿ ಪೋಡಿನ ನಿವಾಸಿ ಕೂಲಿ ಕಾರ್ಮಿಕ ಸೋಲಿಗ ಸಮುದಾಯದ ಜಡೆಯ ಎಂಬಾತನ ಪತ್ನಿ ಬಸಮ್ಮಣ್ಣಿ (22) ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದವರು. ಸೋಮವಾರ ಮಧ್ಯಾಹ್ನ 12.30ಕ್ಕೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಯಿತು. ಮೂರು ಹೆಣ್ಣು ಶಿಶುಗಳನ್ನು ಮಕ್ಕಳ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ತಾಯಿ ಮತ್ತು ಮಕ್ಕಳು ಆರೋಗ್ಯದಿಂದಿದ್ದಾರೆ.
ಬಸಮ್ಮಣ್ಣಿಗೆ ಮೂರು ವರ್ಷದ ಹಿಂದೆ ಜಡೆಯ ಅವರ ಜೊತೆ ವಿವಾಹವಾಗಿತ್ತು. ಮೊದಲ ಮಗು (ಗಂಡು) ಹೆರಿಗೆ ಸಂದರ್ಭದಲ್ಲಿ ಮೃತಪಟ್ಟಿತ್ತು. ಎರಡನೇ ಬಾರಿ ಗರ್ಭ ಧರಿಸಿದ್ದ ಬಸಮ್ಮಣ್ಣಿ ಅವರಿಗೆ ಸ್ಕ್ಯಾನಿಂಗ್ ಸಂದರ್ಭದಲ್ಲಿ ತ್ರಿವಳಿ ಮಕ್ಕಳಿರುವುದು ಪತ್ತೆಯಾಗಿತ್ತು. ಹೀಗಾಗಿ 8.5 ತಿಂಗಳ ಗರ್ಭಿಣಿಯಾಗಿದ್ದ ಬಸಮ್ಮಣ್ಣಿ ಅವರನ್ನು 15 ದಿನಗಳ ಹಿಂದೆಯೇ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿತ್ತು.
ಪ್ರಸೂತಿ ತಜ್ಞೆ ಡಾ. ಭಾರತಿ, ಮಕ್ಕಳ ತಜ್ಞೆ ಡಾ. ಲಕ್ಷ್ಮಿ, ಅರಿವಳಿಕೆ ತಜ್ಞ ಡಾ. ಸಮರ್ಥ್ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಸಮ್ಮಣ್ಣಿಯ ತಂದೆ ರಮೇಶ ಉದಯವಾಣಿ ಜೊತೆ ಮಾತನಾಡಿ, ತಮ್ಮ ಅಳಿಯ ಜಡೆಯ ಕೂಲಿ ಕೆಲಸ ಮಾಡುತ್ತಿದ್ದಾರೆ. ನಾವು ಕಡು ಬಡವರಾಗಿದ್ದು, ತಮ್ಮ ಮಗಳನ್ನು 15 ದಿನಗಳ ಹಿಂದೆಯೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೆವು. ಇದುವರೆಗೂ ಔಷಧಿ, ಆಹಾರ ಇತ್ಯಾದಿಗಳಿಗೆ 20 ಸಾವಿರ ರೂ. ಖರ್ಚಾಗಿದೆ. ಈಗ ತ್ರಿವಳಿ ಮಕ್ಕಳು ಜನಿಸಿದ್ದಾರೆ. ಬಡವರಾದ ನಾವು ಪಾಲನೆ ಪೋಷಣೆ ಮಾಡುವುದು ಬಹಳ ಕಷ್ಟವಾಗಿದೆ. ಸರ್ಕಾರ ಮತ್ತು ಸಹೃದಯರು ಚಿಕಿತ್ಸೆ ನೆರವು ನೀಡಬೇಕು ಎಂದು ಮನವಿ ಮಾಡಿದರು.