ಮಹಾನಗರ: ಕಾಡಿನಲ್ಲಿ ಹುಲಿ ಗಣತಿ… ಆನೆ ಗಣತಿ ಕೇಳಿದ್ದೇವೆ. ಅದೇ ರೀತಿ ಸ್ಮಾರ್ಟ್ ಮಂಗಳೂರು ನಗರದಲ್ಲಿ ಮರ ಗಣತಿ ನಡೆಯುತ್ತಲಿದೆ!
ಮಂಗಳೂರು ನಗರ ಸ್ಮಾರ್ಟ್‌ಸಿಟಿಯಾಗಿ ಬೆಳೆ ಯುತ್ತಿದ್ದಂತೆ ಹಸುರು ಮಾಯವಾ ಗುತ್ತಿದೆ. ಕೆಲವೊಂದು ವಾರ್ಡ್‌ಗಳಲ್ಲಂತೂ ಶೇ.10ರಷ್ಟೂ ಹಸುರು ತುಂಬಿ ಕೊಂಡಿಲ್ಲ. ಹೀಗಿದ್ದಾಗ ಪಾಲಿಕೆ ವ್ಯಾಪ್ತಿಯ ಬೀದಿಗಳಲ್ಲಿ ಎಷ್ಟು ಮರಗಳಿವೆ ಎಂಬ ಮಾಹಿತಿ ಪಡೆಯುವ ಉದ್ದೇಶದಿಂದ ಮರ ಗಣತಿ ನಡೆಸಲಾಗುತ್ತಿದೆ.
ನಿಟ್ಟೆ ವಿ.ವಿ.ಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯ ಡಾ| ಸ್ಮಿತಾ ಹೆಗ್ಡೆ ಹಾಗೂ ಅವರ ತಂಡ ಈ ಗಣತಿಗೆ ಮುಂದಾಗಿದ್ದಾರೆ. ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲೂ ಗಣತಿ ನಡೆಸಲಾಗುತ್ತದೆ. ರಸ್ತೆ ಬದಿಗಳಲ್ಲಿರುವ ಮರಗಳ ಬಳಿ ತೆರಳಿ ಅದರ ಹೆಸರು, ಅದು ಎಷ್ಟು ಉದ್ದ ಇದೆ ಎಂದು ನಮೂದಿಸಿ ಲೊಕೇಶನ್ ಸಹಿತವಾಗಿ ಆ್ಯಪ್ ಮೂಲಕ ಜಿಯೋ ಟ್ಯಾಗ್ ಮಾಡಲಾಗುತ್ತದೆ.
ಜನವರಿಯಿಂದ ಈ ಗಣತಿ ಆರಂಭ ಗೊಂಡಿದ್ದು, ಜೂನ್ 5ರಂದು ಪೂರ್ಣ ಗೊಳ್ಳಲಿದೆ. ಈಗಾಗಲೇ ನಗರದ ಮಣ್ಣಗುಡ್ಡೆ, ನೆಹರೂ ಮೈದಾನ, ಹಂಪನಕಟ್ಟೆ, ಕಂಕನಾಡಿ, ಫಳ್ನೀರು, ಜ್ಯೋತಿ, ಬಲ್ಮಠ, ಕದ್ರಿ ಪಾರ್ಕ್ ಪ್ರದೇಶಗಳಲ್ಲಿ ಮರಗಳ ಗಣತಿ ನಡೆದಿದೆ. ಉಳಿದೆಡೆ ಇನ್ನಷ್ಟೇ ನಡೆಯಬೇಕಿದೆ. ಸದ್ಯ ಸುಮಾರು 3,000ಕ್ಕೂ ಮಿಕ್ಕಿ ಮರಗಳನ್ನು ಗುರುತಿಸಲಾಗಿದೆ. ಈಗ ರವಿವಾರ ಸಹಿ ತ ಸರಕಾರಿ ರಜಾ ದಿನಗಳಲ್ಲಿ ಗಣತಿ ನಡೆಯುತ್ತಿತ್ತು. ಮುಂದಿನ ದಿನಗಳಲ್ಲಿ ಪ್ರತೀ ದಿನ ಬೆಳಗ್ಗೆ ಗಣತಿ ಆರಂಭಿಸಲು ಈ ತಂಡ ಚಿಂತನೆ ನಡೆಸುತ್ತಿದೆ. ಇದಕ್ಕೆ ನಿಟ್ಟೆ ವಿ.ವಿ. ಸಹಕಾರ ನೀಡುತ್ತಿದೆ.
Related Articles
ಉದ್ದೇಶವೇನು?
ನಗರದಲ್ಲಿ ಎಷ್ಟು ಮರಗಳಿವೆ? ಎಂಬ ನಿಖರ ಮಾಹಿತಿ ಸ್ಥಳೀಯಾಡಳಿತದ ಬಳಿಯೂ ಇಲ್ಲ. ಈ ಸಂಶೋಧನೆಯ ಮೂಲಕ ಎಷ್ಟು ಮರಗಳಿವೆ ಎಂಬ ಬಗ್ಗೆ ಮಾಹಿತಿ ನೀಡುವ ಜತೆಗೆ ಜನರಲ್ಲಿ ಪರಿಸರಾಸಕ್ತಿ ಮೂಡಿಸುವುದು ಉದ್ದೇಶ. ಸಂಶೋಧನೆಯ ಆಧಾರದಲ್ಲಿ ಆಯಾ ವಾರ್ಡ್‌ಗಳಲ್ಲಿ ಗಿಡ ನೆಡಲು ಅನುಕೂಲ ವಾಗುತ್ತದೆ. ಮಂಗಳೂರಿನಲ್ಲಿರುವ ಹಸುರು ಹೊದಿಕೆಯ ಬಗ್ಗೆ 2016ರಲ್ಲಿ ಇದೇ ರೀತಿಯ ಸಂಶೋಧನೆಯನ್ನು ನಡೆಸಲಾಗಿತ್ತು. ಆ ವೇಳೆ ನಗರೀಕರಣದ ನಡುವೆ ನಗರದಲ್ಲಿ ಹಸುರು ಮರೆಯಾಗುತ್ತಿರುವುದು ಕಂಡು ಬಂತು. ನಗರದಲ್ಲಿ ಶೇ.33ರಷ್ಟು ಹಸುರು ಇರಬೇಕು. ಆದರೆ ನಗರದಲ್ಲಿ ಇದರ ಅರ್ಧದಷ್ಟೂ ಇಲ್ಲ. ನಗರದ ಬಂದರು ವಾರ್ಡ್‌ನಲ್ಲಿ ಶೇ.3.44 ಮತ್ತು ಸೆಂಟ್ರಲ್ ಮಾರ್ಕೆಟ್ ವಾರ್ಡ್‌ನಲ್ಲಿ ಶೇ.8.86ರಷ್ಟು ಕಡಿಮೆ ಪ್ರಮಾಣದಲ್ಲಿ ಹಸಿರು ಇರುವುದು ಕಂಡುಬಂದಿದೆ.
ಪಾಲಿಕೆಗೆ ವರದಿ
ನಾನು ಮತ್ತು ನಮ್ಮ ತಂಡ ನಗರದಲ್ಲಿ ಮರಗಳ ಗಣತಿ ನಡೆಸುತ್ತಿದ್ದೇವೆ. ಜನವರಿಯಿಂದ ಆರಂಭ ಗೊಂಡಿದ್ದು, ಜೂನ್ 5ರ ವಿಶ್ವ ಪರಿಸರ ದಿನದಂದು ಈ ಸಂಶೋ ಧನೆಯ ಮೊದಲ ಕರಡು ಪತ್ರಿ ಬಿಡುಗಡೆ ಮಾಡುತ್ತೇವೆ. ಆ ಸಮಗ್ರ ವರದಿಯನ್ನು ಮಂಗಳೂರು ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಕೆಲವೊಂದು ಕೈಗಾರಿಕೆಗಳಿಗೆ ಸಲ್ಲಿಕೆ ಮಾಡಲಿದ್ದೇವೆ.
– ಡಾ| ಸ್ಮಿತಾ ಹೆಗ್ಡೆ , ನಿಟ್ಟೆ ವಿ.ವಿ.ಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯ ಪ್ರೊಫೆಸರ್
- ನವೀನ್ ಭಟ್ ಇಳಂತಿಲ