Advertisement
“”ನಾನು ನಿನ್ನ ಮಗನನ್ನು ಮರಳಿಸುತ್ತೇನೆಯೆ ಇಲ್ಲವೆ?”ಆ ತಾಯಿ ಭಯದಿಂದ “”ಇಲ್ಲ” ಅಂದಳು. ಅವಳು ಹೇಳಿದ ಉತ್ತರ ಸರಿ ಎಂದಾದಲ್ಲಿ ಮೊಸಳೆ ಮಗುವನ್ನು ಹಿಂತಿರುಗಿಸಬೇಕು. ತಪ್ಪಾಗಿದ್ದರೆ, ಮೊಸಳೆಗೆ ಮಗುವನ್ನು ಮರಳಿಸುವ ಮನಸ್ಸು ಇದೆ ಎಂದಾಯಿತು. ಉತ್ತರ ತಪ್ಪು , ಹಾಗಾಗಿ ಮಗುವನ್ನು ಹಿಂದೆ ಕೊಡುವ ಹಾಗಿಲ್ಲ.
Related Articles
Advertisement
ಕಾಲೇಜ್ ಡೇಗೆ ಯಾವಾಗಲೂ ನಿರೂಪಣೆ ಮಾಡುತ್ತಿದ್ದವರು, ಯಾವಾಗಲೂ ಪ್ರಾರ್ಥನೆ ಹಾಡುತ್ತಿದ್ದವರು, ಎನ್‌ಎಸ್‌ಎಸ್‌ನಲ್ಲಿ ಗಟ್ಟಿ ದನಿ ತೆಗೆದು ಎಲ್ಲರ ಬಾಯಿ ಮುಚ್ಚಿಸುತ್ತಿದ್ದವರು, ಒಂದೇ ಒಂದು ಗಂಟೆಯಲ್ಲಿ ಅಷ್ಟು ದೊಡ್ಡ ರಂಗೋಲಿ ಹಾಕುತ್ತಿದ್ದವರು, ತರಗತಿಯಲ್ಲಿ ಎದ್ದು ನಿಂತು ಉತ್ತರ ಹೇಳುವ ಧೈರ್ಯವಿಲ್ಲದಿದ್ದರೂ ಚಕಚಕನೆ ಲೆಕ್ಕ ಮಾಡಿ ಬೆರಗು ಹುಟ್ಟಿಸುತ್ತಿದ್ದವರು, ಕಾಲೇಜಿನ ಕಾರ್ಯಕ್ರಮಕ್ಕೆ ಬೀದಿ ಬೀದಿ ಸುತ್ತಿ ಹಣ ಸಂಗ್ರಹಿಸಿ ತಂದವರು, ಐಸ್‌ಕ್ರೀಮ್ ತಿಂದು ರ್ಯಾಪರ್ ಕೆಳಗೆ ಹಾಕಿದವರನ್ನು ಕಂಡು ತಲೆ ಸರಿಯಿಲ್ಲವೇನ್ರಿ ಅಂತ ಗದರಿದವರು- ಬದುಕಿನ ಸಿಕ್ಕಿನಲ್ಲಿ ಸಿಕ್ಕಿಕೊಂಡು, ಸಿಕ್ಕಿದ ಅವಕಾಶವನ್ನು ಬಳಸುವ ಸಮಯ ಹಾಗೂ ಗಡಿದಾಟಿ ಹೊರಗೆ ಬರುವ ಧೈರ್ಯ ಇಲ್ಲದೆ ಎಲ್ಲಿ ಹೋಗುತ್ತಾರೊ! ಉದ್ಯೋಗ ಸಿಕ್ಕಿ- ತಿಂಗಳಿಗೆ ಹತ್ತು ಸಾವಿರ ಉಳಿಸಿದರೂ ವರ್ಷಕ್ಕೆ ಒಂದು ಲಕ್ಷ ಇಪ್ಪತ್ತು ಸಾವಿರ ಅಷ್ಟೇ-ಆಗೋದು ಅನ್ನುವ ಲೆಕ್ಕದಲ್ಲಿ ಕಳೆದು ಹೋಗುತ್ತಾರೆ, ಇಲ್ಲವೇ ಮದುವೆಯಾಗಿ ಮನೆಕೆಲಸ ಹಾಗೂ ಮಕ್ಕಳ ಮನೆಕೆಲಸದಲ್ಲಿ ಕಳೆದುಹೋಗುತ್ತಾರೆ !
ನಮ್ಮ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮೂರು ದಿನ ಸಂಭ್ರಮ ಎಂಬ ಹೆಸರಲ್ಲಿ ಪ್ರತಿಭಾ ಪ್ರದರ್ಶನ ವರ್ಷಕ್ಕೊಮ್ಮೆ ನಡೆಯುತ್ತದೆ. ಸಾಂಸ್ಕೃತಿಕ ಲೋಕವೇ ಸೃಷ್ಟಿಯಾಗುತ್ತದೆ ! ನಮ್ಮ ಕ್ಯಾಂಪಸ್‌ನಲ್ಲಿ ಎಂತೆಂಥ ಪ್ರತಿಭೆಗಳಿವೆ ಎಂದು ಆಶ್ಚರ್ಯ ಪಡುತ್ತಿರುವಂತೆಯೇ, ಮೂರು ದಿನಗಳ ಸಂಭ್ರಮ ಮುಗಿದು ಎಲ್ಲರೂ ಯೂನಿವರ್ಸಿಟಿಯ ದುಃಖದಲ್ಲಿ ಕಳೆದುಹೋಗುತ್ತಾರೆ. ಹಾಡು- ಕುಣಿತ- ನಾಟಕ ಹೀಗೆ ಲೆಕ್ಕಕ್ಕೆ ಸಿಗದಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೇನು, ಪಿ. ಜಿ. ಮುಗಿಯುತ್ತಿದ್ದಂತೆಯೇ ಕೆಲಸ ಸಿಗಲಿಲ್ಲ ಎಂಬ ಗೋಳು ಬಿಟ್ಟರೆ ಮತ್ತೇನೂ ಉಳಿಯುವುದಿಲ್ಲ. ಎರಡು ವರ್ಷಗಳ ಹಿಂದೆ ನಾನು ಡಿಗ್ರಿ ಮುಗಿಸಿದ್ದಾಗ ನನ್ನ ಗೆಳತಿಯರು ಅನೇಕರು ಉದ್ಯೋಗಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿದರೂ ಟ್ಯಾಲೆಂಟು ಬಿಡಲಾರೆವು ಅಂದದ್ದು ಉತ್ತರಕುಮಾರನ ಉತ್ಸಾಹದಲ್ಲಿ ಅಂತ ಈಗೀಗ ತಿಳಿಯುತ್ತಿದೆ. ನಾನೇನೋ ಎಮ್‌ಎಸ್‌ಸಿ ಸೇರಿದೆ. ಕ್ಯಾಂಪಸ್‌ನಲ್ಲಿ ಏನೇ ಕಾರ್ಯಕ್ರಮವಿದ್ದರೆ ತರಗತಿಗೆ ಬಂಕ್ ಹೊಡೆದು ಹೋಗುವಂಥ ಉತ್ಸಾಹ ಹಾಗೂ ಪ್ರೋತ್ಸಾಹ ಕಡಿಮೆ ಇದ್ದರೂ ಇಲ್ಲವೇ ಇಲ್ಲ ಅನ್ನುವ ಹಾಗಿಲ್ಲ. ಡಿಗ್ರಿಯಲ್ಲಿದ್ದಾಗ ಹಾಡು-ನಾಟಕ-ಆಟ ಅಂತ ಸಾಕಷ್ಟು ಕುಣಿಯುತ್ತಿದ್ದಾಗ ನಮ್ಮ ಶಿಕ್ಷಕರೆಲ್ಲರೂ “ನಿಮಗೆಲ್ಲಾ ಉತ್ತಮ ಭವಿಷ್ಯವಿದೆ’ ಅನ್ನುತ್ತಿದ್ದರು. ಈಗ ಉದ್ಯೊಗಕ್ಕೆ ಹೋಗುತ್ತಿರುವ ಅವರೆಲ್ಲರನ್ನು ಕಂಡಾಗ ಭವಿಷ್ಯ-ಮೊಸಳೆಯ ಹಾಗೆ ಸಿಕ್ಕಲ್ಲಿ ಸಿಕ್ಕಿ ಬಿದ್ದು ಮಗುವನ್ನು ಮರಳಿಸಿ-ಕೆಲಸದ ಆಫೀಸ್‌ನಲ್ಲಿ ಬಿದ್ದುಕೊಂಡಿದೆ ಅಂತನಿಸುತ್ತಿದೆ.
ಸಿಕ್ಕಿದ ಬೇಟೆಯನ್ನು ಹಿಡಿದುಕೊಂಡು ಹೋಗುವ ಬದಲು ಪ್ರಶ್ನೆ ಕೇಳುವ ಅಧಿಕಪ್ರಸಂಗ ಮೊಸಳೆಗೆ ಯಾಕೆ ಬೇಕಿತ್ತು ಅಂತ ಕೇಳ್ಳೋದು, ಒಳಗಿರುವ ಕವಿ- ಕಲಾವಿದರನ್ನ ಮರೆತು ಬದುಕುತ್ತಿರುವವರು “ಇಂಥ ಆಸೆಗಳೆಲ್ಲ ಯಾಕೆ ಹುಟ್ಟುತ್ತವೆ? ಇದರ ಅರ್ಥವೇನು?’ ಅಂತ ಕೇಳಿದ ಹಾಗೆ-ಕೇಳುವುದೂ ತಪ್ಪು, ಉತ್ತರ ದಕ್ಕುವುದೂ ಕಷ್ಟ! ಬದುಕಿನ ಪ್ರತಿ ನಡೆಗೂ ಅರ್ಥ ಹುಡುಕಲೇ ಬೇಕಾಗಿಲ್ಲ! ಅರ್ಥ ಹುಡುಕಿದಷ್ಟೂ ಸಿಕ್ಕು ಮತ್ತಷ್ಟು ಸಿಕ್ಕಾಗುತ್ತದೆಯೇನೋ!
ಯಶಸ್ವಿನಿ ಕದ್ರಿ