ನಾನು ಮತ್ತು ನನ್ನ ಗೆಳೆಯರು ಬೇಸಿಗೆ ರಜೆಯಲ್ಲಿ ಟ್ರಕ್ಕಿಂಗ್ ಹೋಗಬೇಕೆಂದುಕೊಂಡೆವು.ಒಂದೇ ದಿನದಲ್ಲಿ ಹೋಗಿ ಬರುವಂತಹ ಸ್ಥಳವಾಗಿರಬೇಕೆಂದು ಹೇಳಿದಾಗ ನರಹರಿ ಪರ್ವತ, ಗಡಾಯಿ ಕಲ್ಲು ಮುಂತಾದ ಟ್ರಕ್ಕಿಂಗ್ ಸ್ಥಳಗಳ ಹೆಸರುಗಳು ಒಂದೊಂದು ಅನಿಸಿಕೆಯಂತೆ ಬಂದು ಕೊನೆಗೆ ಕಾರಿಂಜೇಶ್ವರಕ್ಕೆ ಹೋಗುವುದೆಂದು ಎಲ್ಲರೂ ಸೇರಿ ನಿರ್ಧರಿಸಿಯೇ ಬಿಟ್ಟೆವು. ನಾವೆಲ್ಲ ಒಂದೇ ವಯಸ್ಸಿನ ಗೆಳೆಯರಾದ್ರೂ ಆಸಕ್ತಿಯ ವಿಚಾರ, ಮನಸ್ಥಿತಿ ಬೇರೆಯೇ ಆಗಿರುತ್ತದೆ. ಅಂತೂ ಕಾರಿಂಜಕ್ಕೆ ಹೋದೆವು. ಹೋಗುವ ಮುನ್ನವೇ ಕೇಳಿ ತಿಳಿದಿದ್ದೆವು- ಅನೇಕ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು ಎಂದು. ಆದರೆ, ನಾನೂ ಹಠವಾದಿ. ಗೆಳೆಯರು, “ಅಷ್ಟು ಮೆಟ್ಟಿಲುಗಳನ್ನು ನಿನ್ನಿಂದ ಹತ್ತಲು ಸಾಧ್ಯವಿಲ್ಲ’ ಅಂತ ಕಾಲೆಳೆಯುವುದಕ್ಕೆ ಶುರು ಮಾಡಿದರು. ಆದರೆ, ನನ್ನ ಸ್ವಭಾವದಂತೆ ಆತ ಹಾಕಿದ ಸವಾಲು ಸ್ವೀಕರಿಸಿ, ನಾನು ಪ್ರತಿ ಸವಾಲು ಹಾಕಿ ಬೆಟ್ಟ ಹತ್ತಲು ಶುರುಮಾಡಿದೆ. ನಾನು ಹಾಕಿದ ಸವಾಲು ಸ್ವೀಕರಿಸಿ ಗೆಳೆಯ ಮೆಟ್ಟಿಲುಗಳನ್ನು ಲೆಕ್ಕ ಹಾಕುತ್ತ ಹತ್ತತೊಡಗಿದನು. ಗೆಳತಿಯರ ಜೊತೆಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದೆವು. ಇಂತಹ ಸುಂದರವಾದ ಪ್ರಕೃತಿಯ ಮಡಿಲಲ್ಲಿ ಯಾರು ತಾನೇ ಸಂಭ್ರಮಿಸದಿರಲು ಸಾಧ್ಯ? ಅಲ್ಲಿನ ಚಿತ್ರಣ ಹೇಗಿದೆ ಎಂದರೆ, ಎಂತಹ ಕಠೊರ ಹೃದಯಿಗಳಾದರೂ ಇಲ್ಲಿನ ಸೌಂದರ್ಯಕ್ಕೆ ಮನ ಸೋಲಲೇಬೇಕು.
ಬೆಟ್ಟದ ಮೇಲೆ ಇನ್ನೊಂದು ಬೆಟ್ಟವಿದ್ದು , ಪ್ರಕೃತಿಪ್ರಿಯರಿಗೆ ರಸದೌತಣ ನೀಡುವ, ಹೃದಯಕ್ಕೆ ಮುಟ್ಟುವಂತಹ ಚೆಲುವಿನ ಕಾರಿಂಜೇಶ್ವರ ಮನದ ಸ್ವರ್ಗವಾಗುವುದರಲ್ಲಿ ಅನುಮಾನವೇ ಇಲ್ಲ. ಇದೊಂದು ಕೇವಲ ಪುಟ್ಟ ದೇವಸ್ಥಾನವಿರುವ ಸ್ಥಳವಾಗಿ ಮೇಲ್ನೋಟಕ್ಕೆ ಕಂಡರೂ ಇಲ್ಲಿನ ಚರಿತ್ರೆ, ಕಥೆಗಳು, ವಾಡಿಕೆ ಮಾತುಗಳು ನಿಜಕ್ಕೂ ರೋಚಕವಾಗುವಂತಹ ರೋಮಾಂಚನ. ಇಡೀ ಕ್ಷೇತ್ರದ ಚಿತ್ರಣವೇ ಅದ್ಭುತ. ಬೆಟ್ಟದ ಆರಂಭದ ಬುಡದಲ್ಲಿ ಗದೆಯ ಆಕಾರದಲ್ಲಿ ಕಂಡುಬರುವಂಥ ಗದಾತೀರ್ಥವೆಂಬ ವಿಶಾಲವಾದ ತಿಳಿನೀರ ಕೊಳ ಇದೆ. ಇದು ಸುಮಾರು 237 ಮೀ. ಉದ್ದ, 55 ಮೀ. ಅಗಲ, 7 ಮೀ. ಆಳವಿದೆಯಂತೆ. ಫೊಟೊ ತೆಗೆಯುವ ಉದ್ದೇಶದಿಂದ ಬರುವವರಿಗಂತೂ ಇದು ಹಬ್ಬ . ಅದ್ಭುತವಾದ ಸೀನ್‌ಗಳು. ಬೃಹತ್ತಾದ ಕಲು, ವಿಶಾಲವಾದ ಕೆರೆಯ ನೀರು, ಹಸಿರ ಸಿರಿಯ ಸೊಬಗಿನ ವಾತಾವರಣ ಉತ್ಸಾಹ ಚಿಲುಮೆಯ ಚೈತನ್ಯವನ್ನು ಹರಿಸುತ್ತದೆ. ಬೃಹತ್ ಬಂಡೆಯನ್ನೇ ಕೊರೆದು ಕೆತ್ತಿಸಿ ಮಾಡಿದ ನೂರಾರು ಮೆಟ್ಟಿಲುಗಳನ್ನು ಏರುತ್ತ¤ ಹೋದಂತೆ ಮೊದಲಿಗೆ ಗಣಪತಿ ಗುಡಿ ನಂತರ ಸುಮಾರು ಮೆಟ್ಟಿಲುಗಳನ್ನು ಕ್ರಮಿಸಿದಾಗ ಪಾರ್ವತಿದೇವಿಯ ಗುಡಿ ಸಿಗುತ್ತದೆ. ಪ್ರತಿಯೊಂದು ಮೆಟ್ಟಿಲುಗಳಲ್ಲೂ ಕೆತ್ತಿದ ಬರಹಗಳು ವಿಶೇಷವಾಗಿ ಗಮನ ಸೆಳೆದವು. ಅದನ್ನು ಓದಲು ಪಟ್ಟ ಪಾಡು ಅಬ್ಟಾ! ಪ್ರತಿ ಹಂತವನ್ನೇರುವಾಗಲೂ ಮಂಗಗಳು ನಮ್ಮನ್ನು ಸ್ವಾಗತಿಸಲು ಸಜ್ಜಾಗಿ ನಿಂತಂತೆ ಇರುವುದನ್ನು ಕಂಡು ಅವುಗಳನ್ನು ಛೇಡಿಸುತ್ತ ಅವು ಎದುರೆದುರು ಎದುರಾಳಿಗಳಂತೆ ಬಂದಾಗ ಭಯಪಟ್ಟ ಪಾಡು ಇನ್ನೂ ಮನದಲ್ಲಿ ಹಸಿರಾಗಿದೆ. ಪಾರ್ವತಿದೇವಿಯ ಗುಡಿಯ ಮುಂದೆ 142 ಮೆಟ್ಟಿಲುಗಳನ್ನೇರಿದಾಗ ಉಕ್ಕುಡದ ಬಾಗಿಲು ಎಂಬ ಶಿಲಾದ್ವಾರ ಸಿಗುತ್ತದೆ. ಆಗ ನೆನಪಾದದ್ದು ನನಗೆ ತರಗತಿಯಲ್ಲಿ ಇತಿಹಾಸದ ಅಧ್ಯಾಪಕರೊಬ್ಬರು ಪಾಠಮಾಡುತ್ತಿರುವಾಗ ಮೊದಲು ಕಾವಲು ಕಾಯುತ್ತಿದ್ದಂಥ ಸ್ಥಳವನ್ನು ಉಕ್ಕುಡ ಅಂತ ಕರೆಯುತ್ತಿದ್ದರಂತೆ ಎಂದು ಹೇಳಿದ್ದು. ಆಗ ನನಗೆ ಮನಸ್ಸಿಗೆ ಈ ಕ್ಷೇತ್ರದ ಉಕ್ಕುಡದ ಬಾಗಿಲಿನಲ್ಲೂ ಹಿಂದೆ ಈ ಪ್ರದೇಶವನ್ನು ಕಾವಲುಗಾರರು ಕಾವಲಿರುತ್ತಿದ್ದ ಜಾಗ ಆಗಿರಬಹುದೆಂದು ಅನ್ನಿಸಿತು. ಅಲ್ಲಿಂದ ಮುಂದೆ ಮೆಟ್ಟಿಲುಗಳನ್ನು ಏರಿದಾಗ ಕಾರಿಂಜೇಶ್ವರ ದೇವಾಲಯ. ಅದು ರುದ್ರನ ದೇವಾಲಯ.
ಪ್ರಕೃತಿಯು ಹಸಿರು ಸೀರೆಯುಟ್ಟು ನೈಜವಾಗಿ ಮೆರೆಯುತ್ತಿದ್ದು ದಿಗಂತದಂಚಿನಲ್ಲಿ ನಿಂತಂತೆ ಈ ಗುಡಿಯ ನೋಟ ಆಕರ್ಷಕವಾಗಿ ಭಾಸವಾಗುತ್ತದೆ. ಈ ಕ್ಷೇತ್ರದ ಮಹಿಮೆ ಸಾರುವ ಇತಿಹಾಸದ ಕಥೆಗಳು ಅನೇಕ. ಇದನ್ನು ಕೃತಯುಗದಲ್ಲಿ ಕಾದ್ರಗಿರಿ ಎಂದು, ಮುಂದೆ ತ್ರೇತಾಯುಗದಲ್ಲಿ “ಗಜೇಂದ್ರಗಿರಿ’, ದ್ವಾಪರದಲ್ಲಿ “ಭೀಮಶೈಲ’ ಅಂತೆಲ್ಲ ಕರೆಯುತ್ತಿದ್ದರಂತೆ. ಮಹಾಭಾರತ, ರಾಮಾಯಣದ ಕಾಲದಲ್ಲಿದ್ದಂತಹುದು ಎಂಬುದು ಇದರ ಕಥೆ ತಿಳಿದಾಗ ಅರಿವಾಗುತ್ತದೆ. ಇಲ್ಲಿ ಉಂಗುಷ್ಟತೀರ್ಥ, ಜಾನುತೀರ್ಥಗಳೆಂಬ ತೀರ್ಥಕೆರೆಗಳನ್ನು ನೋಡಬಹುದು. ಇದರ ವಿಶೇಷ ಏನಪ್ಪಾ ಅಂದರೆ ಇಲ್ಲಿ ವರ್ಷಪೂರ್ತಿ ನೀರು ಬರುತ್ತದೆ. ದೇವರಗುಡಿಯ ಹತ್ತಿರ ಪಾಂಡವರಲ್ಲಿ ಅರ್ಜುನ ನಿಮಿರ್ಸಿದಂಥ ಹಂದಿಕೆರೆ ಇದ್ದು, ಈ ಕೆರೆ ಮತ್ತು ಬೆಟ್ಟದ ಬುಡದಲ್ಲಿರೋ ಗದಾತೀರ್ಥಕೆರೆ ಪಾಂಡವರ ಭೀಮಸೇನ ನಿರ್ಮಿಸಿದನೆಂಬ ಪ್ರತೀತಿ ಇದೆ.
ಇನ್ನೊಂದು ನನ್ನ ಗಮನ ಸೆಳೆದ ಅಂಶ ಅಂದರೆ ಪ್ರಮಾಣಕಲ್ಲು. ನಾವು ಈ ಕ್ಷೇತ್ರಕ್ಕೆ ಭೇಟಿ ನೀಡೋ ಮೊದಲು ನಮ್ಮನ್ನು ಇಲ್ಲಿಗೆ ಬರಲು ಪ್ರೇರೇಪಿಸಿದ ಅಂಶವೇ ಇದು. ಕುತೂಹಲಕಾರಿಯಾದ ಈ ಪ್ರಮಾಣಕಲ್ಲಿನ ಚರಿತ್ರೆ ಕೇಳಿ ಒಮ್ಮೆ ದಂಗುಬಡಿದ್ದದ್ದೇನೋ ನಿಜ. ಇದು ಸೀತಾಮಾತೆ ಸತ್ಯಪ್ರಮಾಣ ಮಾಡಿದ ಕಲ್ಲಂತೆ. ಇಲ್ಲಿ ಒಂದು ಕಲ್ಲಿನ ತುದಿಯಿಂದ ಸುಮಾರು ಅಂತರ ಬಿಟ್ಟು ಇರುವ ಬಂಡೆಯ ಇನ್ನೊಂದು ತುದಿಗೆ ಹಾರಿ ಸತ್ಯ ಪ್ರಮಾಣ ಮಾಡಿದರಂತೆ. ಇಲ್ಲಿ ಸತ್ಯಪ್ರಮಾಣವನ್ನು ಹಿಂದೆ ಹೀಗೆ ಮಾಡಿಸುತ್ತಿದ್ದರಂತೆ. ಸತ್ಯ ಹೇಳುವ ವ್ಯಕ್ತಿಗೆ ಆ ಇನ್ನೊಂದು ತುದಿಯ ಕಲ್ಲು ಹತ್ತಿರವಿದ್ದಂತೆ ಕಂಡು ಆತ ಸುಲಭವಾಗಿ ಆಚೆ ತುದಿಗೆ ಹಾರುತ್ತಿದ್ದನಂತೆ. ಅದೇ ರೀತಿ ಸುಳ್ಳು ಹೇಳಿ ಹಾರಿದರೆ ಆತನಿಗೆ ಆ ಇನ್ನೊಂದು ತುದಿ ತುಂಬಾ ದೂರವಿದ್ದಂತೆ ಭಾಸವಾಗಿ ಆತ ಕೆಳಗಿನ ಪ್ರಪಾತಕ್ಕೆ ಬಿದ್ದು ಸಾಯುತ್ತಿದ್ದರಂತೆ. ಇದೇ ನಮ್ಮನ್ನು ಇಲ್ಲಿಗೆ ಬರಲು ಪ್ರೇರೇಪಿಸಿತಾದರೂ ಇಲ್ಲಿನ ಕಥಾಹಂದರಕ್ಕೂ ನೈಸರ್ಗಿಕ ಸೊಬಗಿಗೆ ಸೋಲದವರೇ ಇಲ್ಲ. ಇಲ್ಲಿಯ ಇನ್ನೊಂದು ವಿಶೇಷ ಅಂದರೆ ಕಪಿಗಳ ಸೈನ್ಯ. ನಮ್ಮಂತೆ ಚೇಷ್ಟೆ ಮಾಡಿಕೊಂಡು ಬರುವಾಗ ನಮ್ಮ ಸ್ನೇಹಿತರಂತೆ ಭಾಸವಾದವು. ನಾವು ವಾಪಸು ಮರಳುವ ಹೊತ್ತಿಗೆ ಅವುಗಳ ಸೈನ್ಯವೇ ನಮ್ಮ ಸ್ನೇಹಿತರ ಬಳಗಕ್ಕಿಂತ ಬಲವಾಗಿದೆ ಅನ್ನಿಸಿತು.
ಅಂತೂ ನಾನು ಮೊದಲೇ ಹೇಳಿದಂತೆ ಸ್ವೀಕರಿಸಿದ ಸವಾಲಿನಂತೆ ಗೆಳೆಯನನ್ನೇ ಸೋಲಿಸಿ ಗೆದ್ದುಬಿಟ್ಟೆ. ಈ ಸಿಹಿ ಅನುಭವ ಎಂದೆಂದೂ ನನ್ನಲ್ಲಿ ಸವಿನೆನಪಾಗಿ ಉಳಿಯುವುದಂತು ನಿಜ.
ಪ್ರತಿಮಾ ಭಟ್
ದ್ವಿತೀಯ ಬಿಎ, ವಿವೇಕಾನಂದ ಪದವಿ ಕಾಲೇಜು, ಪುತ್ತೂರು.