Advertisement

ರಾಜ್ಯದಲ್ಲಿ ಒಟ್ಟು 5.03 ಕೋಟಿ ಮತದಾರರು 

12:20 AM Mar 11, 2019 | Team Udayavani |

ಬೆಂಗಳೂರು: 2019ರ ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟಗೊಂಡಿದ್ದು ತಕ್ಷಣದಿಂದಲೇ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ತಿಳಿಸಿದ್ದಾರೆ.

Advertisement

ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಗೆ ಸಂಬಂಧಿಸಿದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

5 ಕೋಟಿ ಮತದಾರರು: 2019ರ ಜ. 16ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯಂತೆ ರಾಜ್ಯದಲ್ಲಿ 5.03 ಕೋಟಿ ಮತದಾರರಿದ್ದು, 28 ಕ್ಷೇತ್ರಗಳಲ್ಲಿ 58,186 ಮತಗಟ್ಟೆಗಳಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಭಾವಚಿತ್ರ ಸಹಿತ ಮತದಾರ ಪಟ್ಟಿಯ ಕಾರ್ಯ ಶೇ.99.99ರಷ್ಟು ಪೂರ್ಣಗೊಂಡಿದೆ. ಎಪಿಕ್‌ ಕಾರ್ಡ್‌ ವಿತರಣೆ ಶೇ.100ರಷ್ಟು ಆಗಿದೆ.

ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕಸೇರ್ಪಡೆಯಾದವರಿಗೆ ಎಪಿಕ್‌ ಕಾರ್ಡ್‌ ಕೊಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 14,15,965 ಎಪಿಕ್‌ ಕಾರ್ಡ್‌ ತಯಾರಿಸಿ, 10,62,398 ಎಪಿಕ್‌ಕಾರ್ಡ್‌ಗಳನ್ನು ವಿತರಿಸಲಾಗಿದ್ದು, 3,53,558 ಎಪಿಕ್‌ ಕಾರ್ಡ್‌ಗಳನ್ನು ವಿತರಿಸಬೇಕಾಗಿದೆ.

ರಾಜ್ಯದಲ್ಲಿ ಇಲ್ಲಿವರೆಗೆ 4 ಲಕ್ಷ ವಿಕಲಚೇತನ ಮತದಾರರನ್ನು ಗುರುತಿಸಲಾಗಿದ್ದು, ಅವರಿಗಾಗಿ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯಗಳನ್ನು ಮಾಡಲಾಗುವುದು. ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವ 600 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಅಲ್ಲದೇ ವಿಕಲಚೇತನರು ನಿರ್ವಹಿಸುವ 28 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮತದಾರರಿಗೆ ಅಗತ್ಯ ಮಾಹಿತಿ ನೀಡಲು “ಓಟರ್‌ ಫೆಸಿಲಿಟೇಷನ್‌ ಪೋಸ್ಟರ್‌’ ಸಿದ್ಧಪಡಿಸಲಾಗಿದೆ. ಎಲ್ಲ ಮತದಾರರಿಗೂ “ಓಟರ್‌ ಅಸಿಸ್ಟೆಂಟ್‌ ಬೂತ್‌’ಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಜೀವ ಕುಮಾರ್‌ ಮಾಹಿತಿ ನೀಡಿದರು.

Advertisement

ಸಾಲು ರಜೆ: ಮತದಾನ ಶೇ. 100 ಡೌಟು ಬೆಂಗಳೂರು: ದಕ್ಷಿಣ ಭಾಗದ ಚುನಾವಣೆ ಏ.18ಕ್ಕೆ ನಡೆಯಲಿದ್ದು, ಬೆಂಗಳೂರು ಮಹಾನಗರದ 3 ಕ್ಷೇತ್ರಗಳಲ್ಲೂ ಈ ಬಾರಿಯೂ ಚುನಾವಣೆ ಪ್ರಮಾಣಕಡಿಮೆಯಾಗುವ ಸಾಧ್ಯತೆ ಇದೆ. ಕಾರಣ, ಏ.17ರಿಂದ 21ರ (ಏ.20 ಹೊರತುಪಡಿಸಿ)ವರೆಗೂ ಸರ್ಕಾರ ರಜೆ ಇರಲಿದೆ. ಏ.17ರಂದು ಮಹಾವೀರ ಜಯಂತಿ, ಏ.18 ಚುನಾವಣೆ, ಏ.19 ಗುಡ್‌ಫ್ರೈಡೆ(ಶುಭ ಶುಕ್ರವಾರ), ಏ.20 ಶನಿವಾರ(ಸರ್ಕಾರಿ ರಜೆ ಇಲ್ಲ), ಏ.21 ಭಾನುವಾರ ಹೀಗೆ ಸಾಲು ರಜೆ ಇರುವುದರಿಂದ ಬಹುತೇಕರು ಈಗಿಂದಲೇ ಪಿಕ್‌ನಿಕ್‌, ಮಿನಿ ಪ್ರವಾಸ,ಔಟಿಂಗ್‌ಗೆ ಪ್ಲಾನ್‌ ಮಾಡಿಕೊಂಡಿರುತ್ತಾರೆ. ಶೇ.100ರಷ್ಟು ಮತದಾನ ಆಗಬೇಕು ಎಂದು ಚುನಾವಣಾ ಆಯೋಗ ಸಹಿತವಾಗಿ ವಿವಿಧ ಸಂಘ ಸಂಸ್ಥೆಗಳು ಹೋರಾಟ ಮಾಡುತ್ತಿವೆ. ಆದರೆ, ಸಾಲು ಸಾಲು ರಜೆ ಇರುವುದರಿಂದ ಬೆಂಗಳೂರು ಮತದಾರರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಒಂದೆರೆಡು ದಿನ ರಜೆ ಇದ್ದಾಗಲೇ ಬೆಂಗಳೂರಿನ ಜನ ಮತಗಟ್ಟೆಗೆ ಬಂದು ಓಟು ಮಾಡಿಲ್ಲ. ಇನ್ನು ಐದು ದಿನ ರಜೆ ಸಿಕ್ಕರೇ ಮತಗಟ್ಟೆಗೆ ಬರುವ ಸಾಧ್ಯತೆ ಕಡಿಮೆ ಇದೆ.

ಸಿ-ವಿಜಿಲ್‌ ಆ್ಯಪ್‌
ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಲು ಇದೇ ಮೊದಲ ಬಾರಿಗೆ “ಸಿ-ವಿಜಿಲ್‌” ಎಂಬ ನೂತನ ಆ್ಯಪ್‌ ಸಿದ್ದಪಡಿಸಲಾಗಿದೆ. 2018ರ ವಿಧಾನಸಭೆ ಚುನಾ ವಣೆಯಲ್ಲಿ ಬೆಂಗಳೂರು ನಗರದಲ್ಲಿ ಈ ಆ್ಯಪ್‌ ಅನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. ಚುನಾವಣಾ ಅಕ್ರಮಗಳು, ಮತ ದಾರರಿಗೆ ಆಮಿಷ ಇತ್ಯಾದಿ ವಿಷಯಗಳ ಬಗ್ಗೆ ಸಾಮಾನ್ಯ ನಾಗರಿಕರು ಆಡಿಯೋ, ವಿಡಿಯೋ ಹಾಗೂ ಫೋಟೋಗಳನ್ನು ತೆಗೆದು ಈ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿ ದೂರು ಕೊಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next