ಲಿಂಗಸುಗೂರು: ಮೆಣಸಿನಕಾಯಿ ಖರೀದಿಸಿದ ವ್ಯಾಪಾರಿಯೊಬ್ಬ ರೈತರಿಗೆ ಹಣ ನೀಡದೇ ನಾಪತ್ತೆಯಾದ ಘಟನೆ ತಾಲೂಕಿನ ರೋಡಲಬಂಡಾ (ಯುಕೆಪಿ) ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರದ ವ್ಯಾಪಾರಿ ಜೀತೇಂದ್ರ ಚವ್ಹಾಣ ಎಂಬುವರು 2017ರ ಜೂ.1ರಂದು ತಾಲೂಕಿನ ರೋಡಲಬಂಡಾ (ಯುಕೆಪಿ) ಗ್ರಾಮಕ್ಕೆ ಬಂದು ಇಲ್ಲಿನ ರೈತರಾದ ದೌವಲಸಾಬ ಹುಡೇದ ಎಂಬುವರಿಂದ 106ಕ್ಕೂ ಅಧಿ ಕ ಕ್ವಿಂಟಲ್ ಮೆಣಸಿನಕಾಯಿ ಖರೀದಿಸಿದ್ದಾರೆ. ಪ್ರತಿ ಕ್ವಿಂಟಲ್‌ಗೆ 12,200 ರೂ.ನಂತೆ ಖರೀದಿಸಿ ಅದರ 16.17 ಲಕ್ಷ ರೂ.ಗಳಿಗೆ ಎರಡು ಚೆಕ್ ನೀಡಿದ್ದಾರೆ. ಆದರೆ ಚೆಕ್ ಬೌನ್ಸ್ ಆಗಿದ್ದು, ಈ ಬಗ್ಗೆ ವ್ಯಾಪಾರಿಗೆ ತಿಳಿಸಿದರೂ ಇವತ್ತು- ನಾಳೆ ಎನ್ನುತ್ತಲೇ ನಾಪತ್ತೆಯಾಗಿದ್ದಾನೆ.
ಕಷ್ಟಪಟ್ಟು ಬೆಳೆದ ರೈತರಿಗೆ ಇತ್ತ ಹಣವೂ ಇಲ್ಲ, ಉತ್ಪನ್ನವೂ ಇಲ್ಲದೆ ಕಂಗಾಲಾಗಿದ್ದಾರೆ. ಮಧ್ಯವರ್ತಿಯಾಗಿದ್ದ ವ್ಯಕ್ತಿಯೂ ಕೈಚೆಲ್ಲಿದ್ದರಿಂದ ರೈತರು ಮತ್ತಷ್ಟು ಹೈರಾಣಾಗಿದ್ದಾರೆ. ಬ್ಯಾಡಗಿಯಲ್ಲಿ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹಾಗೂ ಸ್ಥಳೀಯವಾಗಿ ವ್ಯಾಪಾರಿಗಳು ಇದ್ದರೂ ಹೆಚ್ಚಿನ ಬೆಲೆ ಆಸೆಗೆ ಅಕ್ಕಪಕ್ಕದ ರಾಜ್ಯದವರ ಮೋಸದ ಬಲೆಯಲ್ಲಿ ರೈತರು ಸಿಲುಕುತ್ತಿದ್ದಾರೆ.
ಕೊಲ್ಹಾಪುರದ ಜೀತೇಂದ್ರ ಚವ್ಹಾಣ ಎಂಬುವರು ಗ್ರಾಮಕ್ಕೆ ಬಂದು ನಮ್ಮ ಮೆಣಸಿನಕಾಯಿ ಖರೀದಿಸಿ ಹಣ ನೀಡದೇ ಚೆಕ್ ನೀಡಿದ್ದರಿಂದ ಆ ಚೆಕ್‌ಗಳು ಬೌನ್ಸ್ ಆಗಿವೆ. ಇದೀಗ ಆ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಮುಂದೆ ಏನು ಮಾಡಬೇಕೆನ್ನುವುದೇ ತಿಳಿಯುತ್ತಿಲ್ಲ.
●ರಿಯಾಜ್, ಖಾಸೀಮ್, ರೈತ ದೌವಲಸಾಬ ಪುತ್ರರು, ರೋಡಲಬಂಡಾ (ಯುಕೆಪಿ)